ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿಯಲ್ಲಿ ಕುಡಿಯುವ ನೀರು ಹಾಗೂ ಕುಳಿತುಕೊಳ್ಳಲು ಸಮರ್ಪಕ ಆಸನಗಳ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಒಂದೇ ಸೂರಿನಡಿ ತಹಶೀಲ್ದಾರ್ ಕಚೇರಿ, ಸಬ್ ರಿಜಿಸ್ಟ್ರರ್ ಕಚೇರಿ, ಜನನ ಮತ್ತು ಮರಣ ನೋಂದಣಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಆಹಾರ, ಅಬಕಾರಿ ಕಂದಾಯ ಇಲಾಖೆ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇರಿದಂತೆ ಹಲವು ಇಲಾಖೆಗಳು ಕಾರ್ಯನಿರ್ವಸುತ್ತಿವೆ. ಇಲ್ಲಿಗೆ ನಿತ್ಯ ನೂರಾರು ಮಂದಿ ಆಗಮಿಸುತ್ತಾರೆ. ಹೀಗಿದ್ದರೂ ಸಹ ಸಮರ್ಪಕ ಕುಡಿಯುವ ನೀರು ಹಾಗೂ ಆಸನಗಳ ವ್ಯವಸ್ಥೆ ಒದಗಿಸಲು ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ.
ಬೇಸಿಗೆಯ ಬಿಸಿ ತಾಲೂಕಿನಲ್ಲಿ ಹೆಚ್ಚಿದ್ದು, ದೂರದ ಊರುಗಳಿಂದ ಅಧಿಕ ಮಂದಿ ವಯಸ್ಸಾದವರು ದಣಿದು ತಾಲೂಕು ಕಚೇರಿಗೆ ಬರುತ್ತಾರೆ. ಇವರಿಗೆ ಕುಳಿತುಕೊಳ್ಳಲು ಕೇವಲ ಬೆರಳೆಣಿಕೆಯಷ್ಟು ಆಸನಗಳ ವ್ಯವಸ್ಥೆ ಇದೆ. ಹೆಚ್ಚಿನ ಜನರು ಆಗಮಿಸಿದರೆ ನೆಲದ ಮೇಲೆಯೇ ಕುಳಿತುಕೊಳ್ಳಬೇಕಾಗಿದೆ.
ಇನ್ನು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಯಾವುದೇ ಇಲಾಖೆಯವರು ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಯಾವುದೇ ರೀತಿಯ ಕೆಲಸಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ದಿನಕ್ಕೊಂದು ಸಬೂಬು ಹೇಳಿ ಮುಂದೂಡುತ್ತಿದ್ದಾರೆ. ಜೊತೆಗೆ ಕಂಪ್ಯೂಟರ್ ಸರ್ವರ್ ಸಿಗುತ್ತಿಲ್ಲ ಎನ್ನುತ್ತಾರೆ.
ಈ ಬಗ್ಗೆ ಪ್ರಶ್ನೆ ಮಾಡಿದರೆ ದಾಖಲೆಗಳು ಸರಿಯಾಗಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಗಿರೀಶ್ ದೂರಿದರು. ತಂತಿ ಬೆಲಿ ತೆರವಿಗೆ ಒತ್ತಾಯ: ತಾಲೂಕು ಕಚೇರಿಯ ಮುಂದಿನ ಎರಡು ಬದಿಯಲ್ಲಿ ಈ ಹಿಂದೆ ಇದ್ದ ತಹಶೀಲ್ದಾರ್ ನಂಜುಂಡಯ್ಯ ಅವೈಜ್ಞಾನಿಕವಾಗಿ ತಂತಿ ಬೇಲಿ ನಿರ್ಮಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲದಾಗಿದ್ದು, ಕೂಡಲೇ ಇದನ್ನು ತೆರವುಗೊಳಿಸಬೇಕೆಂದು ಉತ್ತಂಗೆರೆ ಶಿವಮೂರ್ತಿ ಒತ್ತಾಯಿಸಿದರು.
ಬಸವರಾಜು ಎಸ್.ಹಂಗಳ