Advertisement

‘ನೀರಿನ ಅಭಾವ ತಲೆದೋರಿರುವುದು ಆತಂಕಕಾರಿ’

11:31 AM Jun 21, 2019 | Suhan S |

ಕಾರ್ಕಳ, ಜೂ. 20: ನೀರು ಪೂರೈಕೆ, ಪರಿಸರ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಸಮಾಜದ ಬಹುದೊಡ್ಡ ಸವಾಲುಗಳಾಗಿದ್ದು, ಇವುಗಳಿಗೆ ಪರಿಹಾರ ಕಂಡು ಕೊಳ್ಳು ವಲ್ಲಿ ಸರಕಾರದ ಜವಬ್ದಾರಿಗಿಂತ ನಮ್ಮ ಕರ್ತವ್ಯವೇ ಹೆಚ್ಚಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್‌ ಅವರು ಅಭಿಪ್ರಾಯಪಟ್ಟರು.

Advertisement

ಜೂ. 20ರಂದು ಕುಕ್ಕುಂದೂರು ಗ್ರಾಮ ಪಂಚಾಯತ್‌ ಮೈದಾನದಲ್ಲಿ ಅರಣ್ಯ ಇಲಾಖೆ ಕಾರ್ಕಳ, ತಾಲೂಕು ಪಂಚಾಯತ್‌, ಪುರಸಭೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಪರಿಸರ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮೃದ್ಧ ಕಾರ್ಕಳದ ಕಲ್ಪನೆ:

ಕಳೆದ ಮೂರು ವರ್ಷಗಳಿಂದ ಪರಿಸರ ಉತ್ಸವದ ಹೆಸರಿನಲ್ಲಿ ತಾಲೂಕಿನಾದ್ಯಂತ ಗಿಡ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಸ್ವಚ್ಛ, ಸಮೃದ್ಧ, ಹಸಿರು ಕಾರ್ಕಳದ ಕಲ್ಪನೆಯನ್ನು ಸಾಕಾರಗೊಳಿಸುತ್ತ ಸಾಗುತ್ತಿದ್ದೇವೆ. ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶವಾಗಿದ್ದರೂ ಈ ವರ್ಷ ಕಾರ್ಕಳದಲ್ಲಿ ನೀರಿನ ಅಭಾವ ತಲೆದೋರಿರುವುದು ಆತಂಕಕಾರಿ ವಿಚಾರ. ಭವಿಷ್ಯದಲ್ಲಿ ಇಂತಹ ಸಮಸ್ಯೆ ಬರಬಾರದು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆಯಿಟ್ಟಿದ್ದು, ಗ್ರಾಮ ಪಂಚಾಯತ್‌, ವಿವಿಧ ಸಂಘ-ಸಂಸ್ಥೆ, ವಿದ್ಯಾರ್ಥಿಗಳ ಸೇರಿದಂತೆ ಸರ್ವರ ಸಹಕಾರದೊಂದಿಗೆ ಗಿಡ ನೆಡಲಾಗುತ್ತಿದೆ ಎಂದು ಶಾಸಕರು ಹೇಳಿದರು.

ವಿದ್ಯಾರ್ಥಿಗಳಲ್ಲಿ ಕಾಳಜಿ ಮೂಡಿಸುತ್ತಿದೆ:

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಕಾರ್ಕಳದಲ್ಲಿ ಈಗಾಗಲೇ ಹಲವಾರು ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಕೆರೆಗಳ ಹೂಳೆತ್ತುವ ಕಾರ್ಯವೂ ನಡೆ ಯುತ್ತಿದೆ. ಶಾಸಕರ ನೇತೃತ್ವದಲ್ಲಿ ಪರಿಸರ ಉತ್ಸವದಂತ ವಿನೂತನ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತಾದ ಕಾಳಜಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದರು.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ದಿನೇಶ್‌, ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ, ಎಪಿಎಂಸಿ ಅಧ್ಯಕ್ಷ ಜಯವರ್ಮ ಜೈನ್‌, ಜಿಲ್ಲಾ ಪಂಚಾಯತ್‌ ಸದಸ್ಯರಾದ ಉದಯ ಎಸ್‌. ಕೋಟ್ಯಾನ್‌, ಸುಮಿತ್‌ ಶೆಟ್ಟಿ, ರೇಷ್ಮಾ ಉದಯ್‌ ಕುಮಾರ್‌, ದಿವ್ಯಾ ಗಿರೀಶ್‌ ಅಮೀನ್‌, ಜ್ಯೋತಿ ಹರೀಶ್‌, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೇ| ಹರ್ಷ ಸ್ವಾಗತಿಸಿ, ಯೋಗೀಶ್‌ ಕಿಣಿ ಪ್ರಾರ್ಥಿಸಿದರು. ನಲ್ಲೂರು ಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು. ನಲ್ಲೂರು ಶಾಲಾ ಶಿಕ್ಷಕ ನಾಗೇಶ್‌ ನಿರೂಪಿಸಿ, ಕುಕ್ಕುಂದೂರು ಗ್ರಾ.ಪಂ. ಉಪಾಧ್ಯಕ್ಷ ರಾಜೇಶ್‌ ರಾವ್‌ ವಂದಿಸಿದರು.

ಸಾಲು ಮರದ ತಿಮ್ಮಕ್ಕ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ತಾಲೂಕಿನ ಬಹುತೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿಡಗಳನ್ನು ಪಡೆದಿರುವುದು ವಿಶೇಷವಾಗಿತ್ತು.

ಸುಮಾರು 10 ಸಾವಿರ ಗಿಡಗಳನ್ನು ತಾಲೂಕಿನ 34 ಗ್ರಾಮ ಪಂಚಾಯತ್‌ಗಳಿಗೆ ನೀಡಲಾಗಿದೆ. ಗಿಡ ಪಡೆಯುವ ಉತ್ಸಾಹ ಬೆಳೆಸುವಲ್ಲೂ ಇರಬೇಕೆನ್ನುವ ನಿಟ್ಟಿನಲ್ಲಿ ಉತ್ತಮವಾಗಿ ಗಿಡ ಬೆಳೆಸಿದ ಗ್ರಾಮ ಪಂಚಾಯತ್‌ ಅನ್ನು ಗುರುತಿಸಿ ಬಹುಮಾನ ನೀಡಲಾಗುವುದು ಎಂದು ಶಾಸಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next