Advertisement

ಸೇದೋಬಾವಿ, ಕೆರೆ ಹೊಂಡದ ನೀರೇ ಆಧಾರ

12:10 PM Apr 14, 2019 | keerthan |

ಮುಳಬಾಗಿಲು: ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸಲು ಜಿಲ್ಲಾಡಳಿತ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗಳಲ್ಲಿ ಹೇಳುತ್ತಿದ್ದರಾದ್ರೂ ನಗರದ ಜನ ನೀರಿಗೆ ಪರದಾಡುವುದು ತಪ್ಪಿಲ್ಲ. ಇದು ತಾಲೂಕು ಆಡಳಿತ ಮತ್ತು ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

Advertisement

ಮುಳಬಾಗಿಲು ನಗರಸಭೆ 27 ವಾರ್ಡ್‌ಗಳಲ್ಲಿ 50 ಸಾವಿರ ಜನಸಂಖ್ಯೆ ಇದೆ. ಇತ್ತೀಚಿಗೆ ನಗರಸಭೆಗೆ ಸೇರಿದ 47 ಗ್ರಾಮಗಳು ಇನ್ನೂ ಗ್ರಾಪಂ ನಿರ್ವಹಣೆಯಲ್ಲೇ ಇವೆ. ಇಂದಿಗೂ ಜನರು ಕುಡಿಯುವ ನೀರು, ಮನೆ, ರಸ್ತೆ ಚರಂಡಿ ಹೀಗೆ
ಮೂಲ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಕುರುಬರಪೇಟೆ, ನೂಗಲಬಂಡೆ ಸೇರಿ ಹಲವು ವಾಡ್‌ ಗಳಲ್ಲಿ ಚುನಾವಣೆ ವೇಳೆ ಹಗಲು ರಾತ್ರಿ ಟ್ಯಾಂಕರ್‌ ನೀರು ಪೂರೈಸಿದ ಜನಪ್ರತಿನಿಧಿಗಳು, ಗೆದ್ದ ನಂತರ ಸ್ವಹಿತ ಕಾಪಾಡಿಕೊಳ್ಳುವುದರಲ್ಲೇ ಕಾಲ ಕಳೆಯುತ್ತಿದ್ದು, ಜನ ಈಗ ನೀರಿಗಾಗಿ ಕೆರೆ, ಖಾಸಗಿ ಬೋರ್‌ವೆಲ್‌ ಳಿಗೆ ಬಿಂದಿಗೆ ಹಿಡಿದು ಅಲೆಯುವಂತಾಗಿದೆ.

ವಾರಕ್ಕೊಮ್ಮೆ ನೀರು: ಕುರುಬರಪೇಟೆ, ನೂಗಲಬಂಡೆ 13, 14, 15, 18ನೇ ವಾರ್ಡ್‌ಗಳಲ್ಲಿ ನೀರಿಗೆ ಹಾಹಾ ಕಾರ ಇದೆ. ಬಿರು ಬೇಸಿಗೆಯಲ್ಲಿ ಜನ ಸಾಮಾನ್ಯರು ನೀರಿಗಾಗಿ ಪರದಾಡುತ್ತಿದ್ದಾರೆ, ವರ್ಷದಿಂದ 3 ದಿನಕ್ಕೊಮ್ಮೆ ಬರುತ್ತಿದ್ದ ನೀರು ಈಗ ವಾರಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಆ ನೀರನ್ನೂ ಕೆಲ ಶ್ರೀಮಂತರು ಅಕ್ರಮವಾಗಿ ಸಂಪ್‌ಗ್ಳಿಗೆ ಹರಿಸಿಕೊಳ್ಳುತ್ತಿದ್ದು, ಬೀದಿ ನಲ್ಲಿ, ಬಡವರ ಮನೆಗೆ ನೀರು ಹರಿಯದೇ ಕೆರೆ ಹೊಂಡದಲ್ಲಿನ ನೀರನ್ನು ಬಳಸುವಂತಾಗಿದೆ. ನಗರಸಭೆ ಸದಸ್ಯರ ಅಣತಿಯಂತೆ ಟ್ಯಾಂಕರ್‌ ನೀರು ಬಂದರೂ ಉಳ್ಳವರ ಮನೆ ಬಾಗಿಲಲ್ಲಿ ನಿಲ್ಲಿಸಿ ಸಂಪ್‌ ತುಂಬಿಸಿ ಉಳಿದ ಸ್ವಲ್ಪ ನೀರನ್ನು ಒಂದೆರಡ ಬಡವರ ಬಿಂದಿಗೆ ತುಂಬಿಸಿ ನೀರು ಸರಬರಾಜು ಮಾಡಿದೆ ಎಂದು ಲೆಕ್ಕ ಬರೆದುಕೊಂಡು ಸುಮ್ಮನಾಗುತ್ತಾರೆ. ಇನ್ನು 6 ತಿಂಗಳ ಒಳಗೆ ನಗರಸಭೆ ಚುನಾವಣೆ ಘೋಷಣೆಯಾಗುತ್ತದೆ ಎಂಬ ಸುದ್ದಿ ಹಬ್ಬಿರುವ ಕಾರಣ ಜನಪ್ರತಿನಿಧಿಗಳು ಪೈಪ್‌ಲೈನ್‌ ಮೂಲಕ ನೀರು ಪೂರೈಕೆಗೆ ಕಡಿವಾಣ ಹಾಕಿಸಿ, ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಾ, ಓಟ್‌ಗಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಕೆಲವೊಂದು ವಾರ್ಡ್‌ಗಳಲ್ಲಿ ನೀರು ಪೂರೈಕೆ ಮಾಡಿದ್ದರೂ ಈ ಕುರುಬರಪೇಟೆಯ ವಾರ್ಡ್‌ ನಂಬರ್‌ 13, 14, 15, 18ರಲ್ಲಿ ನಾಮ್‌ ಕೇವಾಸ್ತೆಗೆ ನೀರಿನ ಟ್ಯಾಂಕರ್‌ ತಂದು ಸುಮ್ಮನಾಗಿದ್ದಾರೆ.

ಬಿಂದಿಗೆ ನೀರಿಗೆ 10 ರೂ.: ಬಡಜನರು ಪ್ರತಿ ಬಿಂದಿಗೆಗೆ 10 ರೂ. ಕುಡಿಯುವ ನೀರು ಖರೀದಿಸುತ್ತಿದ್ದಾರೆ. ಇನ್ನು ಸ್ವಂತ ಬೋರ್‌ವೆಲ್‌ ಇರುವವರು ಪ್ರತಿ ಬಿಂದಿಗೆ ನೀರಿಗೆ 2 ರೂ. ಪಡೆಯುತ್ತಿದ್ದಾರೆ. ದುಡ್ಡ ಇಲ್ಲದವರು ಬೆಟ್ಟದ ತಪ್ಪಲಿನ ವೇಣುಗೋಪಾಲಸ್ವಾಮಿ ದೇಗುಲದ ಬಳಿ ಇರುವ ಸೇದು ಬಾವಿಯಿಂದ ನೀರು ತರುತ್ತಾರೆ, ಅದರಲ್ಲಿಯೂ ನೀರು ಕಡಿಮೆಯಾಗಿರುವ ಕಾರಣ ಇರುವ ನೀರು ಸೇದಲು ಪೈಪೋಟಿಗೆ ಬೀಳುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ವಾರ್ಡ್‌ ಗಳಲ್ಲಿ ಟ್ಯಾಂಕರ್‌ ಮೂಲಕ ತುರ್ತಾಗಿ ಪೂರೈಕೆ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತೊಂದರೆಯಾಗದಂತೆ ಬರ ನಿರ್ವಹಣೆ ಮಾಡುವುದಾಗಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಇತ್ತೀಚಿಗೆ ತಾಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಆದರೆ, ನಗರದಲ್ಲಿ ನೀರಿಗೆ ಹಾಹಾಕಾರ ಇದ್ದರೂ ಅದನ್ನು ನಿರ್ವಹಣೆ ಮಾಡುವಲ್ಲಿ ಸ್ಥಳೀಯ ಆಡಳಿತ ವಿಫ‌ಲವಾಗಿದೆ ಎಂಬುದಕ್ಕೆ ಕುರುಬರಪೇಟೆ ಕೆರೆಯಲ್ಲಿನ ನೀರು ತರುತ್ತಿರುವ ಜನರೇ ಸಾಕ್ಷಿ. ಕೂಡಲೇ ಡೀಸಿ ಈ ಕಡೆ ಗಮನ ಹರಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next