ಪಣಜಿ: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಹೈಡ್ರೋಲಾಜಿ ಶಾಸ್ತ್ರಜ್ಞ ಡಾ. ಗೋಪಾಲಕೃಷ್ಣನ್ ರವರ ನೇತೃತ್ವದ ತಂಡವು ಮಹದಾಯಿ ಉಪನದಿಗಳ ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕೇಂದ್ರ ಜಲಸಂಪನ್ಮೂಲ ಮಂತ್ರಾಲಯಕ್ಕೆ ಪತ್ರ ಬರೆದು ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿದ್ದರಿಂದ ಗೋವಾದ ಪರಿಸರದ ಮೇಲೆ ಧಕ್ಕೆಯುಂಟಾಗಲಿದೆ ಎಂಬ ಭೀತಿ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಖಾವತ್ ರವರು ಐಐಎಚ್‍ನ ಶಾಸ್ತ್ರಜ್ಞರನ್ನು ನಿಯುಕ್ತಿಗೊಳಿಸಿದ್ದರು.
ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಈ ಶಾಸ್ತ್ರಜ್ಞರು ಗೋವಾಕ್ಕೆ ಭೇಟಿ ನೀಡಿ ಮಹದಾಯಿ ನದಿ ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದರು. ಆದರೆ ಬೇಸಿಗೆಯ ಸಂದರ್ಭದಲ್ಲಿ ಇಲ್ಲಿನ ನೀರು ಸಂಗ್ರಹಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಮಹದಾಯಿ ನದಿಯ ಉಪ ನದಿಗಳಿಂದ ಮತ್ತೆ ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಶಾಸ್ತ್ರಜ್ಞ ಡಾ. ಗೋಪಾಲಕೃಷ್ಣನ್ ರವರೊಂದಿಗೆ ಗೋವಾ ರಾಜ್ಯ ಜಲಸಂಪನ್ಮೂಲ ಖಾತೆಯ ಎಂಜಿನೀಯರ್ ದಿಲೀಪ ನಾಯ್ಕ, ಆಗ್ರೆಲೊ ಫರ್ನಾಂಡಿಸ್ ಉಪಸ್ಥಿತರಿದ್ದರು.
ಶಾಸ್ತ್ರಜ್ಞ ಡಾ. ಗೋಪಾಲಕೃಷ್ಣನ್ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿ- ಮಹದಾಯಿ ನದಿಯ ಒಟ್ಟೂ 13 ವಿವಿಧ ಸ್ಥಳಗಳಲ್ಲಿ ನೀರಿನ ಸ್ಯಾಂಪಲ್ ಸಂಗ್ರಹಿಸಲಾಗಿದೆ. ನಾವು ಬೇಸಿಗೆ ಮತ್ತು ಮಳೆಗಾಲ ಈ ಎರಡೂ ಹಂಗಾಮಿನ ನೀರನ್ನು ಸಂಗ್ರಹಿಸಿದ್ದೇವೆ. ಈ ನೀರಿನ ತಪಾಸಣಾ ವರದಿಯನ್ನು ಸಿದ್ಧಪಡಿಸಿ ವರದಿಯನ್ನು ಕೇಂದ್ರ ಜಲಸಂಪನ್ಮೂಲ ಮಂತ್ರಾಲಯಕ್ಕೆ ಸಲ್ಲಿಸಲಾಗುವುದು ಎಂಬ ಮಾಹಿತಿ ನೀಡಿದರು.
ಮಹದಾಯಿ ನದಿ ನೀರನ್ನು ಕರ್ನಾಟಕ ತಿರುಗಿಸಿದ ಪರಿಣಾಮ ಗೋವಾದ ಮೇಲಾಗಲಿದೆ…! :
ಗೋವಾ ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಪ್ರತಿಕ್ರಿಯೆ ನೀಡಿ- ಕರ್ನಾಟಕಕ್ಕೆ 13 ಟಿಎಂಸಿ ಮಹದಾಯಿ ನದಿ ನೀರನ್ನು ಬಳಕೆ ಮಾಡಲು ಪರವಾನಗಿಯಿದ್ದರೂ ಕೂಡ ಇದರ ಪರಿಣಾಮ ಗೋವಾದ ಮೇಲೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.