Advertisement

ಮನೆಗಳಿಗೆ ನುಗ್ಗಿದ ನೀರು

10:51 AM Jul 16, 2019 | Suhan S |

ಕಾರವಾರ: ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೋಮವಾರ ದಿನವಿಡಿ ಸುರಿದ ಭಾರೀ ಮಳೆಗೆ ನಗರದ ವಿವಿಧ ವಾರ್ಡ್‌ಗಳ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು.

Advertisement

ಪದ್ಮನಾಭ ನಗರ, ಮಹಾದೇವ ನಗರ, ನ್ಯೂ ಕೆಎಚ್ಬಿ ಕಾಲೊನಿ, ಗಿಡ್ಡಾರಸ್ತೆಯ ಅಡ್ಡ ರಸ್ತೆಗಳ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಅನಾಹುತ ಉಂಟುಮಾಡಿತು. ಮಳೆ ಬಿಟ್ಟು ಬಿಟ್ಟು ರಭಸವಾಗಿ ಸುರಿಯುತ್ತಿದೆ. ಮಳೆ ನೀರು ಹರಿಯಲು ಸ್ಥಳವಿಲ್ಲದೇ ರಸ್ತೆಗಳಲ್ಲಿ ನಿಂತಿದೆ.

ಸಮುದ್ರ ಮಟ್ಟದಿಂದ 2 ಅಡಿ ತಗ್ಗಿನಲ್ಲಿರುವ ಕಾರವಾರ ಮಳೆ ಹೆಚ್ಚಾದರೆ ತೀವ್ರ ತೊಂದರೆ ಅನುಭವಿಸುತ್ತದೆ. ದಶಕಗಳ ಹಿಂದೆ ಕಂಡ ಮಳೆ ಈಗ ಮರುಕಳಿಸಿದ್ದು, ಸಹ್ಯಾದ್ರಿ ಪರ್ವತಗಳು ಮೋಡ ಮತ್ತು ಮಂಜಿನಿಂದ ತುಂಬಿಹೋಗಿವೆ. ಸೂರ್ಯನ ದರ್ಶನ ಎಂಬುದೇ ಇಲ್ಲವಾಗಿದೆ. ಪಶ್ಚಿಮಘಟ್ಟಗಳಲ್ಲಿ ಮೋಡಗಳ ಆಟ ಚೆಲುವಾಗಿ ನಡೆದಿದೆ. ಮಳೆಯನ್ನು ರೈತರು ಎಂಜಾಯ್‌ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆ ವೇಗವಾಗಿ ನಡೆದಿವೆ.

ಅಪಾರ್ಟಮೆಂಟ್‌ಗಳಿಗೆ ಅನುಮತಿ ನಿಲ್ಲಲಿ;

ನಗರದಲ್ಲಿ ಮಳೆ ನೀರು ಹರಿವ ಸಮಸ್ಯೆಗೆ ಅಪಾರ್ಟಮೆಂಟ್ ಸಂಸ್ಕೃತಿ ಕಾರಣ. ನಗರಸಭೆ ಅಪಾರ್ಟಮೆಂಟ್ ಕಟ್ಟದಂತೆ ಠಾರವು ಮಾಡಲಿ. ಈಗಾಗಲೇ ನಗರದಲ್ಲಿ 49 ಅಪಾರ್ಟಮೆಂಟ್‌ಗಳಿವೆ. ಇನ್ನು ಅಪಾರ್ಟಮೆಂಟ್ ನಿರ್ಮಿಸುತ್ತಾ ಹೋದರೆ ಕಾರವಾರ ಬಹುದೊಡ್ಡ ಸಮಸ್ಯೆ ಎದುರಿಸಲಿದೆ ಎಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ.

Advertisement

ನಗರಸಭೆ ಚುನಾವಣೆ ನಡೆದು ಸಹ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿಲ್ಲ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಸಂಗತಿ ಕೋರ್ಟ್‌ನಲ್ಲಿದ್ದು, ಜನಪ್ರತಿನಿಧಿಗಳು ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಕಾರಣ ಸಿಕ್ಕಿದೆ. ಅಧಿಕಾರಿಗಳು ಅಸಹಾಯಕರಾಗಿದ್ದು, ಅವರು ಮೇಲಿನ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅಪಾರ್ಟಮೆಂಟ್‌ಗಳಿಗೆ ಕಾನೂನು ಮೀರಿ ಅನುಮತಿ ನೀಡುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬರತೊಡಗಿದೆ. ಕೊಳಚೆ ನೀರು ನಿರ್ವಹಣೆ ಮತ್ತು ಮಳೆ ನೀರು ಸಮಸ್ಯೆ ನಿವಾರಣೆಗೆ ನಗರದಲ್ಲಿ ಇನ್ನು ಮುಂದಾದರು ಅಪಾರ್ಟಮೆಂಟ್‌ಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಎಂಬ ಮಾತು ಕೇಳಿ ಬಂದಿದೆ.

ಕಾಲುವೆ ನಿರ್ಮಾಣಕ್ಕೆ ಜನ ಸಹಕರಿಸಬೇಕು: ಕಾರವಾರದಲ್ಲಿ ಚರಂಡಿ ನಿರ್ಮಾಣಕ್ಕೆ ಸಹ ಜಾಗ ಬಿಡದೇ ಕಂಪೌಂಡ್‌ ನಿರ್ಮಿಸಿಕೊಳ್ಳಲಾಗಿದೆ. ರಸ್ತೆ ಪಕ್ಕ ಚರಂಡಿ ನಿರ್ಮಾಣಕ್ಕೆ ಅವಕಾಶವನ್ನು ಕೆಲವು ಕಡೆ ಸ್ಥಳೀಯರು ಬಿಟ್ಟಿಲ್ಲ. ಚರಂಡಿ ನಿರ್ಮಾಣಕ್ಕೆ ಜನ ಸಹಕರಿಸಿದರೆ ಮಳೆ ನೀರು ನಿರ್ವಹಣೆ ಸಾಧ್ಯ. ಮಳೆ ನೀರು ಮನೆ ನುಗ್ಗದಂತೆ ಮತ್ತು ರಸ್ತೆ ಮೇಲೆ ನಿಲ್ಲದಂತೆ ಮಾಡಲು ಅವಕಾಶವಿದೆ. ಚರಂಡಿ ನಿರ್ಮಾಣಕ್ಕೆ ಜನ ಸಹಕರಿಸಬೇಕು ಎಂದು ನಗರಸಭೆ ಸಿಬ್ಬಂದಿ ಹೇಳುತ್ತಿದ್ದಾರೆ.

ಮಳೆ ಪ್ರಮಾಣ ಹೆಚ್ಚಾದಾಗ ನೀರು ಸಹಜವಾಗಿ ಮನೆಗಳಿಗೆ ನುಗ್ಗುತ್ತದೆ. ಇದಕ್ಕೆ ಕಾರಣ ಕಾರವಾರ ನಗರ ಸಮುದ್ರ ಮಟ್ಟದಿಂದ ಕೆಳ ಹಂತದಲ್ಲಿರುವುದು. ಸಾರ್ವಜನಿಕರು ಮನೆ ನಿರ್ಮಿಸುವಾಗ ನೆಲಗಟ್ಟನ್ನು ನಾಲ್ಕು ಅಡಿ ಎತ್ತರ ಇಟ್ಟು ನಿರ್ಮಿಸಿಕೊಳ್ಳಬೇಕಾಗಿದೆ ಎಂಬುದು ಎಂಜಿನಿಯರ್‌ಗಳ ಸಲಹೆ.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು: ಪದ್ಮನಾಭನಗರ ಮತ್ತು ಗಿಡ್ಡಾ ರಸ್ತೆ ಹಾಗೂ ಮಹಾದೇವ ನಗರಗಳಿಗೆ ನಗರಸಭೆ ಪೌರಾಯುಕ್ತ ಎಸ್‌.ಯೋಗೇಶ್ವರ ಖುದ್ದಾಗಿ ಭೇಟಿ ನೀಡಿ, ಮಳೆ ನೀರಿನಲ್ಲಿ ಅಡ್ಡಾಡಿದರು. ಪೌರಕಾರ್ಮಿಕರ ನೆರವಿನಿಂದ ಮಳೆ ನೀರು ಹರಿಯಲು ಅಡಚಣೆಯಾದ ಸ್ಥಳಗಳನ್ನು ಬಿಡಿಸಿಕೊಟ್ಟರು. ಎಂಜಿನಿಯರ್‌ ಮೋಹನ್‌ ರಾಜ ಜತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next