Advertisement

ಎಸ್‌ಟಿಪಿ ಕಡ್ಡಾಯದಿಂದ ಹಿಂದೆ ಸರಿದ ಜಲಮಂಡಳಿ

12:19 PM Dec 15, 2017 | |

ಬೆಂಗಳೂರು: ನಗರದಲ್ಲಿ 50ಕ್ಕಿಂತ ಹೆಚ್ಚು ಮನೆಗಳಿರುವ ಹಳೆ ಅಪಾರ್ಟ್‌ಗಳಿಗೂ ತ್ಯಾಜ್ಯನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಅಳವಡಿಕೆ ಕಡ್ಡಾಯ ನಿಯಮದಿಂದ ಜಲಮಂಡಳಿ ವಿನಾಯಿತಿ ನೀಡಿದೆ. ಆದರೆ, ಒಳಚರಂಡಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಎಲ್ಲ ಬಗೆಯ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಲು ತೀರ್ಮಾನಿಸಿದೆ. 

Advertisement

ಗುರುವಾರ ಬಿಎಂಆರ್‌ಡಿಎನಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಜಲಮಂಡಳಿ ಅಧಿಕಾರಿಗಳು, ಅಪಾರ್ಟ್‌ಮೆಂಟ್‌ ಒಕ್ಕೂಟ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಒಳಚರಂಡಿ ವ್ಯವಸ್ಥೆಯಿಲ್ಲದ ಕಡೆಗಳಲ್ಲಿ ಮಾತ್ರ ಎಸ್‌ಟಿಪಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಯಿತು. 

ಹಳೆಯ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಿ ಜಲಮಂಡಳಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಹಲವಾರು ಅಪಾರ್ಟ್‌ಮೆಂಟ್‌ಗಳು ಹಾಗೂ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಜಲಮಂಡಳಿಯ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಗುರುವಾರ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

110 ಹಳ್ಳಿ ಪ್ರದೇಶಗಳಿಗೆ ಹೊರೆ: ಜಲಮಂಡಳಿಯ ಅಧಿಕಾರಿಗಳು, ಗುರುವಾರ ನಡೆಸ ಸಭೆಯಲ್ಲಿ ಒಳಚರಂಡಿ ಸೇವೆ ಹೊಂದದ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. 110 ಹಳ್ಳಿಗಳಿಗೆ ಈವರೆಗೆ ಸಮರ್ಪಕವಾಗಿ ಒಳಚರಂಡಿ ಸಂಪರ್ಕ ನೀಡಲು ಜಲಮಂಡಳಿಯಿಂದ ಆಗಿಲ್ಲ. ಜತೆಗೆ ಈ ಪ್ರದೇಶದಲ್ಲಿಯೇ ಅತಿಹೆಚ್ಚು ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿವೆ. ಹಾಗಾಗಿ 110 ಹಳ್ಳಿಗಳ ಸಮೀಪದ ಎಲ್ಲ ಅಪಾರ್ಟ್‌ಮೆಂಟ್‌ಗಳಿಗೆ ಈ ನಿಯಮ ಅನ್ವಯವಾಗಲಿದೆ ಎನ್ನಲಾಗಿದೆ. 

ನಗರದಲ್ಲಿ ಜಲಮಂಡಳಿ ಸೇವೆ ಒಳಗೊಳ್ಳುವ ಪ್ರದೇಶದಲ್ಲಿನ 1,060 ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್‌ ನೀಡಲಾಗಿದ್ದು, ಇದರಲ್ಲಿ 2007ರ ಕ್ಕೂ ಮೊದಲು ನಿರ್ಮಾಣವಾದ 344 ಅಪಾರ್ಟ್‌ಮೆಂಟ್‌ಗಳಿವೆ. ಹಳೆಯದಾಗಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಅಳವಡಿಸುವುದು ಅಸಾಧ್ಯ ಎಂಬ ಕಾರಣಕ್ಕಾಗಿ ಅಪಾರ್ಟ್‌ಮೆಂಟ್‌ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದ ಪ್ರದೇಶಗಳಲ್ಲಿ ನಿಯಮ ಕಡ್ಡಾಯಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. 

Advertisement

ಸಭೆಯಲ್ಲಿ ಭಾಗಿಯಾಗಿದ್ದ ಅಪಾರ್ಟ್‌ಮೆಂಟ್‌ಗಳ ಒಕ್ಕೂಟದ ಪದಾಧಿಕಾರಿಗಳೂ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ 110 ಹಳ್ಳಿಗಳ ಸುತ್ತಮುತ್ತಲಿನ ಭಾಗಗಳಲ್ಲಿ 3 ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗಳಿವೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶಗಳಲ್ಲಿ ಈವರೆಗೆ ಒಳಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೊದಲೇ ದಂಡ ವಿಧಿಸುವ ಜಲಮಂಡಳಿಯ ನಿರ್ಧಾರಕ್ಕೆ 110 ಹಳ್ಳಿಗಳ ಸಮೀಪದ ಅಪಾರ್ಟ್‌ಮೆಂಟ್‌ ಮಾಲೀಕರು ಹಾಗೂ ನಿವಾಸಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದುನೋಡಬೇಕಿದೆ. 

ಅಧಿಕಾರಿಗಳಿಗೆ ಸ್ಪಷ್ಟತೆಯಿಲ್ಲ: ಗುರುವಾರ ಸಚಿವರ ನೇತೃತ್ವದಲ್ಲಿ ನಡೆಸಲಾದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಕುರಿತು ಜಲಮಂಡಳಿಯ ಅಧಿಕಾರಿಗಳಿಗೆ ಸ್ಪಷ್ಟತೆಯಿಲ್ಲ. ಹೀಗಾಗಿ  ಸರ್ಕಾರದಿಂದ ಅಧಿಕೃತ ಆದೇಶ ಬಂದ ನಂತರವೇ ನಿಯಮ ಯಾರಿಗೆ, ಹೇಗೆ ಅನ್ವಯವಾಗಲಿದೆ ಎಂಬುದನ್ನು ತಿಳಿಸಲಾಗುವುದು ಎಂದು ಜಲಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಒಳಚರಂಡಿ ವ್ಯವಸ್ಥೆಯಿಲ್ಲದ ಪ್ರದೇಶಗಳಲ್ಲಿ ಎಸ್‌ಟಿಪಿ ಕಡ್ಡಾಯಗೊಳಿಸಲಾಗಿದ್ದು, ಪ್ರಸ್ತುತ ಉಂಟಾಗಿರುವ ಗೊಂದಲಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಆದರೆ, ಹೊಸದಾಗಿ ನಿರ್ಮಾಣಗೊಳ್ಳುವ 20ಕ್ಕಿಂತ ಹೆಚ್ಚು ಮನೆಗಳಿರುವ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯ ನಿಮಯ ಮುಂದುವರಿಯಲಿದೆ. 
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ 

50 ಮನೆಗಳಿರುವ ಹಳೆಯ ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ ಕಡ್ಡಾಯದ ಆದೇಶವನ್ನು ಮಾರ್ಪಾಡುಗೊಳಿಸಲು ತೀರ್ಮಾನಿಸಲಾಗಿದ್ದು, ಒಳಚರಂಡಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಎಲ್ಲ ಬಗೆಯ ಅಪಾರ್ಟ್‌ಮೆಂಟ್‌ಗಳಿಗೂ ಎಸ್‌ಟಿಪಿ ಕಡ್ಡಾಯವಾಗಲಿದೆ. 
-ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next