ಯಾದಗಿರಿ: ಪ್ರಸಕ್ತ ದಿನಗಳಲ್ಲಿ ಜನರ ಆರೋಗ್ಯ ರಕ್ಷಣೆಯಲ್ಲಿ ನೀರಿನ ಪಾತ್ರ ಮಹತ್ವದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಲಜೀವನ ಮಿಷನ್ ಹಾಗೂ ಜಲಧಾರೆ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ರಾಯಚೂರ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಬೀರನೂರ ಗ್ರಾಮದಲ್ಲಿ ಜಿಪಂ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, 2021-22ನೇ ಸಾಲಿನ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಮನೆಮನೆಗೆ ನೀರು ಸರಬರಾಜು ಮಾಡುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಈಗಾಗಲೇ ಯಾದಗಿರಿ- ರಾಯಚೂರ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಯೋಜನೆ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಇಲ್ಲಿ ಪ್ರಮುಖವಾಗಿ ಭೀಮಾ-ಕೃಷ್ಣಾ ನದಿಗಳು ಹರಿಯುತ್ತಿರುವುದರಿಂದ ಜಲಸಂಪನ್ಮೂಲವಿದೆ. ಪರಿಣಾಮ ಯಾದಗಿರಿ ಜಿಲ್ಲೆಗೆ ಜಲಧಾರೆ ಯೋಜನೆ ಕಾಮಗಾರಿ ಕೈಗೊಳ್ಳಲು 1400 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಅದರಂತೆ ರಾಯಚೂರ ಜಿಲ್ಲೆಗೆ 2800 ಕೋಟಿ ರೂ. ಮೀಸಲಿಡಲಾಗಿದೆ. ಕಾಮಗಾರಿ ಟೆಂಡರ್ ಕರೆಯುವ ಹಂತದಲ್ಲಿದೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಗ್ರಾಮೀಣ ಜನರಿಗೆ ನದಿಗಳಿಂದ ಪೈಪ್‌ಲೈನ್ ಮೂಲಕ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜುವಾಗಲಿದೆ. ಜನರು ಕೂಡ ಎಚ್ಚರಿಕೆಯಿಂದ ನೀರು ಪೋಲಾಗದಂದತೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನರೇಗಾ ಯೋಜನೆಯಡಿಯಲ್ಲಿ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಕಾಮಗಾರಿ ತೆಗೆದುಕೊಳ್ಳಲು ಅವಕಾಶವಿದೆ. ಇದರಿಂದ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ತಿಳಿಸಿದರು.
ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿದರು. ರಾಜಾ ವೇಣು ಮಾದವ ನಾಯಕ್, ಚೆನ್ನಾರೆಡ್ಡಿ ಮದರಕಲ್, ಸಿದ್ದಣಗೌಡ ಕಾಡಂನೋರ, ವೀರಣ್ಣಗೌಡ ಟೊಣ್ಣೂರ, ಚಂದ್ರಶೇಖರ ಮರಕಲ್, ರಾಜಶೇಖರ ಕಾಡಂನೋರ, ನಿಂಗಯ್ಯ ಕಾವಲಿ, ಮಲ್ಲಿಕಾರ್ಜುನಗೌಡ ಪಾಟೀಲ್ ಗುಂಡಗುರ್ತಿ, ಸಿದ್ದಪ್ಪ ಬೀರನೂರ, ದೇವಮ್ಮ ಚಂದಯ್ಯ, ಬಸವರಾಜ ಸಜ್ಜನ್ ಇದ್ದರು.