Advertisement

5 ಕಟ್ಟಗಳಲ್ಲಿ ಸಂಗ್ರಹಗೊಂಡಿದೆ ಜಲಸಂಪತ್ತು

11:37 PM Jan 13, 2020 | mahesh |

ಬಂಟ್ವಾಳ: ಜಲ ಸಂಪತ್ತಿನ ಸದ್ಬಳಕೆ ಹಾಗೂ ಗ್ರಾಮದ ಕೃಷಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹರಿಯುತ್ತಿರುವ ನೀರಿಗೆ ಕಟ್ಟು ನಿರ್ಮಿಸುವಲ್ಲಿ ತಾಲೂಕಿನ ಕೆದಿಲ ಗ್ರಾ.ಪಂ. ಸ್ವಾವಲಂಬಿ ಹೆಜ್ಜೆಯನ್ನಿಟ್ಟಿದ್ದು, ಇಲ್ಲಿನ 5 ಕಡೆಗಳಲ್ಲಿ ಈಗಾಗಲೇ ಕಿಂಡಿ ಅಣೆಕಟ್ಟುಗಳ ಮೂಲಕ ನೀರನ್ನು ಸಂಗ್ರಹಿಸಲಾಗುತ್ತಿದೆ.

Advertisement

ಕೆದಿಲ ಗ್ರಾ.ಪಂ. ಬಂಟ್ವಾಳ ತಾಲೂಕಿನಲ್ಲಿದ್ದರೂ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಗ್ರಾ.ಪಂ. ವ್ಯಾಪ್ತಿಯ ಪುಂಚತ್ತೋಡಿಯಲ್ಲಿ ಈ ವರ್ಷ ಹೊಸದಾದ ಕಿಂಡಿ ಅಣೆಕಟ್ಟು ಪುತ್ತೂರು ಶಾಸಕರ ಶಿಫಾರಸ್ಸಿನಂತೆ 50 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ನಿರ್ಮಾಣಗೊಂಡಿದೆ.

ಗ್ರಾಮದ ಕೃಷಿ ಪ್ರದೇಶಗಳಿಗೆ ಇದು ಸಾಕಷ್ಟು ಅನುಕೂಲ ಕಲ್ಪಿಸಿದೆ. ಹೇರಳವಾದ ನೀರಿನ ಸಂಗ್ರಹ ನೋಡುವುದಕ್ಕೂ ಸುಂದರವಾಗಿ ಕಾಣುತ್ತಿದೆ. ಗ್ರಾ.ಪಂ. ವ್ಯಾಪ್ತಿಯ ಎದುರ್ಕಳ, ವಡ್ಡದಕಯ,ಪುಂಚತ್ತೋಡಿ, ಮುರುವ, ಕಂಪಗಳಲ್ಲಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಎದುರ್ಕಳ ಮಾದರಿ
ಬಹಳ ವರ್ಷಗಳ ಹಿಂದೆ ನಿರ್ಮಾಣಗೊಂಡಿ ರುವ ಎದುರ್ಕಳ ಕಿಂಡಿ ಅಣೆಕಟ್ಟು ಈ ಭಾಗದ ಇತರ ಕಿಂಡಿ ಅಣೆಕಟ್ಟುಗಳಿಗೆ ಮಾದರಿಯಾಗಿದ್ದು, ಹರಿಯುವ ತೋಡಿನಲ್ಲಿ ಈಗಲೂ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿ ಕೃಷಿಕರೇ ಕಟ್ಟ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ವಡ್ಡದಕಯದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಕಳೆದ ವರ್ಷ ಗ್ರಾ.ಪಂ.ವತಿಯಿಂದಲೇ ಇಲ್ಲಿ ಹಲಗೆ ಹಾಕುವ ಕಾರ್ಯ ಮಾಡಲಾಗಿತ್ತು. ಈ ವರ್ಷ ಕೃಷಿಕರೇ ಹಲಗೆ ಹಾಕಿದ್ದಾರೆ. ಈ ವರ್ಷ ಅನುಷ್ಠಾನಗೊಂಡಿರುವ ಪುಂಚತ್ತೋಡಿಗೆ ಸೇರಿದ ಎದುರ್ಕಳ ಹಾಗೂ ವಡ್ಡದಕಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕವೇ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ.

ಕೆದಿಲದ ಮುರುವ ಹಾಗೂ ಕಂಪದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ನೀರಿಗೆ ಕಟ್ಟ ಹಾಕುವ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿಯೂ ನೀರನ್ನು ಸಂಗ್ರಹಿಸಿಕೊಂಡು ಅಂತರ್ಜಲ ವೃದ್ಧಿಯ ಜತೆಗೆ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ.

Advertisement

ಇನ್ನೂ ಇದೆ ಬೇಡಿಕೆ
ಕೆದಿಲ ಗ್ರಾ.ಪಂ. ವ್ಯಾಪ್ತಿಯ ಇನ್ನೂ ಹಲವು ಕಡೆಗಳಲ್ಲಿ ನೀರಿನ ಕಟ್ಟಗಳ ನಿರ್ಮಾಣಕ್ಕೆ ಬೇಡಿಕೆ ಇದ್ದು, ವಾಲ್ತಾಜೆ, ಜತ್ತನಕೋಡಿ ಕಟ್ಟ ನಿರ್ಮಾಣ ಪ್ರಸ್ತಾವವಿದೆ. ಉದ್ಯೋಗ ಖಾತ್ರಿ ಯೋಜನೆ ಅಥವಾ ಇತರ ಯೋಜನೆಗಳ ಮೂಲಕ ಕಟ್ಟ ನಿರ್ಮಿಸುವ ಕುರಿತು ಪ್ರಯತ್ನ ಮಾಡಲಾಗುತ್ತದೆ ಎಂದು ಗ್ರಾ.ಪಂ. ಅಧಿಕಾರಿಗಳು ಹೇಳುತ್ತಾರೆ.

 ಕೃಷಿಕರಿಂದಲೇ ನಿರ್ವಹಣೆ
ಕೃಷಿ ಪ್ರದೇಶವಾಗಿರುವ ಕೆದಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟುಗಳಿಂದ
ಸಾಕಷ್ಟು ಪ್ರಯೋಜನವಾಗಿದ್ದು, ಅದರ ನಿರ್ವಹಣೆಯ ಜವಾಬ್ದಾರಿಗಳನ್ನು ಕೃಷಿಕರೇ ಮಾಡಿದಾಗ ಅನುಕೂಲವಾಗುತ್ತದೆ. ನಿರ್ವಹಣೆಯನ್ನೂ ಗ್ರಾ.ಪಂ.ನಿಂದಲೇ ಮಾಡಿದರೆ ಗ್ರಾ.ಪಂ.ಗೆ ಹೊರೆಯಾಗುತ್ತದೆ.
– ಅಣ್ಣಪ್ಪ ಕುಲಾಲ್‌, ಗ್ರಾ.ಪಂ. ಅಧ್ಯಕ್ಷರು, ಕೆದಿಲ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next