Advertisement

ತ.ನಾಡಿಗೆ ನೀರು ಬಿಡುಗಡೆ: ಮುಂದುವರಿದ ಪ್ರತಿಭಟನೆ

03:45 AM Jul 02, 2017 | Team Udayavani |

ಮೈಸೂರು/ಮಂಡ್ಯ/ಚಾಮರಾಜನಗರ: ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕಾವೇರಿ ಕಣಿವೆಯ ಜಿಲ್ಲೆಗಳಾದ ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಶನಿವಾರವೂ ಪ್ರತಿಭಟನೆಗಳು ನಡೆದವು.

Advertisement

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ರೈತರು, ಬೆಂಗಳೂರು-ಮೈಸೂರು ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಚಂದ್ರಶೇಖರ್‌ ರೈತರ ಮನವೊಲಿಸಲು ಯತ್ನಿಸಿದರು. ಆದರೆ, ರೈತರು ರಸ್ತೆ ತಡೆಯನ್ನು ವಾಪಸ್‌ ಪಡೆಯಲು ಒಪ್ಪಲಿಲ್ಲ. ಈ ವೇಳೆ, 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಇದೇ ವೇಳೆ, ಶ್ರೀರಂಗಪಟ್ಟಣದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ಕಾಲ ಕುವೆಂಪು ವೃತ್ತದ ಬಳಿ ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಮಂಡ್ಯದಲ್ಲಿ ರೈತರ ಬಂಧನ ವಿರೋಧಿಸಿ 60ಕ್ಕೂ ಹೆಚ್ಚು ರೈತರು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಭಾರತೀನಗರದಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಈ ವೇಳೆ, ರೈತರ ಪ್ರತಿಭಟನೆಯನ್ನು ಲೆಕ್ಕಿಸದೆ ಬಸ್‌ ಚಾಲಕನೊಬ್ಬ ಬಸ್‌ ಓಡಿಸಲು ಮುಂದಾದಾಗ ಚಾಲಕನನ್ನು ಥಳಿಸಿ, ಬಸ್‌ ನಿಲ್ಲಿಸಿದರು. ಮದ್ದೂರು, ಮಳವಳ್ಳಿ ಸೇರಿ ಮಂಡ್ಯ ಜಿಲ್ಲೆಯ ಇತರೆಡೆ, ಮೈಸೂರು ಜಿಲ್ಲೆಯ ಹಲವೆಡೆಯೂ ಪ್ರತಿಭಟನೆಗಳು ನಡೆದವು. ಇದೇ ವೇಳೆ, ಚಾಮರಾಜನಗರದಲ್ಲಿಯೂ ಪ್ರತಿಭಟನೆ ಮುಂದುವರಿದಿದೆ. ನಗರದ ನೃಪತುಂಗ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಎಂ.ಬಿ.ಪಾಟೀಲ್‌ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್‌ಗೆ ಬಿಗಿ ಭದ್ರತೆ:
ಕೆಆರ್‌ಎಸ್‌ ಅಣೆಕಟ್ಟೆಗೆ ನೀಡಲಾಗಿರುವ ಭದ್ರತೆಯನ್ನು ಶನಿವಾರವೂ ಮುಂದುರಿಸಲಾಗಿದೆ. ಜತೆಗೆ, ಮಂಡ್ಯ ಜಿಲ್ಲೆಯಾದ್ಯಂತ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಗಸ್ತು ಪಡೆಯನ್ನು ಹೆಚ್ಚಿಸಿದೆ.

Advertisement

ತಮಿಳುನಾಡಿಗೆ ನ್ಯಾಯ ಸಮ್ಮತ ನೀರು: ಸಚಿವ ಎಂ.ಬಿ.ಪಾಟೀಲ
ವಿಜಯಪುರ:
ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಸಂಗ್ರಹ ಆಧರಿಸಿ ನ್ಯಾಯ ಸಮ್ಮತವಾಗಿಯೇ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೀರು ಹಂಚಿಕೆ ಸೂತ್ರದಂತೆ ನ್ಯಾಯಸಮ್ಮತವಾಗಿ ನೀರು ಬಿಡಲಾಗುತ್ತಿದೆ. ಪ್ರತಿ ವರ್ಷ ಜೂನ್‌ನಲ್ಲಿ 10 ಟಿಎಂಸಿ, ಜುಲೈನಲ್ಲಿ 34 ಟಿಎಂಸಿ ಹಾಗೂ ಆಗಸ್ಟ್‌ನಲ್ಲಿ 50 ಟಿಎಂಸಿ ನೀರು ಸೇರಿ ಮಳೆಗಾಲದ ಮೂರು ತಿಂಗಳಲ್ಲಿ 94 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ. ಚೆನ್ನೈ ಸೇರಿ ತಮಿಳುನಾಡಿನ ಹಲವೆಡೆ ಕುಡಿಯುವ ನೀರಿನ ಸಂಕಷ್ಟ ನಿವಾರಣೆಗೆ ಜಲಾಶಯದ ನೀರಿನ ಮಟ್ಟ ಆಧರಿಸಿ ನದಿಗೆ ನೀರು ಹರಿಸಲಾಗುತ್ತಿದೆ. ಜೂನ್‌ ತಿಂಗಳಲ್ಲಿ ಮಳೆ ಕೊರತೆಯಿತ್ತು. ಹೀಗಾಗಿ, ಈಗ ನೀರು ಹರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next