Advertisement

ಕೈಗಾರಿಕೆಗಳಿಗೆ ಶೀಘ್ರ ನೀರು ರೇಷನಿಂಗ್‌ : ಕುಡಿಯುವ ನೀರಿನ ಮೇಲೆ ನಿಗಾ

03:31 AM Mar 13, 2021 | Team Udayavani |

ಮಹಾನಗರ: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಕುಡಿಯುವ ನೀರಿನ ಮಟ್ಟವನ್ನು ಬೇಸಗೆ ಕಾಲದಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಸರಬರಾಜಾಗುತ್ತಿರುವ ನೀರಿನ ರೇಷನಿಂಗ್‌ ನೀತಿ ಕೆಲವೇ ದಿನದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.

Advertisement

ನಗರದ ಜನರಿಗೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವ ನೆಲೆಯಲ್ಲಿ ಕೈಗಾರಿಕೆಗಳ ನೀರಿನ ಪ್ರಮಾಣದಲ್ಲಿ ಪರಿಷ್ಕರಿಸಲು ಪಾಲಿಕೆಯು ಜಿಲ್ಲಾಡಳಿತವನ್ನು ಕೋರಿದೆ.

ಸದ್ಯದ ಮಾಹಿತಿ ಪ್ರಕಾರ, ಒಂದು ವಾರದೊಳಗೆ ತುಂಬೆ ಡ್ಯಾಂನಲ್ಲಿ ನೀರಿನ ಒಳ ಹರಿವು ಸ್ಥಗಿತವಾಗುವ ನಿರೀಕ್ಷೆಯಿದೆ. ಡ್ಯಾಂನಲ್ಲಿ ಸದ್ಯಕ್ಕೆ ಆರು ಮೀಟರ್‌ನಷ್ಟು ನೀರಿನ ಸಂಗ್ರಹವಿದ್ದು, ಇದು ಸಾಮಾನ್ಯವಾಗಿ ನಗರದ ಉಪಯೋಗಕ್ಕೆ ತಕ್ಕಂತೆ ಮುಂದಿನ 90 ದಿನಗಳಿಗೆ ಸಾಕಾಗಬಹುದು. ಕಳೆದ ವರ್ಷವೂ ಮಾರ್ಚ್‌ ತಿಂಗಳಲ್ಲಿ ತುಂಬೆ ಡ್ಯಾಂನ ನೀರಿನ ಸಂಗ್ರಹ ಮಟ್ಟ ಹೆಚ್ಚುಕಮ್ಮಿ ಆರು ಮೀಟರ್‌ನಷ್ಟೇ ಇತ್ತು. ಒಂದುವೇಳೆ ಮೇ ಅವಧಿಯಲ್ಲಿ ಮಳೆ ಬಾರದಿದ್ದರೆ ನಗರಕ್ಕೆ ಕುಡಿಯುವ ನೀರಿನ ರೇಷನಿಂಗ್‌ ಮಾಡಬೇಕಾದ ಅನಿವಾರ್ಯ ಇದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವ ಕಾರಣದಿಂದ ಕೈಗಾರಿಕೆಗಳಿಗೆ ನೀರು ರೇಷನಿಂಗ್‌ ಸದ್ಯದಲ್ಲಿಯೇ ಆರಂಭಿಸಬೇಕು ಎಂಬುದು ಪಾಲಿಕೆ ಅಭಿಪ್ರಾಯ.

2016, 2017, 2019ರಲ್ಲಿ ನೀರು ರೇಷನಿಂಗ್‌
2016ರ ಜನವರಿಯಲ್ಲಿ ಮಹಾನಗರ ಹಿಂದೆಂದೂ ಕಂಡರಿಯದ ತೀವ್ರ ನೀರಿನ ಕೊರತೆ ಎದುರಿಸಿತ್ತು. ಡ್ಯಾಂನಲ್ಲಿ ನೀರಿಲ್ಲದ ಕಾರಣದಿಂದ ನಗರದಲ್ಲಿ ಟ್ಯಾಂಕರ್‌ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಬಳಿಕ ಲಕ್ಯಾ ಡ್ಯಾಂನ ನೀರನ್ನು ಕೊಂಚ ಬಳಸಲಾಯಿತು. ಇದರಿಂದ ಎಚ್ಚೆತ್ತ ಪಾಲಿಕೆಯು 2017ರಲ್ಲಿ ಪ್ರತಿ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್‌ ಆರಂಭಿಸಿತ್ತು. ಕೈಗಾರಿಕೆಗಳಿಗೂ ನೀರು ಕಡಿತ ಮಾಡಲಾಗಿತ್ತು.

2019ರಲ್ಲಿಯೂ ಮುನ್ನೆಚ್ಚರಿಕೆಗಾಗಿ ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತ ಗೊಳಿಸಲಾಗಿತ್ತು. 18 ಎಂಜಿಡಿ ನೀರಿನ ಪೈಕಿ 15 ಎಂಜಿಡಿಗೆ ಕಡಿತ ಗೊಳಿಸಲಾಗಿತ್ತು. ಬಳಿಕ 13 ಹಾಗೂ 10.5 ಎಂಜಿಡಿಗೆ ಇಳಿಸಲಾಗಿತ್ತು. ಕಳೆದ ವರ್ಷ ನೀರಿನ ಸಮಸ್ಯೆ ಎದುರಾಗದಿದ್ದರೂ ಕೈಗಾರಿಕೆಗಳಿಗೆ ನೀರು ರೇಷನಿಂಗ್‌ ನಿಯಮ ಕೊಂಚ ಮಟ್ಟದಲ್ಲಿ ಜಾರಿಯಲ್ಲಿತ್ತು.

Advertisement

ನೀರು ಮಿತವಾಗಿ ಬಳಸಿ
ನೀರನ್ನು ಸರಿಯಾಗಿ ಬಳಸಿ ಸಂರಕ್ಷಿಸುವ ಮೂಲಕ ಸಮರ್ಪಕ ನಿರ್ವಹಣೆ ಮಾಡಬಹುದಾಗಿದೆ. ನೀರನ್ನು ಪೋಲು ಮಾಡದೇ ಮುಂಜಾಗ್ರತೆ ವಹಿಸಿ ಮಳೆ ಪ್ರಾರಂಭ ವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಒತ್ತು ನೀಡಬೇಕಾಗಿದೆ. ನೀರಿನ ಬಳಕೆಯಲ್ಲೂ ಜಾಗೃತಿ, ಕೌಶಲಗಳ ಅಳವಡಿಕೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ.

ಜಿಲ್ಲಾಡಳಿತಕ್ಕೆ ಕೋರಿಕೆ
ಈ ಬಾರಿ ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಆಗಲಾರದು. ಆದರೂ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾದ ಕಾರಣದಿಂದ ಸದ್ಯ ಕೈಗಾರಿಕೆಗಳಿಗೆ ಬಳಸುವ ನೀರಿನ ಪ್ರಮಾಣದಲ್ಲಿ ಕಡಿತ ಮಾಡುವ ಬಗ್ಗೆ ಈಗಾಗಲೇ ಪಾಲಿಕೆಯಿಂದ ಜಿಲ್ಲಾಡಳಿತಕ್ಕೆ ಕೋರಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. -ಪ್ರೇಮಾನಂದ ಶೆಟ್ಟಿ, ಮೇಯರ್‌, ಮನಪಾ

ನೀರು ರೇಷನಿಂಗ್‌ಗೆ ಸೂಚನೆ
ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ನೀರು ರೇಷನಿಂಗ್‌ ಜಾರಿಗೊಳಿಸುವ ಬಗ್ಗೆ ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ. ಕೈಗಾರಿಕೆಗಳು ನೀರು ಬಳಕೆಯ ಪ್ರಮಾಣವನ್ನು ಕನಿಷ್ಠ ರೂಪಕ್ಕೆ ತರುವ ನಿಟ್ಟಿನಲ್ಲಿಯೂ ಅವರ ಜತೆಗೆ ಚರ್ಚಿಸಲಾಗಿದೆ. ಜತೆಗೆ ಡ್ಯಾಂನಲ್ಲಿ ನೀರು ಸಂಗ್ರಹದ ಮಟ್ಟ ಏರಿಸುವ ಕಾರಣ ದಿಂದ ಸಮೀಪದ ಜಮೀನಿನವರಿಗೆ ಬಾಡಿಗೆ ಆಧಾರದಲ್ಲಿ ಹಣ ನೀಡುವ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಲಿದೆ.
-ಡಾ| ರಾಜೇಂದ್ರ ಕೆ.ವಿ.,ಜಿಲ್ಲಾಧಿಕಾರಿ, ದ.ಕ

Advertisement

Udayavani is now on Telegram. Click here to join our channel and stay updated with the latest news.

Next