ಹರಿದ್ವಾರ (ಉತ್ತರಾಖಂಡ): ಕೋವಿಡ್-19 ಸೋಂಕು ಪೀಡಿತರ ಸಂಖ್ಯೆ ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಏರುತ್ತಿದೆ. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಲ್ಲಿ 21 ದಿನಗಳ ಲಾಕ್ ಡೌನ್ ಗೆ ಆದೇಶಿಸಲಾಗಿದೆ. ಎಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್ ಡೌನ್ ಮುಂದುವರಿಯಲಿದೆ.
ದೇಶವ್ಯಾಪಿ ಲಾಕ್ ಡೌನ್ ಇರುವುದರಿಂದ ಕಾರ್ಖಾನೆಗಳು ಮುಚ್ಚಿವೆ. ವಾಹನಗಳು ರಸ್ತೆಗಿಳಿಯುವಂತಿಲ್ಲ. ಭಾರಿ ಹೊಗೆಯುಗುಳುವ ಚಿಮಣಿಗಳು ಸುಮ್ಮನಾಗಿದೆ. ಹೀಗಾಗಿ ದೇಶದಲ್ಲಿ ಮಾಲಿನ್ಯ ಕಡಿಮೆಯಾಗಿದೆ. ವಾಯು ಮಾಲಿನ್ಯದ ಪ್ರಮಾಣ ಗಣನೀಯ ಮಟ್ಟದಲ್ಲಿ ಕಡಿಮೆಯಾಗಿದೆ.
ಭಾರತದ ಪವಿತ್ರ ನದಿ ಗಂಗೆಯೂ ಈಗ ಶುಭ್ರವಾಗಿ ಹರಿಯುತ್ತಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ಸ್ವಚ್ಛವಾಗಿ ಹರಿಯುತ್ತಿರುವ ಗಂಗಾ ನದಿಯ ವಿಡಿಯೋವೊಂದನ್ನುಸುದ್ದಿ ಸಂಸ್ಥೆ ಎಎನ್ ಐ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದೆ.
ಅಪಾರ ಪ್ರಮಾಣದ ಭಕ್ತರು ಸೇರುವ ಹರ್ ಕಿ ಪೌರಿ ‘ಘಾಟ್ ಮುಚ್ಚಿದ್ದು ಇಲ್ಲಿನ ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಗಂಗಾ ನದಿಯ ತಟದಲ್ಲಿರುವ ಕಾರ್ಖಾನೆಗಳು ಲಾಕ್ ಡೌನ್ ಕಾರಣದಿಂದ ಮುಚ್ಚಿರುವ ಪರಿಣಾಮ ಕಲುಷಿತ ನೀರನ್ನು ಗಂಗಾ ನದಿಗೆ ಹರಿಬಿಡಲಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಗಂಗಾ ನದಿ ಹರಿದ್ವಾರದಲ್ಲಿ ಸ್ವಚ್ಛವಾಗಿ ಹರಿಯುತ್ತಿದೆ.