Advertisement

30 ವರ್ಷಗಳ ಹೋರಾಟದ ಫಲ: ಶಿಡ್ಲಘಟ್ಟ ತಾಲೂಕಿಗೆ ಹರಿದ ಹೆಚ್‍ಎನ್ ವ್ಯಾಲಿ ನೀರು

09:19 PM Dec 01, 2020 | mahesh |

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕು ಸಹಿತ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳು ಸಹಿತ ಎಲ್ಲಾ ಜಾತಿ ಧರ್ಮಗಳ ಜನರು ಸುಮಾರು 30ವರ್ಷಗಳಿಂದ ನಡೆಸಿದ ಹೋರಾಟದ ಫಲದಿಂದಾಗಿ ಕೊನೆಗೂ ಬೆಂಗಳೂರಿನ ಹೆಬ್ಬಾಳ ಮತ್ತು ನಾಗವಾರ ಕೆರೆಗಳ ಶುದ್ದೀಕರಿಸಿದ ಹೆಚ್‍ಎನ್ ವ್ಯಾಲಿ ನೀರು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿಗೆ ಹರಿದಿದೆ.

Advertisement

ನೀರಾವರಿ ತಜ್ಞ ದಿ.ಡಾ.ಜಿ.ಎಸ್.ಪರಮಶಿವಯ್ಯ ಅವರ ವರದಿಯನ್ನು ಆಧರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಾಗಿ ಅನೇಕ ಹೋರಾಟಗಾರರು ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನವನ್ನು ಸೆಳೆದಿದ್ದರು. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಯೊಂದು ತಾಲೂಕುಗಳಿಂದ ಬೈಕ್ ರ್ಯಾಲಿ-ಸಹಸ್ರಾರು ಜನ ಕಾಲ್ನಡಿಗೆ ಜಾಥವನ್ನು ನಡೆಸಿ ಹೋರಾಟವನ್ನು ಚುರುಕುಗೊಳಿಸಿದರು. ಆದರೆ 30 ವರ್ಷಗಳ ಹೋರಾಟ ಬಳಿಕ ಡಾ.ಜಿ.ಎಸ್.ಪರಮಶಿವಯ್ಯ ನೀಡಿರುವ ವರದಿಯನ್ನು ಆಧರಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಂಡಿಲ್ಲ ಆದರೆ ಹೆಚ್‍ಎನ್ ವ್ಯಾಲಿ ಯೋಜನೆಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ಕೆರೆಗೆ ಕೊನೆಗೂ ನೀರು ಹರಿದಿದೆ.

ಜಿಲ್ಲೆಯ ಅಬ್ಲೂಡು ಕೆರೆಯು 84.53 ಎಕರೆ ಪ್ರದೇಶವನ್ನು ಹೊಂದಿದ್ದು, 34.22 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ಈ ಕೆರೆಯಲ್ಲಿ 51.31 ಎಂಸಿಎಫ್‍ಟಿ ನೀರು ಶೇಖರಣೆಯ ಆಗುವ ಸಾಮಥ್ಯವನ್ನು ಹೊಂದಿದ್ದು ಈ ಕೆರೆ ತುಂಬಿದ ಬಳಿಕ ಶಿಡ್ಲಘಟ್ಟದ ಅಮಾನಿಕೆರೆಗೆ ನೀರು ಹರಿಯಲಿದೆ ಎಂದು ತಿಳಿದು ಬಂದಿದೆ. ಅನೇಕ ಮಹನೀಯರು ಹೋರಾಟದಿಂದ ಹೆಚ್‍ಎನ್ ವ್ಯಾಲಿ ನೀರು ಶಿಡ್ಲಘಟ್ಟ ತಾಲೂಕಿಗೆ ಹರಿದ ಹಿನ್ನೆಲೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಅವರ ನೇತೃತ್ವದಲ್ಲಿ ನೂರಾರು ರೈತರು ನೀರು ಹರಿಯುತ್ತಿರುವ ಗಡಿ ಪ್ರದೇಶದಲ್ಲಿ ಗಂಗೆ ಪೂಜೆಯನ್ನು ನೆರವೇರಿಸಿ ಸಿಹಿ ಹಂಚುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಮತ್ತು ಅನೇಕ ಹೋರಾಟಗಾರರ ವಿಭಿನ್ನ ಹೋರಾಟಗಳಿಂದ ಪ್ರಥಮ ಹಂತದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಮತ್ತು ಇದೀಗ ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೆ ಹೆಚ್‍ಎನ್ ವ್ಯಾಲಿಯ ನೀರು ಹರಿದಿದೆ ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿ ಜಿಲ್ಲೆಗೆ ಎತ್ತಿನ ಹೊಳೆ ಮತ್ತು ಕೃಷ್ಣ ನದಿಯ ನೀರು ಹರಿಸುವ ಮೂಲಕ ರೈತರು ಮತ್ತು ಜಿಲ್ಲೆಯ ಜನರಿಗೆ ಅನುಕೂಲಕ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ (ಬಂಗಾರಪ್ಪ), ಭೂ ಅಭಿವೃದ್ದಿ ಬ್ಯಾಂಕಿನ ಮಾಜಿ ಅಧ್ಯಕ್ಷ ಮುನಿವೆಂಕಟಸ್ವಾಮಿ, ತೋಪಡ ರಾಮಚಂದ್ರ, ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರಾಮಕೃಷ್ಣಪ್ಪ, ಗುಡಿಹಳ್ಳಿ ಕೆಂಪಣ್ಣ, ಮೂರ್ತಿ, ವೇಣುಗೋಪಾಲ್, ವೀರಾಪುರ ಮುನಿನಂಜಪ್ಪ ಹೋಟಲ್ ಚಂದ್ರ,ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ರಾಮಾಂಜಿನೇಯ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next