Advertisement
ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಶ್ರೀರಾಮಲಿಂಗೇಶ್ವರ ಕ್ಷೇತ್ರ ಪುರಾಣ ಪ್ರಸಿದ್ಧ ಸ್ಥಳ. ರಾಮಾಯಣದ ಮೇರು ವ್ಯಕ್ತಿಗಳಾದ ರಾಮ, ಲಕ್ಷ್ಮಣ, ಸೀತಾಮಾತೆ ವಾಸವಾಗಿದ್ದ ಸ್ಥಳ. ಅಶ್ವಮೇಧ ಯಾಗದ ಕುದುರೆ ಕಟ್ಟಿಹಾಕಿದ ಧೀಮಂತ ವ್ಯಕ್ತಿ ಗಳಾದ ಲವ-ಕುಶರ ಜನ್ಮಸ್ಥಳ ಹಾಗೂ ವಾಸದ ಮನೆ, ಸೀತಾಮಾತೆ ಜಿಗುಪ್ಸೆಗೊಂಡು ಭೂಗರ್ಭ ಸೇರಿದ ಪ್ರದೇಶ. ಬೆಟ್ಟದ ತಪ್ಪಲಿನಲ್ಲಿ ಶ್ರೀರಾಮಲಕ್ಷ್ಮಣರು ವಾಸವಾಗಿದ್ದ ವೇಳೆ ಅಲ್ಲಿ ಸ್ಥಾಪಿಸಲಾಗಿದ್ದ ಪಂಚಲಿಂಗಗಳೂ, ವಾಲ್ಮೀಕಿ ಮಹರ್ಷಿ ರಾಮಾಯಣ ಬರೆದ ಸ್ಥಳ ಮತ್ತು ಗ್ರಾಮದಲ್ಲಿನ ರಾಮಲಿಂಗೇಶ್ವರ ದೇವಾಲಯ ಮುಂತಾದ ಹಲವಾರು ರಾಮಾಯಣಕ್ಕೆ ಪೂರಕವಾದ ಕುರುಹು ಇವೆ ಎಂದು ನಂಬಲಾಗಿದೆ.
Related Articles
Advertisement
ಫೆ.23 ರಂದು ನಡೆಯಲಿರುವ ಜಿಲ್ಲೆಯಲ್ಲಿಯೇ ಅತೀ ದೊಡ್ಡದಾದ 62ಅಡಿಗಳ ಎತ್ತರದ ಶೃಂಗಾರ ಭರಿತ ಬ್ರಹ್ಮ ರಥೋತ್ಸವಕ್ಕೆ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಬಸ್ ದರ ಏರಿಕೆ ಮಾಡದೇ ಹಳೆ ದರದಂತೆಯೇ ಮುಳಬಾಗಿಲು, ಕೋಲಾರ, ಕೆಜಿಎಫ್, ಶ್ರೀನಿವಾಸಪುರ, ಮಾಲೂರು ಡಿಪೋಗಳಿಂದ ಒಂದು ವಾರ ವಿಶೇಷ ಎಲ್ಲಾ ಮಾರ್ಗಗಳಲ್ಲಿ 60 ಬಸ್ ಮತ್ತು ರಥೋತ್ಸವದಂದು 160-170 ಬಸ್ ನಿಯೋಜಿಸಿದ್ದಾರೆ. ಅಹಿತಕರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪಿಎಸ್‌ಐ ಪ್ರದೀಪ್‌ಸಿಂಗ್ ಸ್ಥಳದಲ್ಲಿ ಹಾಜರಿದ್ದು ಜಾತ್ರೆಯಾದ್ಯಂತ ಸಿಸಿ ಕ್ಯಾಮೆರಾ ಹಾಕಿಸಿ ಮತ್ತು ರಕ್ಷಣೆ ಗಾಗಿ ನೂರಾರು ಪೊಲೀಸರನ್ನು ನಿಯೋಜಿಸಲು ಮುಂದಾಗಿದ್ದಾರೆ.
ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರಿನ ಸೌಕರ್ಯ ಒದಗಿಸಬೇಕೆಂದು ಜಾನುವಾರು ಮಾರಾಟ ಮಾಡಲು ಬಂದಿರುವ ದೊಮ್ಮಸಂದ್ರ ಮಂಜುನಾಥ್, ವೆಂಕಟೇಶಪ್ಪ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ಆದರೆ ತಹಶೀಲ್ದಾರ್ ರಾಜಶೇಖರ್ ಮಾತ್ರ ಇದ್ಯಾವುದರ ಬಗ್ಗೆ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕುಡಿಯಲು ನೀರಿಲ್ಲ : ಗುರುವಾರವೇ ಹೊಸಕೋಟೆ ತಾಲೂಕು ತಾವರೆಕೆರೆ, ಆಂಧ್ರದ ಕೆ.ನಕ್ಕನಪಲ್ಲಿ, ಶಿಡ್ಲಘಟ್ಟ ತಾಲೂಕು ತಲಕಾಯಲಬೆಟ್ಟ, ಮಾಲೂರಿನ ಹೆಡಗಿನಬೆಲೆ, ಕೋಲಾರ ತಂಬಿಹಳ್ಳಿ, ತಾಲೂಕಿನ ದೊಮ್ಮಸಂದ್ರ, ಕುರುಡುಮಲೆ ಸೇರಿದಂತೆ ರಾಜ್ಯ ಮತ್ತು ಅಂತರ ರಾಜ್ಯಗಳಿಂದ ನೂರಾರು ಜೋಡಿಗಳ ರಾಸುಗಳು ಆಗಮಿಸಿವೆ. ಆದರೆ, ನೀರಿನ ಸೌಕರ್ಯ ಕಲ್ಪಿಸಲು ಆವಣಿ ಗ್ರಾಪಂ ಪಿಡಿಒ ಮಂಗಳಾಂಬ ಮುಂದಾಗಿಲ್ಲ. ಇನ್ನು ಮನೆಗಳ ಆವರಣಗಳಲ್ಲಿರುವ ತೊಟ್ಟಿಗಳಿಂದಲೇ ಕಾಡಿ ಬೇಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೇ, ಮತ್ತೆ ಕೆಲವು ರೈತರು ಜಾನುವಾರುಗಳನ್ನು ದೂರದ ರಾಮಾಪುರ ಕೆರೆಯಲ್ಲಿ ನೀರು ಕುಡಿಸುವ ಸ್ಥಿತಿ ನಿರ್ಮಾಣವಾಗಿದೆ.
ಜಾತ್ರೆಯಲ್ಲಿ ಜನ, ಜಾನುವಾರುಗಳಿಗೆ ಕುಡಿವ ನೀರಿನ ಸೌಕರ್ಯಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಪೂರ್ವಭಾವಿ ಸಭೆಯಲ್ಲಿ ಸೂಚಿಸಲಾಗಿದೆ. ಗುರುವಾರವೇ ನೀರು ಸರಬರಾಜು ಮಾಡಬೇಕಾಗಿದ್ದರೂ ಮಾಡಿರಲಿಲ್ಲ. ಹೀಗಾಗಿ ಶುಕ್ರವಾರದಿಂದ ಕ್ರಮ ಕೈಗೊಳ್ಳಲಿದ್ದಾರೆ. –ಸುಬ್ರಮಣ್ಯಂ, ಆವಣಿ ರಾಜಸ್ವ ನಿರೀಕ್ಷಕ
-ಎಂ.ನಾಗರಾಜಯ್ಯ