Advertisement

ಅತ್ಯುತ್ತಮ ವಾರ್ಡ್‌ ಪ್ರಶಸ್ತಿ ಪಡೆದರೂ ಪರಿಹಾರವಾಗಿಲ್ಲ ನೀರಿನ ಸಮಸ್ಯೆ !

11:54 PM Oct 17, 2019 | mahesh |

ಮಹಾನಗರ: ಸ್ವಚ್ಛತೆ, ರಸ್ತೆಗಳ ಅಭಿವೃದ್ಧಿ ಸಹಿತ ವಾರ್ಡ್‌ನ ಅಭಿವೃದ್ಧಿ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಲ್ಲಿಯೇ ಅತ್ಯುತ್ತಮ ವಾರ್ಡ್‌ ಎಂಬ ಮನ್ನಣೆ ಪಡೆದಿದೆ ದೇರೆಬೈಲು ವಾರ್ಡ್‌. ಪಾಲಿಕೆಯಲ್ಲಿ 24ನೇ ವಾರ್ಡ್‌ ಆಗಿ ಗುರುತಿಸಿಕೊಂಡಿರುವ ದೇರೆ ಬೈಲು ಇತರೆಲ್ಲ ವಾರ್ಡ್‌ಗಳಿಗಿಂತ ಹಲವಾರು ದೃಷ್ಟಿ ಯಲ್ಲಿ ವಿಭಿನ್ನವಾಗಿದೆ. ಇಲ್ಲಿ ಸ್ವತ್ಛತೆಗೆ ಹೆಚ್ಚು ಪ್ರಾಶಸ್ಥ್ಯ ನೀಡಲಾಗಿದ್ದು, ಪ್ರತಿ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳಿಗೆ ಉತ್ತಮ ಸಂದೇಶವುಳ್ಳ ಸೂಚನ ಫಲಕ ಹಾಕಿ ಇತರ ವಾರ್ಡ್‌ಗಳಿಗೆ ಮಾದರಿಯಾಗಿದೆ.

Advertisement

ಈ ವಾರ್ಡ್‌ ನಗರವಾಸಿಗಳಿಗೆ ನೆಚ್ಚಿನ ವಾಸ ಸ್ಥಳವಾಗಿದ್ದು, ಪ್ರತಿಷ್ಠಿತ ಮಾಲ್‌, ಮೆಸ್ಕಾಂ ಕೇಂದ್ರ ಕಚೇರಿ ಇಲ್ಲಿದೆ. ಜತೆಗೆ ಚಿಲಿಂಬಿ ಸಾಯಿಬಾಬಾ ಮಂದಿರ, ಕಾಪಿಕಾಡ್‌ ಬಬ್ಬು ಸ್ವಾಮಿ ದೈವಸ್ಥಾನ, ಕೊಟ್ಟಾರ ಇನ್ಫೋಸಿಸ್‌ ಸೇರಿದಂತೆ ಪ್ರಮುಖ ಧಾರ್ಮಿಕ- ವಾಣಿಜ್ಯ ತಾಣಗಳು ಈ ವಾರ್ಡ್‌ನಲ್ಲಿವೆ.

ಪರಿಸರ ಪ್ರಶಸ್ತಿ
ಈ ವಾರ್ಡ್‌ ಅನ್ನು ಮೂರು ವಲಯಗಳಾಗಿ ವಿಂಗಡಿಸಿ ಅಲ್ಲಿ ಸ್ಥಳೀಯರಿಂದಲೇ ಸ್ವತ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಿದ ಪರಿಣಾಮ ಪರಿಸರ ಮಾಲಿನ್ಯ ಇಲಾಖೆಯಿಂದ ಪರಿಸರ ಪ್ರಶಸ್ತಿಯೂ ಲಭಿಸಿತ್ತು. ಚಿಲಿಂಬಿಯಲ್ಲಿ ಕಸ ಬಿಸಾಡುತ್ತಿದ್ದ ಜಾಗದಲ್ಲಿ ಚಿತ್ರಗಳನ್ನು ಬಿಡಿಸಿ ಸುಂದರ ಪ್ರದೇಶವಾಗಿ ಬದಲಾಯಿಸಿದ್ದು, ಈ ವಾರ್ಡ್‌ನ ವಿಶೇಷ ಆಕರ್ಷಣೆ.

ವಾರ್ಡ್‌ನ ಬಹುತೇಕ ಮುಖ್ಯರಸ್ತೆ ಹಾಗೂ ಒಳರಸ್ತೆಗಳ ರಸ್ತೆಗಳು ಅಭಿವೃದ್ಧಿ ಗೊಂಡಿವೆ. ಆದರೆ, ಕೆಲವು ಕಡೆಗಳಲ್ಲಿ ಡಾಮರು ಹೋಗಿ ರಸ್ತೆ ಹದಗೆಟ್ಟಿದೆ. ಕುಡಿಯುವ ನೀರಿನ ಕಾಮ ಗಾರಿಗೆ ಪೈಪ್‌ಲೈನ್‌ ಅಳವಡಿಸುವ ಉದ್ದೇಶದಿಂದ ದಡ್ಡಲಕಾಡಿನಿಂದ ಕೊಟ್ಟಾರ ಬಸ್‌ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ಅಗೆಯಲಾಗಿತ್ತು. ಕಾಮ ಗಾರಿ ಪೂರ್ಣಗೊಂಡ ಬಳಿಕ ಡಾಮರು ಹಾಕಲಾಗಿತ್ತು. ಆದರೆ ಕಳೆದ ಬಾರಿ ಸುರಿದ ಭಾರೀ ಮಳೆಗೆ ಡಾಮರು ಕಿತ್ತು ಹೋಗಿದ್ದು, ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಈ ರಸ್ತೆಯ ಇಕ್ಕೆಲಗಳಲ್ಲಿ ಮಳೆನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಜೋರು ಮಳೆ ಸುರಿದರೆ ನೀರು ರಸ್ತೆಯಲ್ಲೇ ನಿಂತು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದೆ.

ಪರಿಹಾರವಾಗಿಲ್ಲ ಕುಡಿಯುವ ನೀರಿನ ಸಮಸ್ಯೆ
ವಾರ್ಡ್‌ನ ಬಹುತೇಕ ಭಾಗ ಎತ್ತರ ಪ್ರದೇಶದಲ್ಲಿ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇಲ್ಲಿ ಜಾಸ್ತಿಯಿದೆ. ವಾರ್ಡ್‌ಗೆ ಭಾಗಶಃ ಭಾಗಗಳಿಗೆ ಪಾಲಿಕೆಯಿಂದ ಕುಡಿಯುವ ನೀರಿನ ಪೂರೈಕೆ ಕಷ್ಟವಾಗಿದೆ. ಇಲ್ಲಿ ಪಾಲಿಕೆ ನೀರು ಎರಡು ದಿನಗಳಿಗೊಮ್ಮೆ ಸರಬರಾಜಾಗುತ್ತಿದೆ. ಚಿಲಿಂಬಿ ಗುಡ್ಡೆ, ಹ್ಯಾಟ್‌ಹಿಲ್‌ ಗುಡ್ಡೆ ಮೊದಲಾದ ಭಾಗದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾಗಿದ್ದರೂ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಬೇಸಗೆಯಲ್ಲಿ ಈ ಭಾಗದ ಜನರು ನೀರಿಗಾಗಿ ಕಷ್ಟಪಡುವ ಸ್ಥಿತಿ ಇದೆ. ಇದಕ್ಕಾಗಿ ತನ್ನ ಅವಧಿಯಲ್ಲಿ ಶ್ರಮ ವಹಿಸಿರುವುದಾಗಿ ನಿಕಟಪೂರ್ವ ಕಾರ್ಪೊ ರೇಟರ್‌ ರಜನೀಶ್‌ ಹೇಳುತ್ತಾರೆ.

Advertisement

ಪ್ರಮುಖ ಕಾಮಗಾರಿ
– ಕೊಟ್ಟಾರ ಕ್ರಾಸ್‌- ಇನ್ಫೋಸಿಸ್‌ ರಸ್ತೆ ಕಾಂಕ್ರೀಟ್‌ ಕಾಮಗಾರಿ
–  ಮುಖ್ಯ ರಸ್ತೆ, ಒಳರಸ್ತೆಗಳಿಗೆ ನಾಮಫಲಕ ಅಳವಡಿಕೆ
– ಚಿಲಿಂಬಿ ಕಸ ಬಿಸಾಡುವ ಜಾಗದಲ್ಲಿ ಸುಂದರ ಪೈಂಟಿಂಗ್‌ ರಚನೆ
– ಹ್ಯಾಟ್‌ಹಿಲ್‌ನಲ್ಲಿ ಇಂದಿರಾ ಪ್ರಿಯದರ್ಶಿನಿ ಪಾರ್ಕ್‌ ನಿರ್ಮಾಣ
– ಕಾಪಿಕಾಡ್‌ನ‌ಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ
– ಕಾಪಿಕಾಡ್‌- ಕುಂಟಿಕಾನ ಕಾಂಕ್ರೀಟ್‌ ಚರಂಡಿ, ಫುಟ್‌ಪಾತ್‌ ನಿರ್ಮಾಣ
– ಲಾಲ್‌ಬಾಗ್‌ನಿಂದ ಲೇಡಿಹಿಲ್‌ ಸರ್ಕಲ್‌ ವರೆಗೆ ಕಾಂಕ್ರೀಟ್‌ ಚರಂಡಿ, ಫುಟ್‌ಪಾತ್‌,
ಇಂಟರ್‌ಲಾಕ್‌ ನಿರ್ಮಾಣ

ದೇರೆಬೈಲು ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಬಿಗ್‌ಬಜಾರ್‌ ಮೂಲಕ ರಾಮಕೃಷ್ಣ ವಿದ್ಯಾರ್ಥಿ ನಿಲಯ, ಪಿಡಬ್ಲ್ಯುಡಿ ಕ್ವಾಟ್ರರ್ಸ್‌, ಚಿಲಿಂಬಿ ಮೂಲಕ ಕೋಟೆಕಣಿ. ಇನ್ನೊಂದು ಭಾಗದಲ್ಲಿ ಬಿಗ್‌ಬಜಾರ್‌ನಿಂದ ಕುಂಟಿಕಾನ, ಇನ್ಫೋಸಿಸ್‌ ಮುಂಭಾಗದ ಸಂಕೇಶ, ದಡ್ಡಲುಕಾಡು, ಕೊಟ್ಟಾರ ಕ್ರಾಸ್‌, ಕೋಟೆದಕಣಿ, ಆದರ್ಶನಗರ, ಹ್ಯಾಟ್‌ಹಿಲ್‌, ಲೇಡಿಹಿಲ್‌, ಚಿಲಿಂಬಿ, ಕಾಪಿಕಾಡ್‌, ಡಾ| ಕಶ್ಮೀರ್‌ ಮಥಾಯಿಸ್‌ ರಸ್ತೆ.

ಒಟ್ಟು ಮತದಾರರು 7000
ನಿಕಟಪೂರ್ವ ಕಾರ್ಪೊರೇಟರ್‌-ರಜನೀಶ್‌ (ಕಾಂಗ್ರೆಸ್‌)

ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ
ವಾರ್ಡ್‌ನ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಶ್ರಮವಹಿಸಿದ್ದೇನೆ. ಆದರೂ ವಾರ್ಡ್‌ನ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ. ಅದನ್ನು ಎಡಿಬಿ ಯೋಜನೆಯಲ್ಲಿ ಪರಿಹರಿಸುವ ಯೋಜನೆ ರೂಪಿಸಲಾಗಿತ್ತು. ವಾರ್ಡ್‌ನ ಶೇ.90ರಷ್ಟು ಮುಖ್ಯ ರಸ್ತೆ ಕಾಂಕ್ರೀಟ್‌ ಮಾಡಲಾಗಿದೆ. ಶೇ.70ರಷ್ಟು ಒಳರಸ್ತೆಗೆ ಕಾಂಕ್ರೀಟ್‌ ಕಾಮಗಾರಿಗಳು ನಡೆದಿದೆ.
ರಜನೀಶ್‌

-  ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next