Advertisement

ಮಕ್ಕಳ ಬಿಸಿಯೂಟಕ್ಕೆ ನೀರಿನ ಸಮಸ್ಯೆ ಅಡ್ಡಿಯಾಗದು: ನಾಯ್ಕ

11:09 AM May 29, 2019 | Suhan S |

ಕಾರವಾರ: ಶಾಲಾ ಪ್ರಾರಂಭೋತ್ಸವಕ್ಕೆ ನೀರಿನ ಸಮಸ್ಯೆ ಅಡ್ಡಿಯಾಗುವುದಿಲ್ಲ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ್‌ ನಾಯ್ಕ ಅಭಿಪ್ರಾಯಪಟ್ಟರು.

Advertisement

ಜಿಪಂನಲ್ಲಿ ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇ 29 ರಿಂದ ಜಿಲ್ಲಾದ್ಯಂತ ಶಾಲೆಗಳು ಪುನಾರಂಭಗೊಳ್ಳುತ್ತಿದ್ದು ಜಿಲ್ಲೆಯ ಕೆಲವೆಡೆ ನೀರಿನ ಸಮಸ್ಯೆ ತಲೆದೋರಿ ಬಿಸಿಯೂಟ ತಯಾರಿಕೆ ಸೇರಿದಂತೆ ಶಾಲೆ ನಡೆಸಲು ಸಮಸ್ಯೆ ಎದುರಾಗಬಹುದು ಎಂದು ಸಭೆಯಲ್ಲಿ ಕೆಲವು ಸದಸ್ಯರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಎರಡೂ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಶಾಲಾ ಪ್ರಾರಂಭಕ್ಕೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾದ್ಯಂತ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಪಂಗಳಿಗೆ ಅನುದಾನ ನೀಡಿ ಜವಾಬ್ದಾರಿ ವಹಿಸಲಾಗಿದೆ. ಹಳ್ಳಿ ಶಾಲೆಗೂ ನೀರಿನ ಸರಬರಜು ಮಾಡಬೇಕು. ಈ ವಿಷಯವನ್ನು ಸಂಬಂಧಿಸಿದ ಬಿಇಒಗಳು ನಿರ್ವಹಿಸಬೇಕಿದೆ. ಆಯಾ ಉಪ ನಿರ್ದೇಶಕರು ಅಂತಹ ಯಾವುದೇ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಪೂರ್ವ ನಿಗದಿಯಂತೆ ಮೇ 29ರಂದೇ ಜಿಲ್ಲಾದ್ಯಂತ ಶಾಲಾ ಪ್ರಾರಂಭೋತ್ಸವ ಆಗಬೇಕು ಎಂದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ನಾಗಾಂಜಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ಕೀರ್ತಿ ತಂದಿದ್ದಾರೆ. ಅಲ್ಲದೆ ಹಲವಾರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಅತ್ಯಧಿಕ ಅಂಕಗಳಿಸಿದ್ದಾರೆ. ಅಂತಹ ಪ್ರತಿಭಾವಂತರನ್ನು ಜಿಪಂನಿಂದ ಗೌರವಿಸಲು ತೀರ್ಮಾನಿಸಲಾಯಿತು.

ಕೆಲವು ಶಾಲೆಗಳಲ್ಲಿ ಶಿಕ್ಷಕರ ವಯೋನಿವೃತ್ತಿ ಅಥವಾ ಸ್ವಯಂ ನಿವೃತ್ತಿ ನಂತರವೂ ಹೆಚ್ಚುವರಿ ಶಿಕ್ಷಕರು ಎಂದು ಪರಿಗಣಿಸಿ ವರ್ಗಾವಣೆ ಮಾಡುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಕೆಲವೆಡೆ 20-25 ವರ್ಷಗಳಿಂದಲೂ ವರ್ಗಾವಣೆಯಾಗದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ. ಶಾಲಾ ಶಿಕ್ಷಕರ ವರ್ಗಾವಣೆಗೆ ಸರಿಯಾದ ಮಾರ್ಗಸೂಚಿ ಅಗತ್ಯವಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು. ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗಳನ್ನು ತಯಾರಿಸಿ ಅನುಮೋದನೆ ಪಡೆಯುವಂತೆ ತೀರ್ಮಾನಿಸಲಾಯಿತು.

Advertisement

ಉಪಕಾರ್ಯದರ್ಶಿ ಶ್ಯಾಮಲಾ ಮಹಾಲೆ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next