ವಾಡಿ: ಊರೊಳಗೆ ನೀರು ಬಿಡ್ತೀರಿ. ತಾಂಡಾದೊಳಗ ನೀರು ಬರಲ್ಲ. ಅವರು ಮಾತ್ರ ಮನುಷ್ಯರು, ನಾವು ಮನುಷ್ಯರಲ್ಲ. ಕಲ್ಲು ಗಣಿ ಸುತ್ಯಾಡಿ ಗುಂಡದೊಳಗಿನ ನೀರು ಹಿಡಿತೀವಿ. 2 ಕಿ.ಮೀ. ದಾರಿ ನಡೆದು ನೀರು ಹೊರ್ತೀವಿ. ವೋಟ್ ಕೇಳ್ಲಾಕ್ ಬಂದೋರು ನೀರು ಕೊಡ್ಲಾಕ್ ಬರ್ತಿಲ್ಲ. ನಮ್ಮ ಕಷ್ಟ ಕೇಳ್ಲಾಕ್ ನೀವು ಅಧಿಕಾರಿಗಳೂ ಬಂದಿಲ್ಲ. ಹನಿ ನೀರಿಲ್ದೆ ಒದ್ದಾಡಾಕತ್ತೀವಿ. ನಳದಾಗ್ ನೀರು ಬರ್ತಿಲ್ಲ. ನೀವು ಮಾತ್ರ ತಣ್ಣಗ್ ಆಫಿಸ್‌ನ್ಯಾಗ್ ಕೂಡ್ತೀರಿ. ಜನರ ಬಗ್ಗೆ ನಿಮ್ಗ ಕಾಳಜಿ ಇಲ್ಲ ..!
ಹೀಗೆ ಖಾಲಿ ಕೊಡಗಳನ್ನು ಹಿಡಿದು ಹಳಕರ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾವೇರಿ ರಾಠೊಡ ವಿರುದ್ಧ ಅಬ್ಬರಿಸಿ ಬೆವರಿಳಿಸಿದ್ದು ಬಳವಡಗಿ ಗ್ರಾಮದ ತಾಂಡಾ ಬಡಾವಣೆಯ ನಿವಾಸಿಗಳು.
ಸೋಮವಾರ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಷ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ನೇತೃತ್ವದಲ್ಲಿ ಪಿಡಿಒಗೆ ಮುತ್ತಿಗೆ ಹಾಕಿದ ಗ್ರಾಮದ ಮಹಿಳೆಯರು, ಕುಡಿಯುವ ನೀರಿಗಾಗಿ ಆಗ್ರಹಿಸಿ ವಾಗ್ವಾದ ನಡೆಸಿದರು. ಕುಡಿಯಲು ನೀರು ಕೊಡದಿದ್ದರೆ ಗ್ರಾಪಂ ಮುತ್ತಿಗೆ ಮತ್ತು ರಸ್ತೆತಡೆ ಚಳವಳಿ ಮಾಡ್ತೀವಿ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಎಸ್‌ಯುಸಿಐ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ. ಬಳವಡಗಿ ಮಾತನಾಡಿ, ಗ್ರಾಮಕ್ಕೆ ನೀರು ಸರಬರಾಜು ಸ್ಥಗಿತಗೊಂಡು ಜನರು ಪರದಾಡುತ್ತಿದ್ದಾರೆ. ಕೂಡಲೇ ಬಳವಡಗಿ ಗ್ರಾಮದ ತಾಂಡಾ ಬಡಾವಣೆಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಬೇಕು ಎಂದರು.
ಮನವಿ ಸ್ವೀಕರಿಸಿದ ಹಳಕರ್ಟಿ ಗ್ರಾಪಂ ಪಿಡಿಒ ಕಾವೇರಿ ರಾಠೊಡ, ಈ ಮೊದಲು ಬಳವಡಗಿ ತಾಂಡಾಕ್ಕೆ ಟ್ಯಾಂಕರ್ ನೀರು ಪೂರೈಕೆ ಮಾಡಿದ್ದೇವು. ಪರಸ್ಪರ ಕಚ್ಚಾಟ ಶುರುವಾಗಿದ್ದರಿಂದ ಟ್ಯಾಂಕರ್ ನೀರು ಸ್ಥಗಿತಗೊಳಿಸಲಾಯಿತು. ನೀರು ಸರಬರಾಜು ಸಿಬ್ಬಂದಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾನೆ ಎಂಬ ಜನರ ದೂರಿನ ಮೇರೆಗೆ ಆತನನ್ನು ಅಮಾನತು ಮಾಡಲಾಗಿತ್ತು. ಈಗ ಮತ್ತೆ ಅದೇ ಸಮಸ್ಯೆ ಉಂಟಾಗಿದೆ. ಸಿಬ್ಬಂದಯನ್ನೇ ಬದಲಿಸುತ್ತೇನೆ. ನಾಳೆಯಿಂದಲೇ ಜನರಿಗೆ ಸಮರ್ಪಕ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಎಸ್‌ಯುಸಿಐ ಮುಖಂಡರಾದ ಮಲ್ಲಿನಾಥ ಹುಂಡೇಕಲ್, ಗೌತಮ ಪರತೂರಕರ, ರಾಘವೇಂದ್ರ ಅಲ್ಲಿಪುರ, ಶರಣು ಹೇರೂರ, ಚೌಡಪ್ಪ ಗಂಜಿ, ಗೋವಿಂದ, ಗ್ರಾಮದ ಮುಖಂಡ ಶಿವಪ್ಪ ಕೊದ್ದಡಗಿ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.