ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಭಾಗದ ಕೆಲವು ಬಡಾವಣೆಗಳಲ್ಲಿ ವಾಂತಿ ಭೇದಿ ಪ್ರಕರಣಗಳು ಹೆಚ್ಚಿರುವುದು ಕಂಡು ಬಂದಿದ್ದರಿಂದ ಪೂರೈಕೆಯಾಗುವ ಕುಡಿಯುವ ನೀರನ್ನು ಪರೀಕ್ಷಿಸಿ ವರದಿ ನೀಡುವಂತೆ ಮಹಾನಗರ ಪಾಲಿಕೆ ಆರೋಗ್ಯ ವಿಭಾಗ ಜಲಮಂಡಳಿಗೆ ಪತ್ರ ಬರೆದಿದೆ.
ಹಳೇ ಹುಬ್ಬಳ್ಳಿ, ಅಲ್ತಾಫ ನಗರ, ನೇಕಾರನಗರ, ಬಾಣಂತಿಕಟ್ಟಿ, ಇಂಡಿಪಂಪ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಂತಿ ಭೇದಿ ಪ್ರಕರಣಗಳ ಪ್ರಮಾಣ ಹೆಚ್ಚಾಗಿದ್ದರಿಂದ ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ಸಂಶಯ ವ್ಯಕ್ತಪಡಿಸುತ್ತಿರುವುದರಿಂದ ಪಾಲಿಕೆಯ ಆರೋಗ್ಯವಿಭಾಗ ಜಲಮಂಡಳಿಗೆ ಪತ್ರ ಬರೆದಿದೆ. ನಿರಂತರವಾಗಿ ನೀರು ಪರೀಕ್ಷೆಯ ವರದಿ ನೀಡುವಂತೆ ತಿಳಿಸಿದೆ. ಹಳೇ ಹುಬ್ಬಳ್ಳಿ ಭಾಗದ ಶಾಲೆಗಳಲ್ಲಿ ಕಳೆದ 10-12 ದಿನಗಳಿಂದ ವಾಂತಿ ಭೇದಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ಹಲವು ಮಕ್ಕಳು ಅನಾರೋಗ್ಯದ ಕಾರಣದಿಂದಾಗಿ ಶಾಲೆಗೆ ಗೈರಾಗಿದ್ದಾರೆ. ವಯಸ್ಕರು ಕೂಡ ಅನೇಕರು ಹೊಟ್ಟೆನೋವು, ವಾಂತಿ, ಭೇದಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಳೇ ಹುಬ್ಬಳ್ಳಿ ಭಾಗದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರಲ್ಲಿ ಹೆಚ್ಚಿನ ಸಂಖ್ಯೆಯವರು ವಾಂತಿ, ಭೇದಿ, ಹೊಟ್ಟೆನೋವು ಚಿಕಿತ್ಸೆಗೆ ಬರುತ್ತಿದ್ದಾರೆ. ಇದನ್ನು ಪರಿಗಣಿಸಿದ ಪಾಲಿಕೆ ಆರೋಗ್ಯ ವಿಭಾಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ನೀರು ಪೂರೈಕೆ ಕುರಿತು ಹಲವು ಸಮಸ್ಯೆಗಳಿವೆ. ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂಬುದು ಹಲವು ನಿವಾಸಿಗಳ ಆರೋಪ. ಸಮರ್ಪಕವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸದಿದ್ದರಿಂದ ಹಲವು ಬಾರಿ ಕುಡಿಯುವ ನೀರಿನಲ್ಲಿ ಕೊಳಚೆ ನೀರು ಸೇರುತ್ತದೆ. ಆದರೆ ಪೂರೈಕೆಯಾಗುವ ನೀರನ್ನೇ ಸಂಗ್ರಹಿಸಿಟ್ಟುಕೊಂಡು ಕುಡಿಯುವುದು ಅನಿವಾರ್ಯವಾಗಿದೆ ಎಂಬುದು ಜನರ ಅಳಲಾಗಿದೆ.
ಜಲಮಂಡಳಿ ಅಧಿಕಾರಿಗಳು ಈ ಆರೋಪವನ್ನು ಸಾರಾಸಗಾಟವಾಗಿ ತಳ್ಳಿಹಾಕುತ್ತಾರೆ. ಕುಡಿವ ನೀರಿನಲ್ಲಿ ಕೊಳಚೆ ನೀರು ಸೇರುವುದಿಲ್ಲ. ಜನರ ಆರೋಗ್ಯ ಸಮಸ್ಯೆಗೆ ಅಶುದ್ಧ ಕುಡಿಯುವ ನೀರಿನ ಪೂರೈಕೆ ಕಾರಣ ವಲ್ಲ. ಎಲ್ಲಿಯಾದರೂ ಕುಡಿಯುವ ನೀರಿನ ಪೈಪ್ ಒಡೆದಿರುವುದು ವರದಿಯಾದರೆ ಕೂಡಲೇ ದುರಸ್ತಿ ಮಾಡಲಾಗುವುದು ಎಂಬುದು ಅವರ ಅಭಿಪ್ರಾಯ. ಜಲಮಂಡಳಿ ನೀರಿನ ಪರೀಕ್ಷೆ ಮಾಡಿ ಪಾಲಿಕೆಗೆ ವರದಿ ನೀಡಿದ ನಂತರ ವಾಂತಿ, ಭೇದಿಗೆ ಕಾರಣ ಏನೆಂಬುದು ತಿಳಿಯಲಿದೆ. ಒಂದು ವೇಳೆ ಕುಡಿಯುವ ನೀರಿಗೆ ಕೊಳಚೆ ನೀರು ಸೇರುತ್ತಿರುವುದೇ ಇದಕ್ಕೆ ಕಾರಣವಾದರೆ ಇದನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಹೊಸ ಹುಬ್ಬಳ್ಳಿಗೆ ಹೋಲಿಕೆ ಮಾಡಿದರೆ ಹಳೇ ಹುಬ್ಬಳ್ಳಿ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದು ಅಲ್ಲಿನ ನಿವಾಸಿಗಳ ನಿರಂತರ ಆರೋಪ. ಹಳೇ ಹುಬ್ಬಳ್ಳಿ ಭಾಗದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿನ ನಿವಾಸಿ ಗಳಿಗೆ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕಿದೆ.
ಪಾಲಿಕೆ ಚುನಾವಣೆ ನಡೆಯದಿರುವ ಹಿನ್ನೆಲೆಯಲ್ಲಿ ಜನರ ಅಳಲು ಕೇಳಲು ಪಾಲಿಕೆ ಸದಸ್ಯರೇ ಇಲ್ಲದಂತಾಗಿದೆ. ಪಾಲಿಕೆ ಸದಸ್ಯರಿದ್ದರೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಕುರಿತು ಗಂಭೀರ ಚರ್ಚೆ ಮಾಡಿ ತುರ್ತು ಕ್ರಮಕ್ಕೆ ಆಗ್ರಹಿಸುತ್ತಿದ್ದರು. ಈಗ ಜನಪರ ಸಂಘಟನೆಗಳು ವಿಷಯದ ಗಂಭೀರತೆಯನ್ನು ಅರಿತು ಹೋರಾಟ ಮಾಡಬೇಕು. ಮಹಾನಗರ ಆಡಳಿತಕ್ಕೆ ಬಿಸಿ ಮುಟ್ಟಿಸಬೇಕಿದೆ. ನಗರದ ನಿವಾಸಿಗಳಿಗೆಲ್ಲ ಶುದ್ಧ ಕುಡಿಯುವ ನೀರು ಒದಗಿಸುವುದು ಮಹಾನಗರ ಪಾಲಿಕೆ ಜವಾಬ್ದಾರಿ. ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡದೇ, ವಿಳಂಬ ಧೋರಣೆ ಅನುಸರಿಸದೇ ಶೀಘ್ರವಾಗಿ ಕಾರ್ಯೋನ್ಮುಖರಾಗಬೇಕಿದೆ.
–ವಿಶ್ವನಾಥ ಕೋಟಿ