Advertisement

ಮುದ್ರಾಡಿ ಪರಿಸರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆ

12:19 AM May 22, 2019 | sudhir |

ಹೆಬ್ರಿ: ಇಲ್ಲಿಗೆ ಸಮೀಪದ ಮುದ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಕಂಗಾಲಾಗಿದ್ದಾರೆ.

Advertisement

ಪಂಚಾಯತ್‌ ವ್ಯಾಪ್ತಿಯಲ್ಲಿ ಬಾವಿ, ಕೆರೆ ತೋಡುಗಳು ಬತ್ತಿಹೋಗಿದ್ದು ಕಳೆದ ಒಂದು ತಿಂಗಳಿಂದ ನೀರಿನ ಸಮಸ್ಯೆ ಇನ್ನಿಲ್ಲದಂತೆ ಇದೆ. ಹೆಚ್ಚಿನ ಮನೆಗಳಲ್ಲಿ ತೆರೆದ ಬಾವಿ ಇದೆಯಾದರೂ ನೀರಿನ ಸೆಲೆ ಇಲ್ಲ. ಜರುವತ್ತು ಹೊಳೆಯ ಕಲ್ಲಗುಂಡಿ ಮತ್ತು ಕಾನ್ಗುಂಡಿಯಲ್ಲಿ ಜಲಮೂಲವೇ ಇಲ್ಲ. ಕೃಷಿ , ತೋಟಗಳು, ಸುಟ್ಟುಹೋಗಿವೆ. ಜಾನುವಾರುಗಳಿಗೂ ನೀರಿಲ್ಲ. ಕೃಷಿಕರು ಹೈನುಗಾರಿಕೆ ಮಾಡಲಾಗದೆ ಕಷ್ಟಕ್ಕೀಡಾಗಿದ್ದಾರೆ.

ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 5ಸಾವಿರಕ್ಕೂ ಮಿಕ್ಕಿ ಗ್ರಾಮಸ್ಥರಿದ್ದು ಸುಮಾರು 2ಸಾವಿರ ಕುಟುಂಬಗಳಿವೆ. ಸುಮಾರು 20 ಬೋರ್‌ವೆಲ್ಗಳಿದ್ದು ಕೇವಲ 8 ಬೋರ್‌ವೆಲ್ಗಳಲ್ಲಿ ನೀರು ಸಿಗುತ್ತದೆ. ಸುಮಾರು 15 ತೆರೆದ ಬಾವಿಗಳಿದ್ದು ಕೇವಲ 3 ರಲ್ಲಿ ಮಾತ್ರ ನೀರಿದೆ. 12 ಮನೆಗಳಿಗೆ ನಳ್ಳಿ ನೀರಿನ ವ್ಯವಸ್ಥೆ ಇದ್ದು, 126 ಮನೆಗಳಿಗೆ ಟ್ಯಾಂಕರ್‌ ಮೂಲಕ 2 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ ಮುದ್ರಾಡಿ ಪಂಚಾಯತ್‌ಗೆ ಪ್ರತ್ಯೇಕ ಟ್ಯಾಂಕರ್‌ ಇಲ್ಲದ ಕಾರಣ ಚಾರ ಪಂಚಾಯತ್‌ ಟ್ಯಾಂಕರನ್ನೇ ಅವಲಂಬಿಸಿದೆ. ಇದರಿಂದ ನೀರು ವಿತರಣೆ ವಿಳಂಬವಾಗುತ್ತಿದೆ ಎಂಬ ದೂರುಗಳಿವೆ.

ಕೆಲಕಿಲ ಪ್ರದೇಶ ನಿರ್ಲಕ್ಷ

ಕೆಲಕಿಲ ಪ್ರದೇಶದಲ್ಲಿ ಈ ಬಾರಿ ಹೆಚ್ಚಿನ ಮನೆಗಳ ಬಾವಿ ಬತ್ತಿದ್ದು ಸಮಸ್ಯೆಯಾಗಿದೆ. ಪಂಚಾಯತ್‌ನಿಂದಲೂ ನೀರು ಸರಿಯಾಗಿ ಬರುತ್ತಿಲ್ಲ. ಟ್ಯಾಂಕರ್‌ ನೀರೂ ಸರಿಯಾಗಿ ಸಿಗುತ್ತಿಲ್ಲ. ಮೂರು ದಿನಗಳಿಗೊಮ್ಮೆ ಕೊಡುವ ನೀರು ಕೂಡ ಸರಿಯಾಗಿ ಕೊಡುತ್ತಿಲ್ಲ. ಈ ಪ್ರದೇಶ ನಿರ್ಲಕ್ಷಿಸಲಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

Advertisement

ಟ್ಯಾಂಕರ್‌ ಮೂಲಕ ನೀರು

ಪಂಚಾಯತ್‌ ವತಿಯಿಂದ ಸಮಸ್ಯೆ ಇರುವ ಪ್ರದೇಶಗಳಾದ ಕೆಲಕಿಲ, ಪಾದೆಗುಡ್ಡೆ, ಜರುವತ್ತು, ಸುಬ್ಬಣ್ಣಕಟ್ಟೆ , ನೆಲ್ಲಿಕಟ್ಟೆ , ಬಲ್ಲಾಡಿ, ನೇರಳಪಲ್ಲೆ, ಎಲ್ಲಿಬೆಟ್ಟು, ತುಂಡುಗುಡ್ಡೆ, ಉಜೂರು ಹಾಗೂ ಕಬ್ಬಿನಾಲೆಯ ಕೊಂಕಣಾರಬೆಟ್ಟು, ಕಾಪೋಳಿ, ನೀರಾಣಿ, ನೆಲ್ಲಿ ನಿವಾಸ ಮೊದಲಾದ ಕಡೆಗಳಿಗೆ ಟ್ಯಾಂಕರ್‌ ನೀರು ನೀಡಲಾಗುತ್ತಿದೆ ಎಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಹೂಳೆತ್ತುವ ಕಾರ್ಯವಾಗಲಿ

ಗ್ರಾ.ಪಂ. ವ್ಯಾಪ್ತಿಯ ಕೆರೆ,ಬಾವಿ,ಮದಗಗಳ ಹೂಳು ಎತ್ತವು ಕಾರ್ಯವಾಗಬೇಕಾಗಿದೆ. ಈಗಾಗಲೇ ಇರುವ ಉಪಯೋಗವಿಲ್ಲದ ಬೋರ್‌ವೆಲ್ಗಳ ದುರಸ್ತಿ,ಅಲ್ಲಲ್ಲಿ ಇಂಗುಗುಂಡಿಗಳ ನಿರ್ಮಾಣದಿಂದ ಅಂತರ್‌ರ್ಜಲವನ್ನು ಹೆಚ್ಚಿಸಬಹುದಾಗಿದೆ.

ಖಾಸಗಿ ಟ್ಯಾಂಕರ್‌ ಮೊರೆ

ಪಂಚಾಯತ್‌ನಿಂದ ಸಿಗುವ ನೀರು ಕಡಿಮೆ ಯಾಗುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಕೆಲಕಿಲ ಹಾಗೂ ಸುತ್ತಮುತ್ತಲಿನ ಭಾಗದ ಕೆಲವೊಂದು ಗ್ರಾಮಸ್ಥರು ಖಾಸಗಿ ಟ್ಯಾಂಕರ್‌ ಮೊರೆಹೋಗಿದ್ದಾರೆ.

– ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next