Advertisement

ಹಲವು ಕಡೆ ನೀರಿನ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಆಗ್ರಹ

01:00 AM Feb 26, 2019 | Team Udayavani |

ಕೋಟ: ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಡಿ ಗ್ರಾಮದ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಬೋರ್‌ವೆಲ್‌ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಎಪ್ರಿಲ್‌, ಮೇ ನಲ್ಲಿ  ಈ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

Advertisement

60 ಮನೆಗಳಿಗೆ ಸಮಸ್ಯೆ
ವಡ್ಡರ್ಸೆ ಗ್ರಾ.ಪಂ.ನ ಕಾವಡಿ ಗ್ರಾಮದ 1ನೇ ವಾರ್ಡ್‌ನ ಕಲ್ಲುಗದ್ದೆ, ಸಣಗಲ್ಲು ಪ್ರದೇಶದಲ್ಲಿ ಮತ್ತು  ಮಧುವನ ಕಾಲನಿಯಲ್ಲಿ  ನೀರಿನ ಸಮಸ್ಯೆ ಇದೆ. ಇಲ್ಲಿಗೆ ನೀರು ಸರಬರಾಜು ಮಾಡುವ ಮಾನಂಬಳ್ಳಿಯ ಬೋರ್‌ವೆಲ್‌ ಹಾಳಾಗಿದೆ ಹಾಗೂ ಸ್ಥಳೀಯ ಮತ್ತೂಂದು ಬೋರ್‌ನಲ್ಲಿ  ನೀರಿನ ಕೊರತೆ ಎದುರಾಗಿದೆ. ಹೀಗಾಗಿ ಇಲ್ಲಿನ 60ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರು  ಪೂರೈಕೆಯಾಗುತ್ತಿಲ್ಲ. ಕಾವಡಿ 2ನೇ ವಾರ್ಡ್‌ನ ಎಸ್‌.ಟಿ. ಕಾಲನಿಯ ಹತ್ತಾರು ಮನೆಗಳಿಗೆ ನೀರಿನ ಸಮಸ್ಯೆ ಇದೆ. ಇಲ್ಲಿಯೂ ಕೂಡ ಬೋರ್‌ವೆಲ್‌ ಸಮಸ್ಯೆಯಿಂದ ಈ ರೀತಿಯಾಗಿದೆ ಹಾಗೂ ಈ ಕುರಿತು ಈ ವಾರ್ಡ್‌ನ ಸದಸ್ಯರಾದ ಕುಶಲ ಶೆಟ್ಟಿಯವರು ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದಾರೆ.

ಹೊಸ ಬೋರ್‌ ಕೈಕೊಟ್ಟರೆ ಸಂಕಷ್ಟ
ಸಮಸ್ಯೆಯನ್ನು ಈಗಾಗಲೇ ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದ್ದು ಅನಂತರ ಹೊಸ ಬೋರ್‌ವೆಲ್‌ ಮಂಜೂರಾಗಿದೆ. ಇದರಲ್ಲಿ ಅಗತ್ಯ ಪ್ರಮಾಣದಷ್ಟು ನೀರು ದೊರೆತರೆ ಸಮಸ್ಯೆ ಪರಿಹಾರವಾಗಲಿದೆ. ಇಲ್ಲವಾದರೆ ಮತ್ತೆ ಸಮಸ್ಯೆ ಮುಂದುವರಿಯಲಿದೆ.

ಸಮಸ್ಯೆ ನೀಗಿಸಲು ಸಾಕಷ್ಟು ಕಸರತ್ತು
ಈ ಹಿಂದೆ ಇಲ್ಲಿನ ಎಂ.ಜಿ.ಕಾಲನಿ, ಉಪ್ಲಾಡಿ ತೆಂಕಬೆಟ್ಟು ಮುಂತಾದ ಕಡೆಗಳಲ್ಲಿ ಸಾಕಷ್ಟು ನೀರಿನ ಸಮಸ್ಯೆ  ಇತ್ತು ಹಾಗೂ ಪ್ರತಿ ವರ್ಷ ಅಲ್ಲಿನ ಸ್ಥಳೀಯರು ನೀರಿಗಾಗಿ ಹೋರಾಟಕ್ಕಿಳಿಯುತ್ತಿದ್ದರು. ಆದರೆ ಕಳೆದ ಎರಡು-ಮೂರು ವರ್ಷದ ಹಿಂದೆ ಯಾಳಕ್ಲುವಿನಲ್ಲಿ  ಹೊಸ ಬಾವಿ ನಿರ್ಮಿಸಿ, ಪೈಪ್‌ಲೈನ್‌ ಅಳವಡಿಸಿ ನೀರು ಸರಬರಾಜು ಮಾಡಿ ಪರಿಹರಿಸಲಾಗಿದೆ ಹಾಗೂ ತೆಂಕುಬೆಟ್ಟಿನ ಸಮಸ್ಯೆ ಕೂಡ ಸಾಕಷ್ಟು ಪರಿಹಾರವಾಗಿದೆ.

ಕೋಟ ಗ್ರಾ.ಪಂ. ವ್ಯಾಪ್ತಿಯ ಹಲವು ಕಡೆಗಳಲ್ಲಿ ಸಮಸ್ಯೆ 
ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರು ಕಾಲನಿ ಹಾಗೂ ಪಡುಕರೆ ಕಾಲೇಜು ಅಸುಪಾಸಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿನ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ.  ಎಪ್ರಿಲ್‌, ಮೇ ತಿಂಗಳಲ್ಲಿ  ಇಲ್ಲಿನ ಬಾವಿಗಳ ನೀರಿನ ಮಟ್ಟ ಇನ್ನಷ್ಟು ಕಡಿಮೆಯಾಗಲಿದ್ದು ಆಗ ಮತ್ತಷ್ಟು ಸಮಸ್ಯೆ ಹೆಚ್ಚಲಿದೆ. ಹೀಗಾಗಿ ಅಗತ್ಯವಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಚಿಂತ ಇದೆ ಎಂದು ಗ್ರಾ.ಪಂ. ಮುಖ್ಯಸ್ಥರು ತಿಳಿಸಿದ್ದಾರೆ.

Advertisement

ಬೇಕಿದೆ ಶಾಶ್ವತ ಪರಿಹಾರದ ಬೃಹತ್‌ ಯೋಜನೆ
ವಡ್ಡರ್ಸೆಯಲ್ಲಿ ಹಿಂದಿನ  ವರ್ಷಗಳಿಗೆ ಹೋಲಿಸಿದರೆ ಈಗ ನೀರಿನ ಮಟ್ಟ ಸಾಕಷ್ಟು ಕುಸಿಯುತ್ತಿದೆ. ಹೀಗಾಗಿ ಬೇರೆ ಬಾವಿಗಳಿಂದ ನೀರನ್ನು ಹೋಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಎರಡು ದಿನಕ್ಕೊಮ್ಮೆ ಪಂಚಾಯತ್‌ನಿಂದ ನೀರು ಸರಬರಾಜು ಮಾಡುತ್ತಿದ್ದು ಮುಂದಿನ ದಿನದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.  ಹೀಗಾಗಿ ಬಾವಿ, ಬೋರ್‌ವೆಲ್‌ ಹೊರತುಪಡಿಸಿದ ನೀರಿನ ಮೂಲಗಳನ್ನು ಬಳಸಿಕೊಳ್ಳಬೇಕಿದೆ  ಹಾಗೂ ಇಲ್ಲಿ ಇದಕ್ಕೆ ಅನುಕೂಲಕರ ಪರಿಸ್ಥಿತಿ ಇದ್ದು ವಡ್ಡರ್ಸೆ ಗ್ರಾಮ ಪಂಚಾಯ ತ್‌ನ ಉತ್ತರದ ಗಡಿಭಾಗವಾದ ಅಚಾÉಡಿಯಿಂದ ಆರಂಭವಾಗಿ ವಡ್ಡರ್ಸೆ ಬನ್ನಾಡಿ, ಕಾವಡಿ ನಾಲ್ಕು ಗ್ರಾಮಗಳಿಗೆ ಹೊಂದಿಕೊಂಡು  ಸೀತಾ ನದಿಗೆ ಸಂಪರ್ಕ ಕಲ್ಪಿಸುವ ಹಿರಿಹೊಳೆ ಇಲ್ಲಿ ಸಮೃದ್ಧವಾಗಿ ಹರಿಯುತ್ತದೆ. ಹೀಗಾಗಿ ಈ ಹೊಳೆಗೆ ಯಾವುದಾದರು ಒಂದು ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ನೀರನ್ನು ಶುದ್ಧೀಕರಿಸಿ ಕುಡಿಯಲು ನೀಡುವ ಶಾಶ್ವತ ಯೋಜನೆಯೊಂದನ್ನು ಕಾರ್ಯಗತ ಗೊಳಿಸಿದಲ್ಲಿ ಸಂಪೂರ್ಣ ಸಮಸ್ಯೆ ಬಗೆಹರಿಯಲಿದೆ ಅಥವಾ ಕೆರೆ, ಮದಗಗಳ ಅಭಿವೃದ್ಧಿ, ಹೊಳೆಸಾಲಿನಲ್ಲಿ  ಬಾವಿ ನಿರ್ಮಾಣ ಮಾಡಿದರೂ ಸಮಸ್ಯೆ ಬಗೆಹರಿಯಬಹುದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ. 

ಬೋರ್‌ವೆಲ್‌ ಮಂಜೂರು
ಎರಡು ಕಡೆ ಬೋರ್‌ವೆಲ್‌ ಹಾಳಾಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಈಗಾಗಲೇ ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿದ್ದು ತುರ್ತು ಕಾಮಗಾರಿಯ ನಿಟ್ಟಿನಲ್ಲಿ ಬೋರ್‌ವೆಲ್‌ಗಾಗಿ 1ಲಕ್ಷ ರೂ ಮಂಜೂರು ಮಾಡಿದ್ದಾರೆ. ಹೊಸ ಬೋರ್‌ವೆಲ್‌ನಲ್ಲಿ  ಅಗತ್ಯದಷ್ಟು  ನೀರು ಸಿಕ್ಕರೆ ಈ ವರ್ಷದ ಸಮಸ್ಯೆ  ಬಗೆಹರಿಯಲಿದೆ. ನೀರಿನ ಅಂತರ್ಜಲ ಮಟ್ಟ ಕುಸಿಯುವುದರಿಂದ ಮುಂದೆ  ಶಾಶ್ವತ ಯೋಜನೆ ಅಗತ್ಯವಿದೆ.
-ಹರೀಶ್‌ ಶೆಟ್ಟಿ,  ಕಾವಡಿ 1ನೇ ವಾರ್ಡ್‌ ಸದಸ್ಯರು

ಸಮಸ್ಯೆ ಶೀಘ್ರ ಪರಿಹಾರ 
ನಮ್ಮ ಗ್ರಾ.ಪಂ.ನಲ್ಲಿ  ಕಾವಡಿ ಗ್ರಾಮ  ಹೊರತುಪಡಿಸಿ ಬೇರೆ ಕಡೆಯಲ್ಲಿ ಎರಡು ದಿನಕ್ಕೊಮ್ಮೆ ಪೂರೈಕೆ ಮಾಡುವಷ್ಟು ನೀರು ಲಭ್ಯವಾಗುತ್ತದೆ. ಬೋರ್‌ವೆಲ್‌ ಮಂಜೂರಾಗಿರುವುದರಿಂದ ಈಗಿರುವ ಸಮಸ್ಯೆ  ಸ್ವಲ್ಪ ದಿನದಲ್ಲೇ ಬಗೆಹರಿಯಲಿದೆ.
-ಉಮೇಶ್‌, ಪಿ.ಡಿ.ಒ. ವಡ್ಡರ್ಸೆ ಗ್ರಾ.ಪಂ.

ಕೋಟದ ಎರಡು ಕಡೆ ಸಮಸ್ಯೆ
ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರು ಹಾಗೂ ಪಡುಕರೆಯಲ್ಲಿ ನೀರಿನ ಸಮಸ್ಯೆ ಇದೆ. ಎರಡು-ಮೂರು ವರ್ಷದ ಹಿಂದೆ ಗಿಳಿಯಾರು ಭಾಗಕ್ಕೆ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗಿತ್ತು. ಅವಕಾಶವಿದ್ದರೆ ಈ ಬಾರಿ ಕೂಡ ಟ್ಯಾಂಕರ್‌ ನೀರು ನೀಡಲಾಗುವುದು.
-ವನಿತಾ ಎಸ್‌. ಆಚಾರ್ಯ, ಅಧ್ಯಕ್ಷರು ಕೋಟ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next