ಕುಷ್ಟಗಿ: ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಂತರ್ಜಲ ಪ್ರಮಾಣ ಕ್ರಮೇಣ ಕುಸಿಯುತ್ತಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ನೂರೆಂಟು ಬಾರಿ ಯೋಚಿಸಿ ಪರಿಹಾರ ಕ್ರಮ ಕೈಗೊಳ್ಳುವ ಅನಿವಾರ್ಯ ಬಂದಿದೆ.
ಕಳೆದ ಮುಂಗಾರು, ಹಿಂಗಾರು ಮಳೆ ಉತ್ತಮವಾದ ಹಿನ್ನೆಲೆಯಲ್ಲಿ ತಾಲೂಕಿನ 177 ಗ್ರಾಮಗಳಲ್ಲಿ ಬೇಸಿಗೆ ಆರಂಭದಲ್ಲಿ ಜನತೆಗೆ ನೀರಿನ ಕೊರತೆಯಾಗಿಲ್ಲ. ತಾಲೂಕಿನಲ್ಲಿ 36 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅಂತರ್ಜಲವೇ ಕುಡಿಯುವ ನೀರಿಗೆ ಆಧರ. ಕಳೆದ ಮಾರ್ಚ್ ತಿಂಗಳಿನಿಂದ ಏರುತ್ತಿರುವ ತಾಪಮಾನದಿಂದ ಅಂತರ್ಜಲ ಕಡಿಮೆಯಾಗುತ್ತಿದೆ. ಪ್ರಸಕ್ತ ತಿಂಗಳು ತಾಲೂಕಿನಲ್ಲಿ ಅಲ್ಲಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾಲೂಕಾಡಳಿತ, ತಾಪಂ ಹಾಗೂ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಸನ್ನದ್ಧವಾಗಿವೆ.
ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಲಭ್ಯತೆ ಕಡಿಮೆಯಾಗಿದ್ದು, 691 ಕೊಳವೆಬಾವಿಗಳ ಅವಶ್ಯಕತೆ ಇದೆ. ಸದ್ಯ 491 ಕೊಳವೆಬಾವಿ ಆಧಾರಿತ ಕುಡಿಯುವ ನೀರಿನ ವ್ಯವಸ್ಥೆ ಇದೆ. ಈ ನಡುವೆಯೂ 24 ಗ್ರಾಮಗಳಲ್ಲಿ ಬಾಡಿಗೆ ಆಧಾರಿತ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಭವಿಷ್ಯದಲ್ಲಿ 72 ಕೊಳವೆಬಾವಿ ಪಡೆದು ಗ್ರಾಮಗಳಿಗೆ ನೀರು ಪೂರೈಸಲು ಉದ್ದೇಶಿಸಲಾಗಿದೆ. 144 ಗ್ರಾಮಗಳಲ್ಲಿ ತಕ್ಷಣ ಕೊಳವೆಬಾವಿ ಕೊರೆಸಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಂತರ್ಜಲ ಪ್ರಮಾಣದ ಆಧಾರವಾಗಿ 129 ಕೊಳವೆಬಾವಿ ಕೊರೆಸಲು ಉದ್ದೇಶಿಸಲಾಗಿದೆ.
ಜಾಗೀರಗುಡದೂರು ಗ್ರಾಪಂ ವ್ಯಾಪ್ತಿಯ ಗುಡ್ಡದ ದೇವಲಾಪೂರ ಗ್ರಾಮದಲ್ಲಿ ಅಂತರ್ಜಲ ಪಾತಳ ಕಂಡ ಹಿನ್ನೆಲೆಯಲ್ಲಿ ಪ್ರತಿವರ್ಷ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಕಳೆದ ವರ್ಷದಿಂದ ಪಕ್ಕದ ಗ್ರಾಮದಿಂದ ರೈತರೊಬ್ಬರ ಕೊಳವೆಬಾವಿಯಿಂದ ನೀರು ಪೂರೈಕೆ ಕಾರ್ಯ ನಿರಂತರವಾಗಿದೆ.
ಅರ್ಧದಷ್ಟು ಆರ್‌ಒ ನಿಷ್ಕ್ರಿಯ: ಜನತೆಗೆ ಶುದ್ಧ ನೀರಿನ ಲಭ್ಯತೆ ಹಿನ್ನೆಲೆಯಲ್ಲಿ ಆರಂಭಿಸಿರುವ ಶುದ್ಧ ನೀರಿನ ಘಟಕಗಳಲ್ಲಿ ಸುಮಾರು ಅರ್ಧದಷ್ಟು ಸ್ಥಗಿತಗೊಂಡಿವೆ. ತಾಲೂಕಿನ 162 ಶುದ್ಧ ನೀರಿನ ಘಟಕಗಳ ಪೈಕಿ 89 ಘಟಕಗಳು ಚಾಲ್ತಿಯಲ್ಲಿವೆ. ಉಳಿದ 73 ಶುದ್ಧ ನೀರಿನ ಘಟಕಗಳಲ್ಲಿ ಕೆಲವು ದುರಸ್ತಿಯಾಗಿದ್ದು, ಕೆಲವನ್ನು ಆರಂಭಿಸಿ ಇಲ್ಲ. ಬಿಜಕಲ್ ಗ್ರಾಪಂ ವ್ಯಾಪ್ತಿಯ ಟೆಂಗುಂಟಿ ಗ್ರಾಮದ 2 ಶುದ್ಧ ನೀರಿನ ಘಟಕ ಆರಂಭಿಸದ ಕಾರಣ ಜನ ಅನಿವಾರ್ಯವಾಗಿ ಫ್ಲೋರೈಡ್ ನೀರು ಕುಡಿಯುವಂತಾಗಿದೆ. ಯರಗೇರಾ, ಕಂದಕೂರು, ಕಾಟಾಪೂರ, ಹಾಬಲಕಟ್ಟಿ, ಕೇಸೂರು, ಲಿಂಗದಳ್ಳಿ, ಬಿಳೆಕಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳನ್ನು ಸಮರ್ಪಕವಾಗಿ ಬಳಸಿಕೊಂಡಿವೆ. ಕೆರೆ ಪುನರುಜ್ಜೀವನ ಮರೀಚಿಕೆ: ತಾಲೂಕಿನಲ್ಲಿ 41 ಕೆರೆಗಳಿದ್ದು, ಇದರಲ್ಲಿ 20 ಕೆರೆಗಳು ಜಿನಗು ಕೆರೆ, 21 ನೀರಾವರಿ ಕೆರೆಗಳಾಗಿವೆ. ಪ್ರತಿ ವರ್ಷವೂ ಮಳೆಗಾಲ ಅಸಮರ್ಪಕವಾದ ಹಿನ್ನೆಲೆಯಲ್ಲಿ ಎಲ್ಲ ಕೆರೆಗಳು ಜಿನಗು ಕೆರೆಗಳಂತಾಗಿವೆ. ಇವುಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿಡಶೇಸಿ ಕೆರೆ ಹಾಗೂ ರಾಯನ ಕೆರೆ ಅಭಿವೃದ್ಧಿಗೊಂಡಿದ್ದು ತಾಲೂಕಿನ ಉಳಿದ ಕೆರೆಗಳಿಗೆ ಆ ಭಾಗ್ಯ ಒದಗಿ ಬಂದಿಲ್ಲ. ಈ ಹಂತದಲ್ಲಿ ಕೆರೆ ತುಂಬುವ ಯೋಜನೆ ಕಾಮಗಾರಿ ಆರಂಭವಾಗಿದ್ದು, ಕೆರೆಗಳಲ್ಲಿ ಹೂಳು ಹಾಗೂ ಕೆರೆಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.
ಮಂಜುನಾಥ ಮಹಲಿಂಗಪುರ