Advertisement

ನೀರಿಗಾಗಿ ಬವಣಿಸುವ ನಿವಾಸಿಗಳು 

08:10 PM Aug 26, 2021 | Team Udayavani |

ಕೊಲ್ಲೂರು: ಕೊಲ್ಲೂರು ಗ್ರಾ.ಪಂ. ವ್ಯಾಪ್ತಿಯ ಮಾವಿನಕಾರು, ಬಾವಡಿ, ಸಲಗೇರಿ, ಹಾಗೂ ನುಕ್ಸಾಲ್‌ನಲ್ಲಿರುವ ಗ್ರಾಮವಾಸಿಗಳ ಬೇಡಿಕೆ ಒಂದಲ್ಲ, ಎರಡಲ್ಲ ಹಲವು ಬೇಡಿಕೆಗಳು.  ಇಲ್ಲಿನ ನಿವಾಸಿಗಳು ಬೇಸಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿಯ ಗೋಳು ಇಂದಿಗೂ ಮುಗಿದಿಲ್ಲ.

Advertisement

ಅಭಯಾರಣ್ಯದ ನಡುವೆ ಪುಟ್ಟ ಗ್ರಾಮ :

ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸಾಗುವ ಹಾದಿಯ ನಡುವೆ ಸ್ವಾಗತ ಗೋಪುರದ ಒಂದು ಪಾರ್ಶ್ವದ ಮಣ್ಣಿನ ರಸ್ತೆಯಲ್ಲಿ ಸುಮಾರು 5 ಕಿ.ಮೀ. ದೂರ ಸಾಗಿದರೆ ಅಲ್ಲಿದೆ ಮಾವಿನಕಾರು ಗ್ರಾಮ. ಮುಂದುವರಿದರೆ ಬಾವಡಿ. ಮಾವಿನಕಾರಿನಲ್ಲಿ 28 ಮನೆಗಳಿದ್ದು, ಸುಮಾರು 300 ಪರಿಶಿಷ್ಟ ಪಂಗಡಗಳು ವಾಸವಾಗಿದ್ದಾರೆ. ಬಾವಡಿಯಲ್ಲಿ ವಾಸವಾಗಿರುವ 15 ಮನೆಗಳು ಪರಿಶಿಷ್ಟ ಪಂಗಡದವರದ್ದಾಗಿದೆ.

ಸರಿಸುಮಾರು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಬಾವಿ ಸೌಲಭ್ಯವಿದ್ದು, ಮಿಕ್ಕುಳಿದವರು ಎತ್ತರದ ಪ್ರದೇಶದಿಂದ ಹರಿದುಬರುವ ನೀರನ್ನು ಬಳಸಲು ಪೈಪ್‌ ಜೋಡಿಸಿ ಉಪಯೋಗಿಸುವ ಪರಿಸ್ಥಿತಿ ಇಂದು ಕೂಡ ಕಂಡುಬರುತ್ತಿದೆ. ಮಳೆಗಾಲದಲ್ಲಿ ಶುದ್ಧ ನೀರು ದಕ್ಕಿದರೂ ಬೇಸಗೆಯಲ್ಲಿ ಕೆಸರು ತುಂಬಿದ ನೀರನ್ನು ಬಳಸುವ ಪರಿಸ್ಥಿತಿ ಇದೆ.

ಶಾಲೆಯಿದ್ದರೂ ಮಕ್ಕಳಿಲ್ಲ :

Advertisement

ಮಾವಿನಕಾರಿನಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು ಇಲ್ಲಿ ಕೇವಲ 12 ಮಕ್ಕಳು ಮಾತ್ರ  ಬರುತ್ತಿದ್ದಾರೆ. ಮಿಕ್ಕುಳಿದ ಮಕ್ಕಳನ್ನು ಹೆತ್ತವ‌ರು ಕೊಲ್ಲೂರು ಹಾಗೂ ಕುಂದಾಪುರ ಹಾಸ್ಟೆಲ್‌ ಶಾಲೆಗೆ ಸೇರ್ಪಡೆಗೊಳಿಸಿರುವುದು ಮಕ್ಕಳ ಸಂಖ್ಯೆ ಇಳಿಮುಖವಾಗಲು ಕಾರಣವಾಗಿದೆ. ಅಲ್ಲದೆ ಇಲ್ಲಿ ಖಾಯಂ ಶಿಕ್ಷಕರ ಕೊರತೆ ಇದ್ದು ಆದರೆ ಇತ್ತೀಚೆಗೆ ಶಿಕ್ಷಕಿಯನ್ನು ನೇಮಿಸಲಾಗಿದೆ.

ಮುಕ್ತಿ ಕಾಣದ ಮಣ್ಣಿನ ರಸ್ತೆ :

ನೂರಾರು ವರ್ಷ ಕಳೆದರೂ ಈ ಭಾಗದ ನಿವಾಸಿಗಳು ಬೇಸಗೆಯಲ್ಲಿ ಧೂಳು ತುಂಬಿದ ಮಣ್ಣಿನ ರಸ್ತೆ ಹಾಗೂ ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಯಲ್ಲಿ ಸಾಗಬೇಕಾಗಿದೆ. ಅರಣ್ಯ ಇಲಾಖೆಯ ಕಾನೂನು ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದೆ. ರಾತ್ರಿ ಸಂಚಾರವಂತೂ ಹೇಳತೀರದು. ಕಾಡುಪ್ರಾಣಿಗಳ ಸಂಚಾರವಿರುವ ಈ ರಸ್ತೆಯಲ್ಲಿ ಈ ಭಾಗದ ಜನರು ಭಯದ ವಾತಾವರಣದಲ್ಲಿ ಸಾಗಬೇಕಾಗಿದೆ.

ಇತರ ಸಮಸ್ಯೆಗಳೇನು?:

  • ಕುಡಿಯುವ ನೀರಿಗೆ ಪೈಪ್‌ ಅಳವಡಿಸಲು ಬೇಡಿಕೆ ಬೇಸಗೆಯಲ್ಲಿ ಎದುರಾಗುವ ನೀರಿನ ಕ್ಷಾಮಕ್ಕೆ ಪರಿಹಾರವಾಗಿ ಕೊಲ್ಲೂರಿನಲ್ಲಿ ಈಗಾಗಲೇ ಆರಂಭಗೊಂಡಿರುವ ಕುಡಿಯುವ ನೀರಿನ ವ್ಯವಸ್ಥೆಗೆ ಪೂರಕವಾಗಿ  ಪೈಪ್‌ಲೈನ್‌ ಅಳವಡಿಕೆ ಮಾವಿನಕಾರಿನ ತನಕ ವಿಸ್ತರಿಸುವುದು ಸೂಕ್ತ ಇಲ್ಲದಿದ್ದಲ್ಲಿ ನೀರಿನ ಬವಣೆ ಇಲ್ಲಿನ ನಿವಾಸಿಗಳಿಗೆ ಸದಾ ಎದುರಾಗುತ್ತದೆ.
  • ವಿದ್ಯುತ್‌ ಸಂಪರ್ಕ ವ್ಯವಸ್ಥೆ  ಇಲ್ಲಿನ ನಿವಾಸಿಗಳ ಬಹಳಷ್ಟು ವರ್ಷಗಳ ಬೇಡಿಕೆಗಳಲ್ಲೊಂದಾದ ವಿದ್ಯುತ್‌ ಸಂಪರ್ಕ ವ್ಯವಸ್ಥೆಯನ್ನು  ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರ ಪ್ರಯತ್ನದಿಂದ ಒದಗಿಸಲಾಗಿದ್ದು, ಈ ಭಾಗದ ಮಂದಿಯ ಕತ್ತಲ ಜೀವನಕ್ಕೆ ಬೆಳಕು ಚೆಲ್ಲಿದಂತಾಗಿದೆ.

ಸೂಕ್ತ ಕ್ರಮಕೈಗೊಳ್ಳಿ:

ಈ ಭಾಗದ ನಿವಾಸಿಗಳ ಬೇಸಗೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಗ್ರಾ.ಪಂ  ಸೂಕ್ತ ಕ್ರಮಕೈಗೊಳ್ಳಬೇಕು.  ಕರುಣಾಕರ ಶೆಟ್ಟಿ, ಗ್ರಾಮಸ್ಥರು, ಮಾವಿನಕಾರು

ಅರಣ್ಯ ನೀತಿ ಅಡ್ಡಿ :

ಅರಣ್ಯ ಇಲಾಖೆಯ ನೀತಿ ರಸ್ತೆ ದುರಸ್ತಿಗೆ ಅಡ್ಡಿಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸಲಾಗಿದೆ.   –ರುಕ್ಕನ ಗೌಡ, ಪಿಡಿಒ, ಕೊಲ್ಲೂರು ಗ್ರಾ.ಪಂ.

 

ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next