Advertisement

ಇಂದ್ರಾಳಿ ದಲಿತ ಕಾಲನಿಯಲ್ಲಿ ಹನಿ ನೀರಿಗೂ ತತ್ವಾರ

10:40 PM Apr 28, 2019 | sudhir |

ಉಡುಪಿ: ಹನಿ ನೀರಿಗಾಗಿ ಪರದಾತ್ತಿರುವ ಜನ, ನೀರಿಗಾಗಿ ಕಾದು ಕೂತರೆ ತುತ್ತಿಗೆ ಕತ್ತರಿ ಬೀಳುವ ಆತಂಕ. ಇಂತಹ ಸ್ಥಿತಿ ಇರುವುದು ಇಂದ್ರಾಳಿ ವಾರ್ಡ್‌
ನ ಮಂಚಿಯ ದಲಿತ ಕಾಲನಿಯಲ್ಲಿ.

Advertisement

ವರ್ಷಗಳ ಸಮಸ್ಯೆಗೆ ಪರಿಹಾರವಿಲ್ಲ!
ಇಂದ್ರಾಳಿ ವಾರ್ಡ್‌ ವ್ಯಾಪ್ತಿಯಲ್ಲಿ 1,250 ಮನೆಗಳಿವೆ. ಸುಮಾರು 6,000 ಜನಸಂಖ್ಯೆ ಇದೆ. ಇತರೆ ವಾರ್ಡ್‌ಗಳಂತೆ ಈ ವಾರ್ಡ್‌ಗೆ ಮೂರು ದಿನಕ್ಕೊಮ್ಮೆ ನೀರು ಬಿಟ್ಟರೂ ಎತ್ತರದಲ್ಲಿರುವ ದಲಿತ ಕಾಲನಿಗಳಿಗೆ ನೀರು ತಲುಪುತ್ತಿಲ್ಲ. ಇದು ಇಂದು ನಿನ್ನೆಯ ಕಥೆಯಲ್ಲ, ಆನೇಕ ವರ್ಷದಿಂದ ಈ ಸಮಸ್ಯೆ ಉಲ್ಬಣಿಸುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂಬ ಆರೋಪವಿದೆ.

ವಿ.ಪಿ. ನಗರ, ಇಂದ್ರಾಳಿ ರೈಲ್ವೇ ನಿಲ್ದಾಣ, ದುರ್ಗಾನಗರ, ಹಯಗ್ರೀವ ನಗರದ ಕೆಲವೊಂದು ಮನೆಗಳಲ್ಲಿ ಬಾವಿ ಹಾಗೂ ನೀರಿನ ದಾಸ್ತಾನಿಗೆ ಪರ್ಯಾಯ ವ್ಯವಸ್ಥೆ ಇದೆ. ಆದರೆ ಎತ್ತರದ ಪ್ರದೇಶ‌ ಮಂಜುಶ್ರೀ ನಗರ, ಮಂಚಿ ಕೆಳ ಮಂಚಿ, ಮಂಚಿ ಶಾಲೆ, ಮಂಚಿ ಕುಮೇರಿಯ ಮನೆಗಳಲ್ಲಿ ನೀರಿನ ಸಂಗ್ರಹಣೆಗೆ ಅಗತ್ಯವಿರುವ ವ್ಯವಸ್ಥೆ ಇಲ್ಲದ ಕಾರಣ ನೀರಿನ ಸಮಸ್ಯೆ ಈ ಪ್ರದೇಶದಲ್ಲಿ ತುಸು ಹೆಚ್ಚಾಗಿದೆ.

ಸ್ನಾನಕ್ಕೆ ಬೇರೆ ಪ್ರದೇಶಕ್ಕೆ ತೆರಳಬೇಕು
ಬಸವಳಿದು ಬಂದರೆ ಸ್ನಾನ ಮಾಡಲು ಸಹ ನೀರು ಸಿಗುತ್ತಿಲ್ಲ. ಒಮ್ಮೆ ಹಾಕಿಕೊಂಡ ಬಟ್ಟೆಯನ್ನು ಮತ್ತೆ ಹಾಕಿಕೊಳ್ಳಬೇಕಾದ ಪರಿಸ್ಥಿತಿ. ನಗರಸಭೆಯಿಂದ ಬಿಡುವ ನೀರು ಎತ್ತರ ಪ್ರದೇಶದ ಮನೆಗಳಿಗೆ ತಲುಪುತ್ತಿಲ್ಲ ಎನ್ನುತ್ತಾರೆ ಪ.ಪಂ. ಕಾಲನಿಯ ವಿಜಯ.

ಊಟಕ್ಕಿಂತ ನೀರೇ ದುಬಾರಿ!
ಮೇ ತಿಂಗಳಿನಲ್ಲಿ ಮಗನ ಮದುವೆ ಇದೆ. ಸಮಾರಂಭದ ನಿಮಿತ್ತ ಸಂಬಂಧಿಕರು ಬರುತ್ತಾರೆ. ಇದೇ ರೀತಿ ನೀರಿನ ಸಮಸ್ಯೆ ಎದುರಾದರೇನು ಎಂಬ ಚಿಂತೆ ಕಾಡುತ್ತಿದೆ. ಮದುವೆ ಊಟದ ಖರ್ಚಿಗಿಂತ ನೀರಿನ ಖರ್ಚು ಹೆಚ್ಚಾಗುತ್ತದೆ ಎನ್ನುವ ಆತಂಕ ಕಾಡುತ್ತಿದೆ ಎನ್ನುತ್ತಾರೆ ಮಂಜುಶ್ರೀ ನಗರದ ಆನಂದ.

Advertisement

ಇದುವರೆೆಗೂ ಕಾಣದ ಜಲಕ್ಷಾಮ
ದುರ್ಗಾ ನಗರದಲ್ಲಿ 33 ವರ್ಷದಿಂದ ವಾಸಿಸುತ್ತಿದ್ದೇನೆ. ಆದರೆ ಇದುವರೆಗೆ ಈ ತರಹದ ಜಲಕ್ಷಾಮ ಕಂಡಿಲ್ಲ. ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದೀಗ ನಗರಸಭೆಯಿಂದ ಮೂರು ದಿನಕ್ಕೊಮ್ಮೆ ಬಿಡುವ ನೀರು ಸಹ ಸಾಕಾಗುತ್ತಿಲ್ಲ. ಮನೆಯಲ್ಲಿ 8 ಮಂದಿ ಇದ್ದೇವೆ. ಎಲ್ಲರೂ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಹೋಗುತ್ತೇವೆ. ನೀರಿಗಾಗಿ ಕಾದು ಕುಳಿತುಕೊಳ್ಳಲು ಒಬ್ಬರು ರಜೆ ಪಡೆದು ಮನೆಯಲ್ಲಿ ಇರುತ್ತಾರೆ ಎನ್ನುತ್ತಾರೆ ಇಂದ್ರಾಳಿ ದುರ್ಗಾ ನಗರದ ಮೀನು ವ್ಯಾಪಾರಿ ಮಹಿಳೆ ವನಜಾ.

ವಾರ್ಡ್‌ ಜನರ ಬೇಡಿಕೆ
– ಟ್ಯಾಂಕರ್‌ ನೀರು ಒದಗಿಸಿ
– ನೀರು ದಾಸ್ತಾನು ಮಾಡಲು ಪರ್ಯಾಯ ವ್ಯವಸ್ಥೆ
– ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಒತ್ತಡ

ಓವರ್‌ ಹೆಡ್‌ ಟ್ಯಾಂಕ್‌ನಿಂದ ಸಮಸ್ಯೆಗೆ ಮುಕ್ತಿ
ಇಂದ್ರಾಳಿ ವಾರ್ಡ್‌ಗೆ ವಿ.ಪಿ. ನಗರದಲ್ಲಿ ಒಂದು ಓವರ್‌ ಹೆಡ್‌ ಟ್ಯಾಂಕ್‌ ಇದೆ. ಈ ಪ್ರದೇಶದಿಂದ ಸುಮಾರು ಮೂರೂವರೆ ಕಿ.ಮೀ. ದೂರದಲ್ಲಿರುವ ಮಂಚಿಗೆ ನೀರು ತಲುಪಬೇಕು. ಬೆಳಗ್ಗೆ 6ಕ್ಕೆ ನೀರು ಬಿಟ್ಟರೂ ಮಧ್ಯಾಹ್ನ 2 ಗಂಟೆವರೆಗೆ ತಲುಪುದಿಲ್ಲ. ಅದೇ ಪ್ರದೇಶದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾದರೆ ಈ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
-ಅಶೋಕ್‌, ಇಂದ್ರಾಳಿ ವಾರ್ಡ್‌ ನಗರಸಭೆ ಸದಸ್ಯ

ನೀರು ದಾಸ್ತಾನು ಮಾಡಲು ವ್ಯವಸ್ಥೆಯಿಲ್ಲ
ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದೀಗ ಐದಾರು ದಿನಗಳಿಗೊಮ್ಮೆ ಬರುವ ನೀರು ದಾಸ್ತಾನು ಮಾಡಲು ಟ್ಯಾಂಕ್‌ಗಳು ಇಲ್ಲ. ಮನೆಯಲ್ಲಿ ಇರುವ ಬಕೆಟ್‌, ಬಿಂದಿಗೆ, ಕ್ಯಾನ್‌ಗಳಲ್ಲಿ ತುಂಬಿ ಇಡುತ್ತೇವೆ. ಆದರೆ ಅದು ಕೇವಲ ಅಡುಗೆ ಮಾಡಲು ಮಾತ್ರ ಬಳಸಲಾಗುತ್ತದೆ ಎನ್ನುತ್ತಾರೆ ಮಂಚಿ ನಿವಾಸಿ ಜಯಂತಿ.

ಎತ್ತರದ ಕಾಲನಿಗಳಿಗೆ ನೀರಿಲ್ಲ
ಮಂಚಿಯಲ್ಲಿರುವ ದಲಿತ ಕಾಲನಿಯಲ್ಲಿ ನಗರಸಭೆಯಿಂದ ನಿರ್ಮಾಣವಾದ 5 ಅಡಿ ಎತ್ತರದ ಟ್ಯಾಂಕ್‌ಗಳಿವೆ. ಅದರಲ್ಲಿ ನೀರು ಸಂಗ್ರಹವಾದರೆ ಈ ಕಾಲನಿಗಳಿಗೆ ಅಷ್ಟಾಗಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ ಈ ಪ್ರದೇಶದ ವಾರ್ಡ್‌ನ ಇತರೆ ಎಲ್ಲ ಪ್ರದೇಶಗಳಿಗಿಂತ ಎತ್ತರವಾದ ಸ್ಥಳದಲ್ಲಿದೆ. ಬೇಸಗೆ ಕಾಲದಲ್ಲಿ ನೀರಿನ ಒತ್ತಡ ಕಡಿಮೆ ಇರುವುದರಿಂದ ಈ ಕಾಲನಿಗೆ ನೀರು ಬರುತ್ತಿಲ್ಲ.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next