Advertisement
ಹೌದು, ದಶಕಗಳ ಕಾಲ ಮಳೆ, ಬೆಳೆ ಕೊರತೆ ಅನುಭವಿಸಿ ಬರದ ಬವಣೆ ಎದುರಿಸಿದ ಚಿಕ್ಕಬಳ್ಳಾಪುರ ಜಿಲ್ಲೆ ಇಂದಿಗೂ ಶಾಶ್ವತ ನೀರಾವರಿ ಸೌಲಭ್ಯಗಳಿಲ್ಲದೆ ಪರದಾಡುತ್ತಿದೆ. ಯಾವುದೇ ಸರ್ಕಾರ ಬಂದರೂ, ಬದಲಾದರೂ ಜಿಲ್ಲೆಯ ಜನರ ನೀರಿನ ಬವಣೆ ಹಾಗೆ ಉಳಿದಿದೆ.
Related Articles
Advertisement
ಮೆಡಿಕಲ್ ಕಾಲೇಜು ಬಿಟ್ಟರೆ ಜಿಲ್ಲೆಯ ಅಭಿವೃದ್ಧಿ ಶೂನ್ಯ:
16 ವಸಂತಗಳನ್ನು ಪೂರೈಸಿರುವ ಚಿಕ್ಕಬಳ್ಳಾಪುರ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದಿದೆ. ಜಿಲ್ಲೆಗೆ ಮೆಡಿಕಲ್ ಕಾಲೇಜು ಒಂದು (ಇನ್ನೂ ಆರಂಭವಾಗಿಲ್ಲ) ಬಿಟ್ಟರೆ ಹೇಳಿಕೊಳ್ಳುವ ಸೌಕರ್ಯ ಸಿಕ್ಕಿಲ್ಲ. ಜಿಲ್ಲಾಡಳಿತ ಹೇಳುವ ಪ್ರಕಾರ ಜಿಲ್ಲೆಯಲ್ಲಿ 22 ಸಾವಿರಕ್ಕೂ ಅಧಿಕ ನಿವೇಶನ ರಹಿತರಿದ್ದಾರೆ. 10 ವರ್ಷದ ಹಿಂದೆ ಅಡಿಗಲ್ಲು ಹಾಕಿದ ಮಹಿಳಾ ಕಾಲೇಜು ಇತ್ತೀಚೆಗೆ ಉದ್ಘಾಟನೆಯಾಗಿದೆ. ಕಲಾ ಭವನ ಕಾಮಗಾರಿ ಕುಂಟುತ್ತಾ ಸಾಗಿದೆ. ಜಿಲ್ಲಾ ಕೇಂದ್ರಕ್ಕೆ ತಾಯಿ, ಮಗು ಆಸ್ಪತ್ರೆ ಬರೀ ಕನಸು ಎಂಬಂತಾಗಿದೆ. ಕೋಟಿ ಕೋಟಿ ವೆಚ್ಚದ ಗಾಜಿನ ಮನೆ ಕೆರೆಯಲ್ಲಿ ಅನಾಥವಾಗಿದೆ. ಜಿಲ್ಲಾ ಕೇಂದ್ರದಲ್ಲಿ ರಸ್ತೆಗಳ ಅಲೀಕರಣ ನನೆಗುದಿಗೆ ಬಿದ್ದಿದೆ. ಜಿಲ್ಲಾ ಕೇಂದ್ರದಲ್ಲಿ ಶೇ.40 ಒಳಚರಂಡಿ ವ್ಯವಸ್ಥೆ ಇಲ್ಲದಂತಾಗಿದೆ. ಕೃಷಿ, ಹೈನುಗಾರಿಕೆಗೆ ಪೂರಕವಾದ ಕೈಗಾರಿಕೆಗಳು ಜಿಲ್ಲೆಗೆ ಕಾಲಿಟ್ಟಿಲ್ಲ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬಂದು ಮತ್ತ ರದ್ದಾಗಿದೆ. ಡಿಸಿಸಿ ಬ್ಯಾಂಕ್ ಪ್ರತ್ಯೇಕಗೊಂಡಿಲ್ಲ. ಖಾಸಗಿ ಕಾಲೇಜುಗಳ ಅಬ್ಬರದಲ್ಲಿ ಜಿಲ್ಲೆಗೆ ಸರ್ಕಾರಿ ಎಂಜನಿಯರಿಂಗ್ ಕಾಲೇಜು ಕನಸಾಗಿದೆ. ಜಿಲ್ಲಾ ಸರ್‌ಎಂವಿ ಕ್ರೀಡಾಂಗಣ ಅಭಿವೃದ್ಧಿಯಿಂದ ದೂರ ಉಳಿದಿದೆ. ಹೂವು, ತರಕಾರಿ ಮಾರುಕಟ್ಟೆ ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ.
ಜಿಲ್ಲೆಗೆ ಫ್ಲೋರೈಡ್, ಯುರೇನಿಯಂ ಸಂಕಷ್ಟ!:
ಜಿಲ್ಲೆಯಲ್ಲಿ 900 ಗ್ರಾಮಗಳಿಗೂ ಇನ್ನೂ ಶುದ್ಧ ನೀರಿನ ಖಾತ್ರಿ ಇಲ್ಲ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವರೇ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಅಂತರ್ಜಲದ ಅತಿಯಾದ ಬಳಕೆ ಪರಿಣಾಮ ಜಿಲ್ಲೆಯ ಕುಡಿವ ನೀರಿನಲ್ಲಿ ಅಪಾಯಕಾರಿ ನೈಟ್ರೇಟ್, ಯುರೇನಿಯಂ ಹಾಗೂ ಫ್ಲೋರೈಡ್ ಲವಣಾಂಶಗಳು ಅಧಿಕವಾಗಿ ಜನರ ಆರೋಗ್ಯದ ಮೇಲೆ ಕಾಣದಂತೆ ಕಾಡುತ್ತಿರುವುದು ಎದ್ದು ಕಾಣುತ್ತಿದೆ. ಸ್ಥಳೀಯ ನಾಗರಿಕರು ಗರ್ಭಕೋಶದ ಕಾಯಿಲೆ, ಕಿಡ್ನಿ, ಹಲ್ಲು, ಮೊಳೆ, ಮಂಡಿ ನೋವುಗಳಿಗೆ ತುತ್ತಾಗಿ ನಿತ್ಯ ನರಕ ಅನುಭವಿಸುವಂತಾಗಿದೆ. ಆದರೂ ಸರ್ಕಾರಗಳಾಗಲಿ ಜನಪ್ರತಿನಿಧಿಗಳಾಗಲಿ ಶುದ್ಧ ನೀರು ಕಲ್ಪಿಸುವ ಕಾಳಜಿ ಹೊಂದಿಲ್ಲ.
ಎತ್ತಿನಹೊಳೆ ಹೆಸರಿನ ಆಶಾಭಾವನೆ :
ಎತ್ತಿನಹೊಳೆ ಯೋಜನೆ ಬಗ್ಗೆ ಆರಂಭದಲ್ಲಿ ಭರವಸೆ, ಹೊಸ ಆಶಾಭಾವನೆ ಮೂಡಿಸಿದ್ದು ಸತ್ಯವಾದರೂ ವರ್ಷ ಕಳೆದಂತೆ ಯೋಜನೆ ಅನುಷ್ಠಾನದಲ್ಲಾಗುತ್ತಿರವ ವಿಳಂಬ ಗುರು ಮುಟ್ಟುವುದು ಅನುಮಾನವಾಗಿದೆ. ಹಿಂದಿನ ಸರ್ಕಾರ ಕೂಡ 13 ಸಾವಿರ ಕೋಟಿ ಇದ್ದ ಯೋಜನೆ ಗಾತ್ರವನ್ನು 24 ಸಾವಿರ ಕೋಟಿಗೆ ಏರಿಸಿದೆ. ವರ್ಷದೊಳಗೆ ಎತ್ತಿನಹೊಳೆ ನೀರು ಹರಿಯುತ್ತದೆ ಎಂದು ಈಗಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತವರು 10 ವರ್ಷದಿಂದ ಹೇಳುತ್ತಿದ್ದರೂ ಎತ್ತಿನಹೊಳೆ ನೀರು ಈ ಭಾಗಕ್ಕೆ ಹರಿಯುವ ಅನುಮಾನ ವ್ಯಕ್ತವಾಗುತ್ತಿದೆ.
ಜಿಲ್ಲೆಗೆ ಕಂಟಕವಾದ ಗಣಿಗಾರಿಕೆ!:
ಜಿಲ್ಲೆಯ ಗಣಿಗಾರಿಕೆ ಬಳ್ಳಾರಿಯನ್ನು ಮೀರಿಸುತ್ತಿದೆ. ಚಿಕ್ಕಬಳ್ಳಾಪುರ ತಾಲೂಕು ಒಂದರಲ್ಲಿಯೆ ನೂರಾರು ಜೆಲ್ಲಿ ಕ್ರಷರ್‌ಗಳಿದ್ದು, ಜಿಲ್ಲೆಯ ಪ್ರಾಕೃತಿಕ ಬೆಟ್ಟಗುಡ್ಡಗಳ ಸೌಂದರ್ಯಕ್ಕೆ ಗಣಿಗಾರಿಕೆ ಘಾಸಿ ಮಾಡುತ್ತಿದೆ. ನಂದಿಬೆಟ್ಟ, ಸ್ಕಂದಗಿರಿ, ಅವಲಬೆಟ್ಟ, ವರ‌್ಲಕೊಂಡ ಹೀಗೆ ಬೆಟ್ಟಗಳ ಮೇಲೆ ಗಣಿಗಾರಿಕೆಯ ಕರಿನೆರಳು ಬಿದ್ದಿದೆ. ರಾತ್ರಿ ವೇಳೆ ಗಣಿಗಾರಿಕೆ ನ್ಪೋಟಗಳಿಗೆ ಸ್ಥಳೀಯರು ಆತಂಕಗೊಳ್ಳುತ್ತಿ ದ್ದಾರೆ. ಈಗನಿಂದಲೇ ಗಣಿಗಾರಿಕೆ ಆಟೋಟಗಳಿಗೆ ಕಡಿವಾಣ ಬೀಳದಿದ್ದರೆ ಭವಿಷ್ಯದ ದಿನಗಳಲ್ಲಿ ಜಿಲ್ಲೆಯ ಬೆಟ್ಟಗಳು ಬರಿದಾಗಲಿವೆ.
-ಕಾಗತಿ ನಾಗರಾಜಪ್ಪ