Advertisement

ಮತ್ತೆ ನೀರಿನ ಸಮಸ್ಯೆ ಉಲ್ಬಣ: ನೀರಿಗಾಗಿ ನಿದ್ದೆಗೆಟ್ಟು ಕಾಯುವ ಸ್ಥಿತಿ!

10:24 PM Apr 03, 2019 | sudhir |

ಉಡುಪಿ: ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಚುನಾವಣೆ ಕೆಲಸದಲ್ಲಿ ನಿರತರಾಗಿದ್ದು, ನಗರದಲ್ಲಿ ನೀರಿನ ಸಮಸ್ಯೆ ಮತ್ತೆ ಉಲ್ಬಣಿಸಿದೆ.

Advertisement

ವಾರದ ಹಿಂದೆ ಮೂರು ದಿನಗಳಿಗೊಮ್ಮೆ ನೀರು ಬಿಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. ನೀರು ಕೂಡ ಬಂತು; ಆದರೆ ಪ್ರಷರ್‌ ಇಲ್ಲದ ಕಾರಣ ಎತ್ತರ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂದು ನಗರದ ಹಲವೆಡೆ ನಾಗರಿಕರು ದೂರುತ್ತಿದ್ದಾರೆ.

ನೀರಿಗಾಗಿ ಜಾಗರಣೆ!
ಮೂರು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆಯಾದರೂ ಇದಕ್ಕೆ ದಿನವಿಡೀ ಕಾಯಬೇಕಾದ ಸ್ಥಿತಿಯಿದೆ. ಮುಂಜಾನೆ ಸುಮಾರು 2ಗಂಟೆಯಿಂದ 4ಗಂಟೆ ಸುಮಾರಿಗೆ ನೀರು ಬಿಡಲಾಗುತ್ತಿದೆ. ಜಾಗರಣೆ ಕೂತು ನೀರು ತುಂಬಿಸುವ ಸ್ಥಿತಿ ಸಾರ್ವಜನಿಕರದ್ದಾಗಿದೆ. ಸ್ವರ್ಣಾ ನದಿ ಸಂಪೂರ್ಣ ಬರಿದಾಗುತ್ತಿದ್ದು, ನೀರಿನ ಕೊರತೆಗೆ ಶಾಶ್ವತ ಯೋಜನೆ ಕೈಗೊಳ್ಳದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ.

ರಸ್ತೆ ಕಾಮಗಾರಿ; ನೀರು ಪೋಲು
169(ಎ) ಚತುಷ್ಪಥ ಯೋಜನೆ ಸಂಬಂಧಿಸಿ ಕಡಿಯಾಳಿಯಿಂದ ಪರ್ಕಳದವರೆಗೆ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ವಾಹನ ಸವಾರರು ಸಹಿತ ಸಾರ್ವಜನಿಕರು ಒಂದೆಡೆ ತೊಂದರೆ ಅನುಭವಿಸಿದರೆ ಮತ್ತೂಂದೆಡೆ ಪೈಪ್‌ ಒಡೆದು ನೀರು ಪೋಲಾಗುವಂತಹ ಘಟನೆಯೂ ನಡೆಯುತ್ತಿದೆ.

ಒಂದು ವಾರ ನೀರು ವ್ಯಯ
ಕುಡಿಯುವ ನೀರಿನ ಪೈಪ್‌ನ ವಾಲ್‌Ì ತುಂಡಾದ ಪರಿಣಾಮ ಎಂಜಿಎಂ ಕಾಲೇಜಿನ ಸಮೀಪದಲ್ಲಿ 1 ವಾರಗಳಿಂದ ನೀರು ಪೋಲಾಗುತ್ತಿತ್ತು. ನಗರದ ಕೇಂದ್ರೀಕೃತ ಪೈಪ್‌ಲೈನ್‌ ಇದಾಗಿತ್ತು. ಇಲ್ಲಿ ಕೂಡ ನೀರು ಪೋಲಾಗಿ ರಸ್ತೆಯಲ್ಲಿ ಹರಿಯುವ ದೃಶ್ಯ ದಿನನಿತ್ಯ ಕಾಣಸಿಗುತ್ತಿತ್ತು. ವಾರದ ಬಳಿಕ ಅದಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ.

Advertisement

ಪೂರಕ ಕ್ರಮ
ನೀರಿನ ಸಮಸ್ಯೆಯ ಬಗ್ಗೆ ಹಲವಾರು ಮಂದಿ ಕರೆ ಮಾಡಿ ದೂರು ಸಲ್ಲಿಸುತ್ತಿದ್ದಾರೆ. ಪ್ರತೀ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತಹ ಕೆಲಸವೂ ನಡೆಯುತ್ತಿದೆ. ನೀರಿನ ಸಮಸ್ಯೆಗೆ ಶೀಘ್ರ ಸ್ಪಂದಿಸುವ ಬಗ್ಗೆ ಶೀಘ್ರದಲ್ಲೇ ಹೆಲ್ಪ್ಲೈನ್‌ ಆರಂಭಿಸಲಾಗುವುದು. ನೀರಿನ ಅಭಾವ ಇರುವೆಡೆ ಟ್ಯಾಂಕರ್‌ ನೀರು ಪೂರೈಸುವ ಸಲುವಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

ಖುದ್ದು ಭೇಟಿ ನೀಡಿ ಪರಿಶೀಲನೆ
ಎತ್ತರ ಪ್ರದೇಶಕ್ಕೆ ನೀರು ಸರಿಯಾಗಿ ಬರುತ್ತಿಲ್ಲ ಎಂದು ಈಗಾಗಲೇ ಕೆಲವರು ಕರೆ ಮಾಡಿ ತಿಳಿಸಿದ್ದಾರೆ. ಕುಂಜಿಬೆಟ್ಟು, ಅಂಬಲಪಾಡಿ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇನ್ನು ಇತರ ಕೆಲ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ. ಒಂದು ಕಡೆ ಹರಿಯುವ ನೀರು ಬಂದ್‌ ಮಾಡಿ ಪ್ರಷರ್‌ ಬರುವಂತೆ ಮಾಡಲಾಗುವುದು. ಹಗಲು ಹೊತ್ತಿನಲ್ಲೆ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಲಾಗುವುದು.
-ಆನಂದ್‌ ಕಲ್ಲೋಳಿಕರ್‌, ಪೌರಾಯುಕ್ತರು, ನಗರಸಭೆ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next