Advertisement
ಧಾರವಾಡ: ನಗರವಾಸಿಗಳಿಗೆ ಅಗತ್ಯಕ್ಕೆ ತಕ್ಕಷ್ಟು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿರಂತರ ನೀರು ಯೋಜನೆಯ 2ನೇ ಭಾಗ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದ್ದು, 2ನೇ ಭಾಗ ವಿಸ್ತರಣೆಗೆ ಹೊಸ ಖಾಸಗಿ ಕಂಪನಿ ಮುಂದಾಗಿದೆ. ಮೊದಲ ಹಂತದಲ್ಲಿ ಆಮೆಗತಿಯಲ್ಲಿ ಸಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ನಿರಂತರ ನೀರು ಯೋಜನೆ 2ನೇ ಭಾಗದಲ್ಲಿ ಇನ್ನುಳಿದ ಶೇ.80 ರಷ್ಟು ಪ್ರದೇಶದಲ್ಲಿ ಜಾರಿಯಾಗಬೇಕಾಗಿದೆ.
Related Articles
Advertisement
ಸರ್ಕಾರದ್ದೇಯಾದ ಈ ಯೋಜನೆ ಯಶಸ್ವಿಯಾಗದಿರಲು ಮತ್ತು ಕುಂಟುತ್ತ ಸಾಗಲು ಅದೇ ಸರ್ಕಾರದ ವಿವಿಧ ಇಲಾಖೆಗಳ ಮಧ್ಯದ ಸಮನ್ವಯ ಕೊರತೆಯೇ ಪ್ರಮುಖ ಕಾರಣವಾಗಿದೆ. ಈ ಅಂಶವನ್ನು ಧಾರವಾಡದ ಸಿಎಂಡಿಆರ್ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಪತ್ತೆ ಮಾಡಿದ್ದು, ನೀರಿನ ಉಳಿತಾಯ, ಶುದ್ಧ ಕುಡಿಯುವ ನೀರು ಪೂರೈಕೆಯ ಆಶಯಗಳು ಈಡೇರಲು ಸರ್ಕಾರ ಏನು ಮಾಡಬೇಕೆನ್ನುವ ಸಲಹೆ ಕೊಡಲು ಕೂಡ ಸಜ್ಜಾಗಿದೆ. ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಖಾಸಗೀಕರಣ ಮಾಡಿದಂತೆಯೇ ಇದೀಗ ನೀರು ಸಂಗ್ರಹ-ಸರಬರಾಜನ್ನು ಕೂಡ ಖಾಸಗಿ ಕಂಪನಿಗಳಿಗೆ ಸರ್ಕಾರ ನೀಡಿದ್ದು, ಅವರೇ ನೀರು ಸರಬರಾಜು ಮಾಡಿ ಜನರಿಂದ ಅವರೇ ನೀರಿನ ಕರ ಸಂಗ್ರಹಿಸಲಿದ್ದಾರೆ. ಹೀಗಾಗಿ ಇನ್ಮುಂದೆ ಇಲ್ಲಿನ ಜಲಮಂಡಳಿಗಳ ಕೆಲಸ ಮುಕ್ತಾಯವಾದಂತಾಗಿದ್ದು, ಜಲಮಂಡಳಿಗಳಿಗೆ ಬೀಗ ಬೀಳುವುದು ಪಕ್ಕಾ ಆದಂತಾಗಿದೆ.
735 ಕೋಟಿ ರೂ.ಯೋಜನೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ 360 ಕೋಟಿ ರೂ.ಗಳು, ಬೆಳಗಾವಿಗೆ 220 ಕೋಟಿ ರೂ. ಹಾಗೂ ಕಲಬುರ್ಗಿಗೆ 150 ಕೋಟಿ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿತ್ತು. ಈ ಪೈಕಿ 367 ಕೋಟಿ ರೂ.ಖಾಸಗಿ ಕಂಪನಿಗಳಿಂದ, 147 ಕೋಟಿ ರೂ. ಕೇಂದ್ರ ಸರ್ಕಾರ ಹಾಗೂ 147 ಕೋಟಿ ರೂ.ರಾಜ್ಯ ಸರ್ಕಾರ ಜತೆಗೆ ಸ್ಥಳೀಯ ಮಹಾನಗರ ಪಾಲಿಕೆಗಳಿಂದ 73 ಕೋಟಿ ರೂ. ಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ.