ಯಾದಗಿರಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದ ಅಕುಶ ಕೃಷಿ ಕೂಲಿ ಕಾರ್ಮಿಕರಿಗೂ, ರೈತರಿಗೂ ವೈಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಜನರು ಯೋಜನೆಯ ಸದುಪಯೋಗ ಪಡೆದು ಆರ್ಥಿಕ ಪ್ರಗತಿ ಹೊಂದಬೇಕು ಎಂದು ಯಾದಗಿರಿ ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ಚಂದ್ರಶೇಖರ ಪವಾರ ಹೇಳಿದರು.
ಇಲ್ಲಿನ ತಾಪಂ ವ್ಯಾಪ್ತಿಯ ರಾಮಸಮುದ್ರ ಗ್ರಾಮದ ಕೋಟೆ ಗುಡ್ಡದ ಸರ್ವೇ ನಂಬರ್ 118ರಲ್ಲಿ ನರೇಗಾ ಯೋಜನೆಯ ದುಡಿಯೋಣ ಬಾ ಹಾಗೂ ಜಲ ಶಕ್ತಿ ಅಭಿಯಾನದಡಿ ಪ್ರಗತಿಯಲ್ಲಿರುವ ಟ್ರಂಚೆಸ್ (ಇಂಗುಗುಂಡಿ) ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ರೋಜ್‌ಗಾರ್ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್-19 ಸಾಂಕ್ರಾಮಿಕ (ಸೋಂಕು) ರೋಗ ತಡೆಗಟ್ಟಲು ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಲಸಿಕೆ ಹಾಕಿಸುವ ಕಾರ್ಯಕ್ರಮ ಗ್ರಾಪಂ ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಪಂ ವತಿಯಿಂದ ಜನರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಲಸಿಕೆಕೇಂದ್ರಕ್ಕೆ ಬಂದು ಲಸಿಕೆ ಪಡೆದು ಆರೋಗ್ಯವಂತರಾಗಿರಬೇಕು. ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ಆರೋಗ್ಯವಿದ್ದರೆ ನಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಮೂರನೇ ಅಲೆಯ ಹರಡುವಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೊನಾ ರೋಗದಿಂದ ರಕ್ಷಣೆ ಪಡೆಯಲು ನರೇಗಾ ಯೋಜನೆಯ ಕೂಲಿ ಕಾರ್ಮಿಕರು ತಪ್ಪದೆ ಲಸಿಕೆ ಪಡೆದು ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕು ಎಂದು ಹೇಳಿದರು.
ರಾಮಸಮುದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೈಯದ್ ಅಲಿ ಮಾತನಾಡಿ, ಹೊಸ ಉದ್ಯೋಗ ಚೀಟಿಗೆಅರ್ಜಿ ನಮೂನೆ-1ರಡಿ ರೇಷನ್‌ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಒಂದು ಫೋಟೋ ಜತೆಗೆ ರೇಷನ್ ಕಾರ್ಡ್ ನಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲ ಸದಸ್ಯರ ಮೂಲ ದಾಖಲಾತಿಗಳ ಝರಾಕ್ಸ್ ಪ್ರತಿಗಳನ್ನು ಗ್ರಾಪಂಗೆ ಸಲ್ಲಿಸಿದರೆ, ಹೊಸ ಜಾಬ್ ಕಾರ್ಡ್ ನೀಡಲಾಗುವುದು. ಜಾಬ್ ಕಾರ್ಡ್ ಇರುವ ಕುಟುಂಬದ ಸದಸ್ಯರು ಕೆಲಸ ಮಾಡಲು ಇಚ್ಚಿಸಿ, ಅರ್ಜಿ ನಮೂನೆ-6ರಲ್ಲಿ ಕೂಲಿ ಬೇಡಿಕೆಯನ್ನು ಗ್ರಾಪಂಗೆ ಸಲ್ಲಿಸಿದರೆ ಅವರಿಗೆ ಕೂಲಿ ಕೆಲಸ ಕೊಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ 25 ಜನ ನರೇಗಾ ಕೂಲಿ ಕಾರ್ಮಿಕರಿಗೆ ಕೊರೊನಾ ಲಸಿಕೆ ಹಾಕಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಎನ್‌ಆರ್‌ಎಂ ಘಟಕದ ಪವನ ಕುಮಾರ, ಜಬ್ಟಾರ್ ಪಾಷಾ, ಕುಮಾರ ಕೌವಡಿ, ತಾಲೂಕು ಐಇಸಿ ಸಂಯೋಜಕ ಬಸಪ್ಪ, ಕಾಯಕ ಬಂಧುಗಳು ಹಾಗೂ ನರೇಗಾ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.