ಹುಳಿಯಾರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಂಜೀವಿನಿ ಯೋಜನೆ ಹಾಗೂ ಸಾರ್ವ ಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹುಳಿಯಾರಿನಲ್ಲಿ ನೀರಿನ ಸಂರಕ್ಷಣೆ ಕುರಿತು ಜಲಶಕ್ತಿ ಅಭಿಯಾನ ಜಾಥಾ ನಡೆಸಲಾಯಿತು.
ಹುಳಿಯಾರು ಅಂಗನವಾಡಿ ಬಿ ಕೇಂದ್ರದ ಮಕ್ಕಳು, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ನುರಾನಿ, ಫಾತೀಮಾ, ಬಾಲವಿಕಾಸ ಸಂಘದ ಸದಸ್ಯರು ಊರಿನ ಪ್ರಮುಖ ಬೀದಿಯಲ್ಲಿ ಜಾಥಾ ಮಾಡುವ ಮೂಲಕ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು.
ನೀರಿನ ಸಂರಕ್ಷಣೆ ಅಗತ್ಯ: ಹುಳಿಯಾರು ಅಂಗನವಾಡಿ ಬಿ ಕೇಂದ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನ್ಯಾಷನಲ್ ರೂರಲ್ ಲೈಲ್ಲಿ ಹುಡ್ ಮಿಷನ್‌ನ ಕಿರಣ್ ಮಾತನಾಡಿ, ಇಂದು ನೀರಿನ ಸಮಸ್ಯೆ ದೇಶದ ಅತಿದೊಡ್ಡ ಸಮಸ್ಯೆಯಾಗಿ ಬದ ಲಾಗಿದೆ. ಮುಂದಿನ ಪೀಳಿಗೆಗೆ ಜೀವಜಲ ಉಳಿಸುವುದು, ನೀರಿನ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಜಲಶಕ್ತಿ ಅಭಿಯಾನ ಆಚರಿಸಲಾಗುತ್ತಿದೆ. ಕೇವಲ ಒಂದು ದಿನ ಕಾರ್ಯಕ್ರಮ ಮಾಡುವುದರಿಂದ ನೀರು ಉಳಿಸಲು ಸಾಧ್ಯವಿಲ್ಲ. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾದಾಗ ಜಲ ಸಂಪನ್ಮೂಲ ಉಳಿಯಲು ಸಾಧ್ಯ ಎಂದರು.
ಶುದ್ಧ ನೀರಿಗೂ ಕುತ್ತು: ಅಂಗನವಾಡಿ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಪೂರ್ಣಮ್ಮ ಮಾತನಾಡಿ, ಮೊದಲು ಕೆರೆಕುಂಟೆಯಲ್ಲಿನ ನೀರು ಕುಡಿಯಲಾಗುತಿತ್ತು. ನಂತರ ಅಂತರ್ಜಲ ಪಾತಾಳ ಸೇರುತ್ತಿದ್ದಂತೆ ಬಾವಿ ಬಳಸಿದರು. ಮುಂದಿನ ದಿನಗಳಲ್ಲಿ ಬೋರ್‌ವೆಲ್ ಬಳಕೆ ಹೆಚ್ಚಾಯಿತು. ಇದೀಗ ಕೊಳವೆ ಬಾವಿ ಹಾಕಿ ನೀರು ತೆಗೆದು ಕುಡಿಯುವ ಸ್ಥಿತಿ ಎದುರಾಗಿದೆ. ಇದರಿಂದ ಫ್ಲೋರೈಡ್‌ನಂತಹ ವಿಷಕಾರಿ ವಸ್ತುಗಳು ಹೆಚ್ಚಾಗಿದ್ದು, ಶುದ್ಧ ನೀರಿಗೂ ಕುತ್ತು ಬಂದೊದಗಿದೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಪ್ರತಿಯೊಬ್ಬರೂ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಜೀವಿನಿ ಯೋಜನೆಯ ಸರಸ್ವತಿ, ಶಿಕ್ಷಕಿ ನುಸ್ರತ್, ಗ್ರಾಪಂ ಮಾಜಿ ಸದಸ್ಯೆ ಅಸೀನಾಬಾನು, ಆಶಾ ಕಾರ್ಯಕರ್ತೆಯರಾದ ಅಭಿದಾಭೀ, ಮಹಬೂಬ್ ಜಾನ್, ನುರಾನಿ, ಫಾತೀಮಾ, ಬಾಲವಿಕಾಸ ಸಂಘದ ಸದಸ್ಯರು ಉಪಸ್ಥಿತರಿದ್ದರು.