Advertisement

ಶುದ್ಧೀಕರಣ ಘಟಕಗಳಿಂದ ನೀರು ಪೋಲು

04:43 PM Nov 09, 2019 | Suhan S |

ಚನ್ನಪಟ್ಟಣ: ಸಾರ್ವಜನಿಕರಿಗೆ ಕುಡಿಯಲು ಶುದ್ಧ ನೀರು ಒದಗಿಸುವ ಮಹತ್ವಾಕಾಂಕ್ಷೆಯಿಂದ ಸ್ಥಳೀಯ ಆಡಳಿತ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ಥಾಪನೆಯಾಗಿರುವ ನೀರಿನ ಘಟಕಗಳಲ್ಲಿ ನೀರು ಶುದ್ಧೀಕರಿಸಿದ ನಂತರ ಬೇರ್ಪ ಡುವ ಸಾವಿರಾರು ಲೀ. ನೀರು ಪ್ರತಿದಿನ ಚರಂಡಿ ಪಾಲಾಗುತ್ತಿದೆ.

Advertisement

ನೀರಿನ ಅಲಭ್ಯತೆಯ ನಡುವೆಯೇ ಶುದ್ಧ ಕುಡಿ ಯುವ ನೀರನ್ನು ಒದಗಿಸುವ ಭರದಲ್ಲಿ ಪ್ರತಿದಿನ ನೀರು ಪೋಲು ಮಾಡಲಾಗುತ್ತಿದ್ದು, ಕುಡಿಯಲು ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ಈ ನೀರನ್ನು ಬಳಸಬಹುದಾದರೂ ನೀರು ಚರಂಡಿ ಸೇರುತ್ತಿದೆ. ತಾಲೂಕಿನಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿ ಸಲಾಗಿದ್ದು, ಪ್ರತಿ ಘಟಕಗಳಲ್ಲೂ ಪ್ರತಿದಿನ ಸುಮಾರು 20 ಸಾವಿರ ಲೀ. ಶುದ್ಧ ನೀರು ಉತ್ಪಾದನೆಯಾಗುತ್ತಿದೆ.

ಹಾಗೆಯೇ 40 ಸಾವಿರ ಲೀ. ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದೆ. ಅಂದರೆ ಎಲ್ಲಾ ಘಟಕಗಳಿಂದ ಲಕ್ಷಾಂತರ ಲೀ. ನೀರು ಪೋಲಾಗುತ್ತಿದ್ದರೂ ಯಾರೊಬ್ಬರ ಗಮನಕ್ಕೂ ಬರುತ್ತಿಲ್ಲ. 1 ಲೀ. ನೀರನ್ನು ಶುದ್ಧೀಕರಿಸಲು 2 ಲೀ. ನೀರಿನ ಅವಶ್ಯಕತೆ ಇದ್ದು, ಕೆಲವು ಕಡೆಗಳಲ್ಲಿ 2.5 ಲೀ.ವರೆಗೂ ವಿಸ್ತರಣೆಯಾಗುತ್ತಿದೆ. ಶೇ.60ರಷ್ಟು ನೀರು ಬಳಕೆ ಯಾಗುತ್ತಿಲ್ಲ. ಗ್ರಾಮೀಣ ಭಾಗದ ಒಂದೆರಡು ಕಡೆಗಳಲ್ಲಿ ತೊಟ್ಟಿ ನಿರ್ಮಿಸಿ ಅನ್ಯ ಕಾರ್ಯಗಳಿಗೆ ಬಳಸಲಾಗುತ್ತಿದೆಯಾದರೂ ನಗರ ಪ್ರದೇಶದಲ್ಲಿ ಈ ವ್ಯವಸ್ಥೆ ಮಾಡಲು ಮನಸ್ಸು ಮಾಡಿಲ್ಲ.

ಉಪಯೋಗ ಸಾಧ್ಯ: ಶುದ್ಧ ಘಟಕಗಳಿಂದ ಪೋಲಾಗುವ ಭಾರಿ ಪ್ರಮಾಣದ ನೀರನ್ನು ಕಾರ್ಖಾನೆ, ಹೋಟೆಲ್‌, ಮನೆ, ಉದ್ಯಾನವನಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಹುಲ್ಲು ಹಾಸು ಬೆಳೆಸಲು, ಮಣ್ಣು ರಸ್ತೆಗಳಲ್ಲಿ ಧೂಳು ನಿಯಂತ್ರಿಸಲು ಈ ನೀರನ್ನು ಬಳಸಬಹುದಾಗಿದ್ದರೂ,ಸೂಕ್ತ ವ್ಯವಸ್ಥೆ ಯಾಗಿಲ್ಲದಿರುವುದೇ ಸಮಸ್ಯೆಯಾಗಿದೆ. ಸಣ್ಣ ಘಟಕಗಳಲ್ಲೂ ಇದೇ ಸಮಸ್ಯೆ: ಇನ್ನು ದೊಡ್ಡ ಘಟಕಗಳನ್ನು ಹೊರತುಪಡಿಸಿ ಹೋಟೆಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಅಪಾರ್ಟ್‌ಮೆಂಟ್‌ ಗಳಲ್ಲಿಯೂ ಇದೇ ವ್ಯವಸ್ಥೆ ಮುಂದುವರೆದಿದೆ. ಇಲ್ಲಿಯೂ ಸಹ ಶುದ್ಧೀಕರಿಸಿದ ನಂತರ ಬರುವ ನೀರನ್ನು ಚರಂಡಿಗೆ ಹರಿಸಲಾಗುತ್ತಿದೆ. ಮನೆಗಳಲ್ಲಿ ಆನೀರನ್ನು ಅನ್ಯ ಕೆಲಸಕ್ಕೆ ಬಳಸಬಹುದಾದರೂ ಅವರೂ ಸಹ ಬಳಸಿಕೊಳ್ಳದೆ ನೀರು ಪೋಲು ಮಾಡುತ್ತಿದ್ದಾರೆ.

ತೊಟ್ಟಿ ನಿರ್ಮಿಸಿ ನೀರು ಉಳಿಸಿ: ಶುದ್ಧ ನೀರಿನ ಘಟಕಗಳಿಂದ ಚರಂಡಿಗೆ ಹರಿಯುತ್ತಿರುವ ನೀರನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಲು ತೊಟ್ಟಿಗಳನ್ನು ನಿರ್ಮಾಣ ಮಾಡಬೇಕೆಂಬುದು ಪ್ರಜಾnವಂತರ ಆಗ್ರಹವಾಗಿದೆ. ಪ್ರತಿದಿನ 4 ಲಕ್ಷ ಲೀ. ನೀರು ಚರಂಡಿಗೆ ಹರಿಯುತ್ತಿದ್ದರೂ, ಸುಮ್ಮನಿರುವುದು ಸರಿಯಲ್ಲ. ಆ ನೀರನ್ನು ಬಳಸಿಕೊಳ್ಳುವ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಅರಿವು ಮೂಡಿಸಿ ಆ ನೀರೂ ಬಳಕೆಯಾಗುವಂತೆ ನೋಡಿಕೊಳ್ಳಬೇಕೆಂಬುದು ಪ್ರಜ್ಞಾವಂತ ನಾಗರಿಕರ ಅನಿಸಿಕೆಯಾಗಿದೆ. ನೀರಿಗೆ ತೀವ್ರ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ಹನಿ ನೀರನ್ನೂ ಸಮರ್ಪಕವಾಗಿ ಬಳಸಿಕೊಳ್ಳಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಇಲ್ಲದ ನೀರಿಗಾಗಿ ಸಾವಿರಾರು ಅಡಿ ಕೊಳವೆ ಬಾವಿ ಕೊರೆದು ಸಿಗುವ ಕೊಂಚ ನೀರಿಗೆಸಮಾಧಾನಪಟ್ಟುಕೊಳ್ಳುವ ಬದಲು ಲಭ್ಯವಾಗುತ್ತಿರುವ ನೀರನ್ನು ಪೋಲು ಮಾಡದೆ ಬಳಸಿಕೊಳ್ಳಬೇಕಿದೆ. ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಿ ಪೋಲಾಗುತ್ತಿರುವ ನೀರನ್ನು ಬಳಕೆಗೆ ಲಭ್ಯವಾಗುವಂತೆ ಮಾಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next