Advertisement

ರಾಷ್ಟ್ರೀಯ ನದಿ ಸಂರಕ್ಷಣೆಗೆ ಜಲ ಸಂಸತ್‌ ರಚನೆ

07:55 AM Aug 18, 2017 | Team Udayavani |

ವಿಜಯಪುರ: ದೇಶದ ನದಿಗಳ ಸಂರಕ್ಷಣೆಗಾಗಿ ಜಲ ನಾಯಕ-ಕಾರ್ಯಕರ್ತರನ್ನು ಒಳಗೊಂಡ 21 ಜಲ ಸಂಸತ್‌ಗಳನ್ನು ರಚಿಸಲಾಗಿದೆ. ನದಿಗಳ ನೈಸರ್ಗಿಕ ಹರಿವು ಸುಗಮಕ್ಕಾಗಿ ಆಯಾ ನದಿ ಪಾತ್ರದ ಜಲ ಕಾರ್ಯಕರ್ತರನ್ನೇ ಸಂಸತ್‌ಗೆ ನೇಮಿಸಿದೆ.

Advertisement

ನಗರದಲ್ಲಿ ನಡೆಯುತ್ತಿರುವ “ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ’ದ ಸಂದರ್ಭದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಜಲಗಾಂಧಿ ಡಾ| ರಾಜೇಂದ್ರಸಿಂಗ್‌ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಡಿ.ಪಿ.ಬಿರಾದಾರ, ಗಂಗಾ, ಮಹದಾಯಿ, ಕಾವೇರಿ, ಕೃಷ್ಣಾ, ಗೋದಾವರಿ, ಮಂದಾಕಿನಿ, ಮಹೇಶ್ವರ ನದಿ ಸೇರಿ ದೇಶದ ಎಲ್ಲ ನದಿಗಳ ಸಂರಕ್ಷಣೆಗಾಗಿ ಈ ಸಂಸತ್‌ ಸಮಿತಿ ನೆರವಾಗಲಿದೆ ಎಂದರು.

ನಗರೀಕರಣ, ಕೈಗಾರಿಕೀಕರಣದಂತಹ ವ್ಯವಸ್ಥೆ ನದಿಗಳ ಜೀವಕ್ಕೆ ಆಪತ್ತು ತಂದಿದೆ. ಇದರಿಂದ ಮನು ಸಂಕುಲಕ್ಕೂ ಸಂಚಕಾರ ಬಂದಿದೆ. ನದಿಗಳ ನೈಸರ್ಗಿಕ ಹರಿವಿನ ಪ್ರದೇಶಕ್ಕೂ ಸಂಚಕಾರ ತಂದಿದ್ದು  ನದಿಯ ಹಕ್ಕಿಗೂ ಚ್ಯುತಿ ಬಂದಿದೆ. ಇದರಿಂದ ನದಿ ಪಾತ್ರದಲ್ಲಿನ ನಾಗರಿಕತೆ, ಸಂಸ್ಕೃತಿಗಳೂ ಅವಸಾನ ಗೊಳ್ಳುತ್ತಿವೆ. ಹೀಗಾಗಿ ನದಿಗಳ ಹಕ್ಕು ರಕ್ಷಣೆಗಾಗಿ ಜಲ ಸಂಸತ್‌ ರಚಿಸಲಾಗಿದೆ ಎಂದರು. ಜಲ ಸಮಾವೇಶದಲ್ಲಿ ರಚಿಸಲಾಗಿರುವ ಜಲ ಸಂಸತ್‌ ಗಳು ಆಯಾ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳ ಜೊತೆ ನದಿಗಳ ಸಂರಕ್ಷಣೆ ಕಾರ್ಯಕ್ರಮ ರೂಪಿಸಿ, ಅನುಷ್ಠಾನಕ್ಕೆ ತರಲಿವೆ. ನದಿ ಮಾಲಿನ್ಯ ತಡೆಗೆ ಅಗತ್ಯ ಕಠಿಣ ಕಾನೂನು ರೂಪಿಸಲು ಆಡಳಿತ ವ್ಯವಸ್ಥೆ ಮೇಲೆ ಒತ್ತಡ ಹೇರಲಿದೆ ಎಂದು ಜಲ ಸಂಸತ್‌ ರಚನೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.

ಅವೈಜ್ಞಾನಿಕ ನೀರು ಬಳಕೆಗೆ ಕಡಿವಾಣ ಹಾಕಿ: ಮೋದಿ: ಉತ್ತರ ಪ್ರದೇಶದ ಐಪಿಎಸ್‌ ಅಧಿ ಕಾರಿ ಮಹೇಂದ್ರ ಮೋದಿ ಮಾತನಾಡಿ, ಆಧುನಿಕತೆಯ ಭರಾಟೆಯ ನೆಪದಲ್ಲಿ ಮನುಷ್ಯ ನೀರಿನ ಅವೈಜ್ಞಾನಿಕ ಬಳಕೆಗೆ ಮುಂದಾಗಿರುವುದು ಹಾಗೂ
ಜಲಮೂಲಗಳಿಗೆ ಧಕ್ಕೆ ತರುತ್ತಿರುವುದು ಜಲ ಸಮಸ್ಯೆಗೆ ಕಾರಣವಾಗುತ್ತಿದೆ. ತಕ್ಷಣ ಎಚ್ಚೆತ್ತುಕೊಂಡು ನೀರಿನ ಅವೈಜ್ಞಾನಿಕ ಬಳಕೆಗೆ ಕಡಿವಾಣ ಹಾಕದಿದ್ದರೆ ಭವಿಷ್ಯಕ್ಕೆ ಜಲ ಸಮಸ್ಯೆ ಇನ್ನೂ ಮಾರಕವಾಗಲಿದೆ ಎಂದು ಹೇಳಿದರು. ಜಲ ಸಮಾವೇಶದ ಎರಡನೇ ದಿನವಾದ ಗುರುವಾರ “ತಾಂತ್ರಿಕ ಗೋಷ್ಠಿ’ಯಲ್ಲಿ ಅವರು ವಿಷಯ ಮಂಡಿಸಿದರು. ಆಧುನಿಕತೆ ಸಂದರ್ಭದಲ್ಲಿ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಜಲ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ ಎಂದರು.

ಸತತವಾಗಿ ಮೂರು ದಶಕಗಳಿಂದ ಉತ್ತರಖಂಡದ ನದಿಗಳಲ್ಲಿ ಜೀವ ತುಂಬುವ ಕಾರ್ಯವನ್ನು ವಾರಣಾಸಿಯ ಗಂಗಾ ಮಹಾಸಭೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಪ್ರತಿ 10 ಕಿ.ಮೀ.ಅಂತರದಲ್ಲಿ ಗಂಗೆಯ ನೀರನ್ನು ಪರಿಶೀಲಿಸುವ ಕುರಿತು ಅಧ್ಯಯನ ಕೈಗೊಳ್ಳಲಾಗಿದೆ. ಉತ್ತರಖಂಡ, ಹಿಮಾಚಲ ಪ್ರದೇಶ, ನಾಗಲ್ಯಾಂಡ್‌ ಮತ್ತು ಸಿಕ್ಕಿಂ ರಾಜ್ಯಗಳಲ್ಲಿನ ರೈತರ ಜೊತೆಗೆ ನಿರಂತರ ನದಿಗಳನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಗಂಗಾ ನದಿಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ.
– ಬಸವರಾಜ ಪಾಟೀಲ, ರಾಷ್ಟ್ರೀಯ
ಸ್ವಾಭಿಮಾನ ಆಂದೋಲನ ಕಾರ್ಯದರ್ಶಿ.

Advertisement

ಪರಸ್ಪರ ಸೌಹಾರ್ದ ಮೂಲಕ ಅಂತಾರಾಜ್ಯ ಜಲ ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜಲ ಸಂಪತ್ತಿದ್ದರೂ ಸದ್ಬಳಕೆ ಮಾಡಿಕೊಳ್ಳಲಾಗದೆ ಭಾರತದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ.
– ಆನಂದ ಘೋಸಾವಳಿ, ಮಹಾರಾಷ್ಟ್ರದ
ಜಲ ಸಾಕ್ಷಾತ್‌ ಕೇಂದ್ರದ ಮುಖ್ಯಸ್ಥ.

Advertisement

Udayavani is now on Telegram. Click here to join our channel and stay updated with the latest news.

Next