Advertisement

26 ಗೇಟುಗಳಿಂದ ನೀರು ಹೊರಕ್ಕೆ

12:39 PM Jul 30, 2019 | Suhan S |

ಆಲಮಟ್ಟಿ: ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಮುಂಜಾಗೃತಾ ಕ್ರಮವಾಗಿ ಜಲಾಶಯದ ಎಲ್ಲ 26 ಗೇಟುಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ.

Advertisement

ಸೋಮವಾರ ರಾತ್ರಿ 7 ಗಂಟೆಯಿಂದ ಒಳ ಹರಿವಿನಲ್ಲಿ ವ್ಯಾಪಕವಾಗಿ ಏರಿಕೆಯಾಗಿದ್ದು ಜಲಾಶಯದ ಎಲ್ಲ ಗೇಟುಗಳಿಂದ ನೀರು ಬಿಡಲು ಆರಂಭಿಸಲಾಗಿದೆ. 519.60 ಮೀ. ಎತ್ತರದ ಜಲಾಶಯದಲ್ಲಿ ಗರಿಷ್ಠ 123.081 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ 519.27 ಮೀ. ಎತ್ತರದಲ್ಲಿ 117.376 ಟಿಎಂಸಿ ಅಡಿ ನೀರು ಸಂಗ್ರಹವಾಗಿ ಜಲಾಶಯಕ್ಕೆ 1,02,000 ಕ್ಯೂಸೆಕ್‌ ಒಳ ಹರಿವಿದ್ದು ಮುಂಜಾಗೃತಾ ಕ್ರಮವಾಗಿ 1,32000 ಕ್ಯೂಸೆಕ್‌ ನೀರನ್ನು 26 ಗೇಟುಗಳನ್ನು 0.8 ಮೀ. ಮೇಲಕ್ಕೆತ್ತಿ 92 ಸಾವಿರ ಕ್ಯೂಸೆಕ್‌ ನೀರನ್ನು ನಾರಾಯಣಪುರದ ಬಸವಸಾಗರಕ್ಕೆ ನದಿ ಮೂಲಕವಾಗಿ ಬಿಡಲಾಗುತ್ತಿದೆ. ಸೋಮವಾರ ಬೆಳಗ್ಗೆ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ 76,305 ಕ್ಯೂಸೆಕ್‌ ನೀರು ಒಳ ಹರಿವಿದ್ದು 12 ಗೇಟುಗಳು, ಕೆಪಿಸಿಎಲ್ ಹಾಗೂ ಕಾಲುವೆಗಳು ಸೇರಿದಂತೆ ಒಟ್ಟು 91,942 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿತ್ತು.

ಸಂಜೆ ವೇಳೆ ಒಳ ಹರಿವಿನಲ್ಲಿ ಏರಿಕೆಯಾದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಎಲ್ಲ 26 ಗೇಟುಗಳಿಂದ 90 ಸಾವಿರ ಕ್ಯೂಸೆಕ್‌, ಕೆಪಿಸಿಎಲ್ ಮೂಲಕ 42 ಸಾವಿರ ಕ್ಯೂಸೆಕ್‌ ಸೇರಿ ಒಟ್ಟು 1,32 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನುಳಿದಂತೆ ಬೆಳಗ್ಗೆಯಿಂದ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಎಎಲ್ಬಿಸಿ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗೆ 307 ಕ್ಯೂಸೆಕ್‌, ಎಆರ್‌ಬಿಸಿ ಮತ್ತು ತಿಮ್ಮಾಪುರ ಏತ ನೀರಾವರಿ ಯೋಜನೆಗೆ 187 ಕ್ಯೂಸೆಕ್‌, ಮುಳವಾಡ ನೀರಾವರಿ ಯೋಜನೆ ಕಾಲುವೆಗಳಿಗೆ 410 ಕ್ಯೂಸೆಕ್‌, ಸೊನ್ನ, ರೊಳ್ಳಿಮನ್ನಿಕೇರಿ ಯೋಜನೆಗೆ 20 ಕ್ಯೂಸೆಕ್‌ ಸೇರಿ ಒಟ್ಟು ಕಾಲುವೆಗಳಿಗೆ 924 ಕ್ಯೂಸೆಕ್‌ ನೀರನ್ನು ಬಿಡಲಾಗುತ್ತಿದೆ.

ಕೆರೆ ತುಂಬುವ ಯೋಜನೆಗಳಿಗೆ 50 ಕ್ಯೂಸೆಕ್‌ ನೀರು ಕೂಡಗಿಯ ರಾಷ್ಟ್ರೀಯ ಉಷ್ಣ ವಿದ್ಯುತ್‌ ಸ್ಥಾವರಕ್ಕೆ 20 ಕ್ಯೂಸೆಕ್‌ ವಿವಿಧ ಕುಡಿಯುವ ನೀರಿನ ಘಟಕಗಳಿಗೆ ಒಟ್ಟು 58 ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next