ಹುಬ್ಬಳ್ಳಿ: ಅವಳಿನಗರದ ಜನರಿಗೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಗೆ ಫೆ. 28ರಂದು ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಹು-ಧಾ ಪಾಲಿಕೆ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ವಾರ್ಡ್ ನಂ. 35ರಲ್ಲಿ ಹಾನಿಗೊಳಗಾದ ನಾಲ್ಕು ಸೇತುವೆಗಳ ಮರುನಿರ್ಮಾಣದ ಕಾಮಗಾರಿಗೆ ಶನಿವಾರ ಉಣಕಲ್ಲದ ಹುಲಕೊಪ್ಪ ಸೇತುವೆ-1ರ ಉಣಕಲ್ಲ ಪಂಪ್ ಹೌಸ್ ಹತ್ತಿರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸದ್ಯ ಅವಳಿನಗರದ ಕೆಲ ವಾರ್ಡ್‌ಗಳಲ್ಲಿ ನಿರಂತರ ನೀರು ಹೊರತು ಪಡಿಸಿ ಇನ್ನುಳಿದ ಪ್ರದೇಶಗಳಲ್ಲಿ 5-6 ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದೆ. ಈ ಸಮಸ್ಯೆ ನಿವಾರಿಸಲು ಮಲಪ್ರಭಾದಿಂದ ಹೆಚ್ಚುವರಿಯಾಗಿ 40ಎಂಎಲ್‌ಡಿ ನೀರು ತರಲು 26 ಕೋಟಿ ರೂ. ವೆಚ್ಚ ದಲ್ಲಿ ಕಾಮಗಾರಿ ಕೈಗೊಂಡಿದ್ದು, ಫೆ. 28ರಂದು ಸವದತ್ತಿ ಮತ್ತು ಅಮ್ಮಿನಬಾವಿಯಲ್ಲಿ ಪೂರ್ಣಗೊಂಡ ಯೋಜನೆ ಉದ್ಘಾಟನೆ ಮೂಲಕ ಅವಳಿನಗರ ಜನರಿಗೆ ಮೂರು ದಿನಕ್ಕೊಮ್ಮೆ ನೀರು ನೀಡಲಾಗುವುದು ಎಂದರು.
ಅವಳಿ ನಗರದಲ್ಲಿನ ಪ್ರಮುಖ ರಸ್ತೆಗಳನ್ನು ಸಿಆರ್ ಎಫ್ ಅಡಿ 460 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಈಗಾಗಲೇ 2-3 ರಸ್ತೆಗಳು ನಿರ್ಮಾಣವಾಗಿವೆ. ಬಾಕಿ ಇರುವ ಏಳು ರಸ್ತೆಗಳಿಗೆ ಟೆಂಡರ್ ಆಗಿ ಕೆಲಸದ ಆದೇಶ ನೀಡಲಾಗಿದೆ. ಸ್ಮಾರ್ಟ್ ಸಿಟಿಯಲ್ಲೂ 500-600 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ಹಂತ ಹಂತವಾಗಿ ನಡೆಯುತ್ತಿವೆ. ಇನ್ನು ಹಲವು ಪ್ಯಾಕೇಜ್ ಮತ್ತು ಯೋಜನೆಗಳನ್ನು ತರಲಾಗುವುದು ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಫೆ. 14ರಂದು ಇನ್‌ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಎಂದು ಉದ್ಯಮಿದಾರರ ಸಭೆ ಹಮ್ಮಿಕೊಳ್ಳಲಾಗಿದೆ. ಇನ್ಫೋಸಿಸ್ ನವರು ನಗರದಲ್ಲಿ ಐಟಿ ಕಂಪನಿ ಸ್ಥಾಪಿಸಿದ್ದು, ಮೈಸೂರು ಮತ್ತು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಈ ಭಾಗದ ಐಟಿ ನೌಕರರನ್ನು ಅವರ ಇಚ್ಛೆಯ ಮೇರೆಗೆ ಇಲ್ಲಿನ ಕ್ಯಾಂಪಸ್‌ಗೆ ವರ್ಗಾಯಿಸಲು ಉತ್ಸುಕತೆ ತೋರಿದ್ದಾರೆ ಎಂದರು.
ವಾರ್ಡ್ ನಂ. 35ರಲ್ಲಿನ ಉಣಕಲ್ಲ-ಹುಲಕೊಪ್ಪ ಮುಖ್ಯರಸ್ತೆಯ ಸೇತುವೆ, ಹನುಮಂತನಗರದ ಧೋಬಿಘಾಟ್‌ನ ಸೇತುವೆ, ದೇವಿನಗರ ಮುಖ್ಯ ರಸ್ತೆಯ ಸೇತುವೆ, ಬನಶಂಕರಿ ಮತ್ತು ನೇಕಾರ ಕಾಲೋನಿ ಮುಖ್ಯ ರಸ್ತೆಯ ಸೇತುವೆ ಮತ್ತು ರಸ್ತೆಗಳು ಅತಿವೃಷ್ಟಿಯಿಂದ ಹಾನಿ ಗೊಳಗಾಗಿದ್ದವು. ಇವುಗಳ ಮರು ನಿರ್ಮಾಣಕ್ಕೆ 15 ಕೋಟಿ ರೂ.ಗಳ ಮಂಜೂರಾತಿ ಪಡೆಯಲಾಗಿದೆ. ಈ ನಾಲ್ಕು ಸೇತುವೆಗಳನ್ನು ಅಂದಾಜು 8.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸೋಮವಾರದಿಂದಲೇ ಈ ಕಾಮಗಾರಿ ಆರಂಭವಾಗಲಿದ್ದು, ಸೇತುವೆಗೆ 100 ಮೀಟರ್ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆಯ ಮಾಜಿ ಸದಸ್ಯರಾದ ಮಹೇಶ ಬುರ್ಲಿ, ಉಮೇಶ ಕೌಜಗೇರಿ, ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ರೂಪಾ ಶೆಟ್ಟಿ, ಉಮಾ ಅಕ್ಕೂರ, ಪಾಲಿಕೆಯ ಉಪ ಆಯುಕ್ತ ಅಜೀಜ ದೇಸಾಯಿ ಮೊದಲಾದವರಿದ್ದರು. ಆಯುಕ್ತ ಡಾ| ಸುರೇಶ ಇಟ್ನಾಳ ಸ್ವಾಗತಿಸಿದರು. ಗೌರಿ ಮಟ್ಟಿ ನಿರೂಪಿಸಿದರು. ಎಸ್.ಸಿ. ಬೇವೂರ ವಂದಿಸಿದರು.