ಧಾರವಾಡ: ನೀರು ಸಂಗ್ರಹ, ಸಮರ್ಪಕ ನಿರ್ವಹಣೆಗೆ ಇದೇ ನಿರ್ಲಕ್ಷ್ಯ,ಉದಾಸೀನತೆ ಮುಂದುವರಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ಕೇವಲ ಕುಡಿಯುವ ನೀರಿನ ಸಂಗ್ರಹ ತಾಣಗಳಾದರೂ ಅಚ್ಚರಿ ಇಲ್ಲ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ| ಶಿವಾನಂದ ಜಾಮದಾರ ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ, ಕೇಂದ್ರ ಜಲ ಆಯೋಗ ಕೃವಿವಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೇಂದ್ರ ಸರಕಾರದ “ಜಲಕ್ರಾಂತಿ’ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಇಡೀ ವಿಶ್ವದಲ್ಲಿ ಮನುಷ್ಯ ಬಳಕೆ ಲಭ್ಯವಿರುವ ನೀರಿನ ಪ್ರಮಾಣ ಕೇವಲ ಶೇ.3ರಷ್ಟು ಮಾತ್ರ ಉಳಿದ ಶೇ.97ರಷ್ಟು ನೀರು ಸಮುದ್ರ, ಹಿಮದ ರೂಪದಲ್ಲಿದೆ ಎಂದರು.
ಲಭ್ಯವಿರುವ ಶೇ.3ರಷ್ಟು ನೀರಿನಲ್ಲಿ ನೀರಾವರಿಗಾಗಿ 2/3ರಷ್ಟು ನೀರು ಬೇಕಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಸುಮಾರು 3,500ಕ್ಕೂ ಅಧಿಕ ದೊಡ್ಡ-ಮಧ್ಯಮ ಅಣೆಕಟ್ಟುಗಳು ನಿರ್ಮಾಣಗೊಂಡು ನೀರಾವರಿ ಉದ್ದೇಶದ ನೀರಿನ ಬೇಡಿಕೆ ಹೆಚ್ಚುತ್ತಿದೆ. ರಾಷ್ಟ್ರೀಯ ಜಲನೀತಿಯಲ್ಲಿ ಮೊದಲ ಆದ್ಯತೆ ಕುಡಿಯುವ ನೀರಾಗಿದ್ದರೆ, ಎರಡನೇ ಆದ್ಯತೆ ನೀರಾವರಿಯಾಗಿದೆ.
2050ರ ವೇಳೆಗೆ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಭಾರತವಾಗಲಿದ್ದು, ನೀರಿನ ಬೇಡಿಕೆ ತೀವ್ರ ಹೆಚ್ಚಲಿದೆ. ಕುಡಿಯುವ ನೀರು ಹಾಗೂ ನೀರಾವರಿ ಬೇಡಿಕೆ ನಡುವೆ ಸಂಘರ್ಷ ಹೆಚ್ಚಲಿದೆ. ಪ್ರಸ್ತುತ ಅನೇಕ ಪ್ರಮುಖ ಜಲಾಶಯಗಳಲ್ಲಿ ನಿಗದಿಯಾದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಕುಡಿಯುವ ಉದ್ದೇಶಕ್ಕೆ ಪೂರೈಕೆಯಾಗುತ್ತಿದ್ದು, ನೀರಾವರಿ ಸಂಕಷ್ಟ ಹೆಚ್ಚಿಸುವಂತೆ ಮಾಡಿದೆ ಎಂದರು.
ಆಲಮಟ್ಟಿಯಿಂದ ಬೆಂಗಳೂರಿಗೆ ನೀರು?: ಕಾವೇರಿ ನದಿಯ ಕೆಆರ್‌ಎಸ್ ಜಲಾಶಯದಲ್ಲಿ ಸುಮಾರು 48 ಟಿಎಂಸಿ ಎಫ್ಟಿ ನೀರು ಲಭ್ಯತೆ ಇದೆ. ಇದರಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಸುಮಾರು 60 ನಗರ-ಪಟ್ಟಣಗಳು, 640 ಗ್ರಾಮಗಳಿಗೆ ಕುಡಿಯುವ ನೀರು ನೀಡಬೇಕಿದೆ. ಬೆಂಗಳೂರಿಗೆ 8 ಟಿಎಂಸಿ ಎಫ್ಟಿ ನಿಗದಿಪಡಿಸಲಾಗಿತ್ತು. ಆದರೆ, ವಾಸ್ತವಿಕವಾಗಿ ಕೆಆರ್‌ಎಸ್‌ನಿಂದ ಪೂರೈಕೆಯಾಗುತ್ತಿರುವುದು ಸುಮಾರು 18 ಟಿಎಂಸಿಎಫ್ಟಿ ನೀರಾಗಿದೆ.
ಕಾವೇರಿ ಕೊಳದಲ್ಲಿ ನೀರಿನ ಲಭ್ಯತೆ ಕುಗ್ಗುತ್ತಿರುವುದು, ಬೆಂಗಳೂರು ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇನ್ನು ಕೆಲವೇ ವರ್ಷಗಳಲ್ಲಿ ತಲೆ ಎತ್ತುವ ಸಾಧ್ಯತೆ ಇಲ್ಲದಿಲ್ಲ ಎಂದರು. ಕೃವಿವಿ ಕುಲಪತಿ ಡಾ| ಡಿ.ಪಿ.ಬಿರಾದಾರ, ಸಿಡಬ್ಲ್ಯುಸಿಯ ಮುಖ್ಯ ಇಂಜನಿಯರ್ ಆರ್.ಕೆ.ಜೈನ್ ಇನ್ನಿತರರು ಇದ್ದರು.