Advertisement

ಉಳಿತಾಯ ಎಂಬ ಬಾವಿಯ ನೀರು

11:02 PM Oct 06, 2019 | Sriram |

ಮುಂಬಯಿನಲ್ಲೋ, ದುಬಾೖನಲ್ಲೋ ದಶಕಗಳ ಕಾಲ ಇದ್ದು ಸಿಕ್ಕಾಪಟ್ಟೆ ಉಳಿತಾಯ ಮಾಡಿ ಬಂದಿರುತ್ತಾರಲ್ಲ, ಅವರಲ್ಲಿ ಕೆಲವರು ಹುಟ್ಟೂರಿಗೆ ಬಂದ ಅನಂತರ ಬದಲಾಗುತ್ತಾರೆ. ಪರಸ್ಥಳದಲ್ಲಿ ಪೈಸೆಗೆ ಪೈಸೆ ಜೋಡಿಸಿ ಉಳಿತಾಯ ಮಾಡಿದವರು, ಹುಟ್ಟೂರಿನಲ್ಲಿ ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಾರೆ. ಈ ಕಾಲದ ಜನ ಆದರೆ, ಕ್ರೆಡಿಟ್‌ ಕಾರ್ಡ್‌ ಖರೀದಿಸಿ ಶಾಪಿಂಗ್‌ ನೆಪದಲ್ಲಿ ಅದನ್ನು ಉಜ್ಜಿ ಚಿಂದಿ ಉಡಾಯಿಸಿಬಿಡ್ತಾರೆ. ಉಳಿತಾಯ ಮಾಡೋ ಬಗ್ಗೆ ಯೋಚನೆಯನ್ನೇ ಮಾಡಲ್ಲ. ಅಂಥವರು ಕಷ್ಟ ಕಾಲದಲ್ಲಿ ಅಥವಾ ಆಕಸ್ಮಿಕ ದುರ್ಘ‌ಟನೆಗಳ ಸಂದರ್ಭದಲ್ಲಿ ಕಂಗಾಲಾಗಿ ಬಿಡುತ್ತಾರೆ. ಏನು ಮಾಡಬೇಕು ಅನ್ನೋದು ತೋಚದೆ, ನನಗೆ ಗೊತ್ತಾಗಲಿಲ್ಲ. ದುಡುಕಿಬಿಟ್ಟೆ, ಹಾಗೆ ಖರ್ಚು ಮಾಡಬಾರದಿತ್ತು ಎಂದೆಲ್ಲಾ ಹಳಹಳಿಸುತ್ತಾರೆ.

Advertisement

ಇಂಥ ಪರಿಸ್ಥಿತಿ ಜತೆಯಾಗಬಾರದು ಅನ್ನುವವರು ಪ್ರತಿ ತಿಂಗಳ ಬಜೆಟ್‌ ಪ್ಲಾನ್‌ ಮಾಡಬೇಕು. ಅದಕ್ಕೆ ಅನುಗುಣವಾಗಿ ಖರ್ಚು ವೆಚ್ಚ ಮಾಡುತ್ತಾ ಹೋಗಬೇಕು. ಈಗಾಗಲೇ ಭವಿಷ್ಯಕ್ಕೆಂದು ಹಣ ಕೂಡಿಸಿ ಇಟ್ಟಿದ್ದರೂ, ಮರೆಯದೆ ಆದಷ್ಟೂ ದುಡಿದೇ ತಿನ್ನುವ, ಸ್ವಲ್ಪವಾದರೂ ಉಳಿತಾಯ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ಕೆಲಸ ಪ್ರಾರಂಭದಲ್ಲಿ ಕಷ್ಟವೆನಿಸಿದರೂ ನಿಧಾನವಾಗಿ ಸಮತೋಲನ ಸಾಧ್ಯವಾಗುತ್ತದೆ. ಅನಗತ್ಯ ವಸ್ತುಗಳ ಖರೀದಿ, ಪಾರ್ಟಿ, ಮೋಜು ಮಸ್ತಿಗಳನ್ನು ವರ್ಜಿಸಬೇಕು.

ನೆಮ್ಮದಿಯ, ಶಿಸ್ತುಬದ್ಧ ಜೀವನ ನಮ್ಮದಾಗಬೇಕೆಂದರೆ ಲೆಕ್ಕಾಚಾರದ ಬದುಕು ಬಹಳ ಮುಖ್ಯ. ಪ್ರತಿಯೊಂದು ವ್ಯವಹಾರಗಳಲ್ಲಿ ನಿಮ್ಮದೇ ಆದ ಲೆಕ್ಕಾಚಾರ ಇರಲಿ. ಅವರೇನು ಅಂತಾರೆ, ಇವರೇನು ಅಂತಾರೆ ಅನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಪ್ರಸ್ಟೀಜ್‌ಗೊಸ್ಕರ ಏನೇನೋ ಮಾಡಲು ಹೋಗಿ ಇನ್ನೇನೋ ಮಾಡ್ಕೊಂಡು ಕೈ ಸುಟ್ಕೊಬಾರದು. ಯಾವುದಕ್ಕೆ ಖರ್ಚು ಮಾಡಬೇಕು ಅಥವಾ ಖರ್ಚು ಮಾಡಬಾರದು ಎಂಬುದರ ತಿಳಿವಳಿಕೆ ಇರಬೇಕು.

ಸಂಪಾದನೆ ಅನ್ನೋದು ಸದಾ ಹರಿಯುವ ನದಿಯಾಗಿರಬೇಕು. ಸಂಪಾದನೆಗಾಗಿ ಅನೇಕ ಮೂಲಗಳನ್ನು ಹುಡುಕಿಕೊಳ್ಳಬೇಕು. ಬರೀ ಉಳಿತಾಯ ಮಾಡಿರುವ ಹಣವೇ ನನ್ನನ್ನು ಎಲ್ಲಾ ಸಂದರ್ಭದಲ್ಲೂ ಕಾಪಾಡುತ್ತದೆ ಎಂದು ಭಾವಿಸುವುದು ಮೂರ್ಖತನ. ಉಳಿತಾಯದ ಹಣ ಎಂಬುದು ಬಾವಿಯ ನೀರಿದ್ದ ಹಾಗೆ. ಅದು ಆಕಸ್ಮಿಕವಾಗಿ ಖಾಲಿಯಾಗಿಬಿಡಬಹುದು. ಹಾಗಾಗಿ ಬಾವಿ ಹತ್ತಿರದಲ್ಲಿ ಇದ್ದರೂ, ಭವಿಷ್ಯದ ದೃಷ್ಟಿಯಿಂದ ಅಂಥದೇ ಇನ್ನೊಂದು ಸಂಪನ್ಮೂಲದ ಸ್ಥಳವನ್ನೂ ನೋಡಿಕೊಳ್ಳುವುದು ಜಾಣತನ. ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬ ಮಾತನ್ನು ನಮ್ಮ ಹಿರಿಯರು ಸುಮ್ಮನೆ ಹೇಳಿದರು ಅಂದುಕೊಂಡಿರಾ?

Advertisement

Udayavani is now on Telegram. Click here to join our channel and stay updated with the latest news.

Next