Advertisement

ನೀರು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಲ್ಲ

07:51 AM May 28, 2019 | Team Udayavani |

ಯಲಬುರ್ಗಾ: ತಾಲೂಕಿನಲ್ಲಿ ಭೀಕರ ಬರ ಆವರಿಸಿದ್ದು, ಗ್ರಾಪಂ ಪಿಡಿಒಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಜನತೆಗೆ ನೀರು ಪೂರೈಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಯಾವುದೇ ಮುಲಾಜಿಯಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಹಾಲಪ್ಪ ಆಚಾರ್‌ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಬರಗಾಲ ನಿಮಿತ್ತ ಕುಡಿಯುವ ನೀರು ಹಾಗೂ ಬರಗಾಲ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ 144 ಗ್ರಾಮಗಳಲ್ಲಿ ಮುಂದೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.

ಗ್ರಾಪಂನ 14ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ಅನುದಾನ ಬಳಸಿಕೊಳ್ಳಲು ಅವಕಾಶವಿದೆ. ಅದನ್ನು ಪಿಡಿಒಗಳು ಸದ್ಬಳಕೆ ಮಾಡಿಕೊಳ್ಳಿ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಹೈಕ ಯೋಜನೆಯ ಕಾಮಗಾರಿಗಳನ್ನು ಗ್ರಾಪಂ ಪಿಡಿಒಗಳು ಸರಿಯಾಗಿ ಅನುಷ್ಠಾನಗೊಳಿಸಿಕೊಳ್ಳಬೇಕು. ಕಾಮಗಾರಿ ಮುಗಿದ ನಂತರ ದೃಢೀಕರಣ ಪತ್ರ ನೀಡಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

ತಾಳಕೇರಿ ಗ್ರಾಪಂ ವ್ಯಾಪ್ತಿಯ ಮರಕಟ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಸುಮಾರು 10 ಲಕ್ಷ ರೂ. ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕಳಪೆ ಪೈಪ್‌ಗ್ಳನ್ನು ರಾತ್ರೋ ರಾತ್ರಿ ಹಾಕಿ ಗುತ್ತಿಗೆದಾರ ಬಿಲ್ ಪಾವತಿ ಮಾಡಿಸಿಕೊಂಡಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ ಆರೋಪಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಹಾಲಪ್ಪ ಆಚಾರ್‌, ನೀರು ಮತ್ತು ನೈರ್ಮಲ್ಯ ಅಧಿಕಾರಿ ತಿರುಕುನಗೌಡ ಅವರಿಂದ ಕಾಮಗಾರಿ ಕುರಿತು ಮಾಹಿತಿ ಪಡೆದರು. ಕ್ಷೇತ್ರದಲ್ಲಿ ಈ ರೀತಿ ಕಳಪೆ ಮಟ್ಟದ ಕಾಮಗಾರಿಗಳು ನಡೆದಿದ್ದು, ಪರಿಶೀಲನೆ ನಡೆಸಿ ಗುಣಮಟ್ಟದ ಪೈಪ್‌ಲೈನ್‌ ಹಾಕಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಮುಂದಾಗಿ. ತಪ್ಪಿತಸ್ಥ ಗುತ್ತಿಗೆದಾರ ಹಾಗೂ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

Advertisement

ಬರಗಾಲ ಬಂತೆಂದರೆ ಕೆಲ ಅಧಿಕಾರಿಗಳಿಗೆ ಸುಗ್ಗಿ ಕಾಲ ಇದ್ದಂತೆ. ಕುಡಿಯುವ ನೀರಿನ ನೆಪದಲ್ಲಿ ಪೈಪ್‌ಲೈನ್‌ ಹಾಗೂ ದುರಸ್ತಿ ಹೆಸರಿನಲ್ಲಿ ಪ್ರತಿವರ್ಷ ಸಾಕಷ್ಟು ಹಣ ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಹಾಗೂ ಕೆಲ ಪಿಡಿಒಗಳು ನೀರಿನ ಹೆಸರಿನಲ್ಲಿ ಬಿಲ್ ಪಾಸ್‌ ಮಾಡಿಕೊಂಡು ಹಣ ಲೂಟಿ ಹೊಡೆಯುತ್ತಿದ್ದಾರೆ. ಇನ್ಮುಂದೆ ಇಂತಹ ಕೆಲಸ ಮಾಡಿದರೆ ನಡೆಯಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಗ್ರಾಪಂ ಪಿಡಿಒ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಜಂಟಿಯಾಗಿ ತಾಲೂಕಿನ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಅಲ್ಲಿ ಹೊಸ ಬೋರ್‌ವೆಲ್ ಕೊರೆಸಬೇಕು. ನೀರು ಲಭ್ಯವಾಗದಿದ್ದರೆ ಖಾಸಗಿ ಮಾಲೀಕರಿಂದ ನೀರು ಪೂರೈಕೆ ಮಾಡಿಕೊಳ್ಳಬೇಕು. ಟ್ಯಾಂಕರ್‌ ಮೂಲಕವು ನೀರು ಪೂರೈಸುವ ಕಾರ್ಯ ಕೈಗೊಳ್ಳಬೇಕು. ಒಟ್ಟಿನಲ್ಲಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಎಲ್ಲರೂ ಹೆಚ್ಚಿನ ಗಮನಹರಿಸಬೇಕು. ಅದಕ್ಕೆ ಅಗತ್ಯವಿರುವ ಅನುದಾನ ತರಲು ಸಿದ್ಧನಿದ್ದೇನೆ ಎಂದರು.

ಚಿಕ್ಕೋಪ ಗ್ರಾಮದಲ್ಲಿ ಒಂದೇ ಗೋಶಾಲೆ ಇರುವುದರಿಂದ ರೈತರಿಗೆ ತೊಂದರೆಯಾಗಿದ್ದು ಮಸಾರಿ ಭಾಗದಲ್ಲಿ ಇನ್ನೊಂದು ಗೋಶಾಲೆ ಶೀಘ್ರದಲ್ಲೇ ತೆರೆಯುವಂತೆ ತಹಶೀಲ್ದಾರ್‌ ವೈ.ಬಿ. ನಾಗಠಾಣ ಅವರಿಗೆ ಶಾಸಕರು ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಐದು ಗ್ರಾಪಂಗಳಲ್ಲಿ ಸುವರ್ಣಗ್ರಾಮ ಯೋಜನೆಯನ್ನು ಪಿಡಿಒಗಳು ಕಾಳಜಿಯಿಂದ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಿಸಿಕೊಳ್ಳಲು ಮುಂದಾಗಬೇಕು. ಕಾಮಗಾರಿ ಕಳಪೆಯಾದರೆ ನಿಮ್ಮನ್ನೇ ಹೊಣೆಯನ್ನಾಗಿ ಮಾಡಬೇಕಾಗುತ್ತದೆ. ಇದರಲ್ಲಿ ಯಾವುದೇ ರಾಜೀ ಇಲ್ಲ. ಯಾವುದೇ ಕಾಮಗಾರಿಯಾಗಿರಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಅದು ನಿಮ್ಮನ್ನು ಸದಾ ಕಾಪಾಡುತ್ತದೆ ಎಂದರು.

ಭ್ರಷ್ಟರಾಗಬೇಡಿ: ಯಲಬುರ್ಗಾ, ಕುಕನೂರು ತಹಶೀಲ್ದಾರ್‌ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಕಾರ್ಯಾಲಯದ ಸಿಬ್ಬಂದಿ ಹಣಕ್ಕೆ ಬೇಡಿಕೆಯಿಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಕಚೇರಿಗೆ ಬರುವ ಜನತೆಯ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಇಲ್ಲದಿದ್ದರೆ ನಿಮ್ಮನ್ನು ಅಮಾನತುಗೊಳಿಸುವುದಾಗಿ ಎಚ್ಚರಿಸಿದರು.

ತಾಪಂ ಇಒ ಲಕ್ಷ್ಮೀಪತಿ, ಯಲಬುರ್ಗಾ ತಹಶೀಲ್ದಾರ್‌ ವೈ.ಬಿ. ನಾಗಠಾಣ, ಕುಕನೂರ ತಹಶೀಲ್ದಾರ್‌ ನೀಲಪ್ರಭಾ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಗ್ರಾಪಂ ಪಿಡಿಒಗಳು ವರದಿ ಒಪ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next