Advertisement

ಕನ್ನಡಕುದ್ರು: ಎರಡು ದಿನಕ್ಕೊಮ್ಮೆ ನಳ್ಳಿ ನೀರು ಪೂರೈಕೆ

12:02 AM May 09, 2019 | sudhir |

ಹೆಮ್ಮಾಡಿ: ಇಲ್ಲಿನ ಕನ್ನಡಕುದ್ರುವಿನಲ್ಲಿ ಗ್ರಾ.ಪಂ. ವತಿಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಪಂಚಾ ಯತ್‌ ಗರಿಷ್ಠ ಪ್ರಯತ್ನ ಮಾಡುತ್ತಿದ್ದರೂ, ಅಗತ್ಯದಷ್ಟು ನೀರು ಒದಗಿಸಲು ಹರಸಾಹಸ ಪಡುವಂತಾಗಿದೆ.

Advertisement

ಹೆಮ್ಮಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕನ್ನಡಕುದ್ರುವಿನಲ್ಲಿ ಸುಮಾರು 40 – 50 ಮನೆಗಳಿವೆ. ಸಾವಿರಾರು ಮಂದಿ ಇಲ್ಲಿ ನೆಲೆಸಿದ್ದಾರೆ. ಪಂಚಾಯತ್‌ ವತಿಯಿಂದ ದಿನ ಬಿಟ್ಟು ದಿನ ನಳ್ಳಿ ನೀರು ಪೂರೈಸಲಾಗುತ್ತಿದೆ. ಆದರೆ ಅದು ಹೆಚ್ಚು ಹೊತ್ತು ಕೊಡುತ್ತಿಲ್ಲ. ಇಲ್ಲಿ ಹೆಚ್ಚಿನೆಲ್ಲ ಮನೆಗಳಿಗೆ ಬಾವಿಯಿದ್ದರೂ, ಸುತ್ತಲೂ ಹೊಳೆ ನೀರಿದ್ದರೂ, ಅದು ಬಳಕೆಗೆ ಮಾತ್ರ ಯೋಗ್ಯವಿಲ್ಲ.

ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಕನ್ನಡಕುದ್ರುವಿನಲ್ಲಿ ನೀರಿನ ಸಮಸ್ಯೆಯೂ ಶುರುವಾಗುತ್ತದೆ. ಇಲ್ಲಿ 3 ಕಡೆಯಿಂದಲೂ ಸಮೃದ್ಧವಾದ ನೀರಿದೆ. ಆದರೆ ಅದು ಉಪ್ಪು ನೀರು ಆಗಿರುವುದರಿಂದ ಯಾವುದಕ್ಕೂ ಪ್ರಯೋಜನವಿಲ್ಲದಂತಾಗಿದೆ.

ವಾರಾಹಿ ನೀರು ಕೊಡಲಿ

ಪಂಚಾಯತ್‌ನವರು ನಳ್ಳಿ ಮೂಲಕ ನೀರು 2 ದಿನಕ್ಕೊಮ್ಮೆ ಕೊಡುತ್ತಿದ್ದಾರೆ. ಆದರೆ ಇಲ್ಲಿ ಕೊನೆಯಲ್ಲಿ ನೀರು ಸರಿಯಾಗಿ ಬರುವುದೇ ಇಲ್ಲ. ನಮಗೆ ಹೆಚ್ಚೆಂದರೆ 4-5 ಕೊಡಪಾನ ಅಷ್ಟೇ ಸಿಗುತ್ತದೆ. ಎರಡು ದಿನಕ್ಕೆ ಈ ನೀರು ಸಾಕಾಗುತ್ತದೆಯೇ? ಪ್ರತಿ ವರ್ಷ ಇದೇ ಸಮಸ್ಯೆ ಇರುತ್ತದೆ. ನಾವು ಬಾವಿ ನೀರು ಉಪ್ಪು ಆದರೂ, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಹಾಗೂ ಇತರೆ ಬಳಕೆಗೆ ಇದನ್ನು ಬಳಸುತ್ತೇವೆ. ಇಲ್ಲಿಂದ ಇನ್ನೆಲ್ಲಿಗೋ ವಾರಾಹಿ ನೀರು ಕೊಂಡು ಹೋಗುವ ಯೋಜನೆ ಇರುವಾಗ, ಇದೇ ತಾಲೂಕಿನಲ್ಲಿರುವ ನಮಗೂ ವಾರಾಹಿ ನೀರನ್ನು ಕೊಡಲು ಒಂದು ಯೋಜನೆ ರೂಪಿಸಲಿ ಎನ್ನುವುದು ಇಲ್ಲಿನ ನಿವಾಸಿ ಶಾರದಾ ಅವರ ಒತ್ತಾಯ.

Advertisement

ಕನ್ನಡಕುದ್ರುವಿನ ವೈಲೆಟ್ ಕ್ರಾಸ್ತಾ ಅವರು, ನಮಗೆ ಪಂಚಾಯತ್‌ನವರು ದಿನ ಬಿಟ್ಟು ದಿನ ನಳ್ಳಿ ನೀರು ಕೊಡುತ್ತಾರೆ. ಒಂದು ದಿನ ಬೆಳಗ್ಗೆ ಬಿಟ್ಟರೆ, ಮತ್ತೂಂದು ದಿನ ಸಂಜೆ, ಹೀಗೆ ನೀರು ಬಿಡಲು ನಿಗದಿತ ಸಮಯ ಅಂತಾ ಇಲ್ಲ. ನಾವು ಎಲ್ಲ ಸಮಯದಲ್ಲಿ ಮನೆಯಲ್ಲಿ ಇರುವುದಿಲ್ಲ. ಅದಕ್ಕೆ ಅಂತಾನೇ ಒಂದು ಸಮಯ ನಿಗದಿಪಡಿಸಲಿ ಎಂದವರು ಆಗ್ರಹಿಸಿದರು.

ಟ್ಯಾಂಕರ್‌ ನೀರು ಕೊಡಲಿ

2 ದಿನಕ್ಕೊಮ್ಮೆ ನಳ್ಳಿ ನೀರು ಕೊಡುತ್ತಿದ್ದರೂ, ಅದು ಇಲ್ಲಿರುವ ಎಲ್ಲ ಮನೆಗಳಿಗೂ ಸಾಲುತ್ತಿಲ್ಲ. ಅದರಲ್ಲೂ ಕೊನೆಯಲ್ಲಿರುವ ಮನೆಗಳವರೆಗೆ ಅಂತೂ ಈ ನೀರು ತಲುಪುವುದೇ ಇಲ್ಲ. ಹಾಗಾಗಿ ನಳ್ಳಿ ನೀರು ಸಿಗದವರಿಗಾದರೂ ಟ್ಯಾಂಕರ್‌ ಮೂಲಕ ವಾದರೂ ಪಂಚಾಯತ್‌ನವರು ನೀರು ಕೊಡಲಿ ಎನ್ನುವುದು ಇಲ್ಲಿನವರ ಆಗ್ರಹವಾಗಿದೆ.

ಉದಯವಾಣಿ ಆಗ್ರಹ

ಕನ್ನಡಕುದ್ರುವಿನ ನೀರಿನ ಸಮಸ್ಯೆಗೆ ಮುಂದಿನ ದಿನಗಳಲ್ಲಿಯಾದರೂ ಶಾಶ್ವತ ಪರಿಹಾರ ಕಂಡುಕೊಳ್ಳಲಿ. ಇಲ್ಲಿ ಸುತ್ತಲಿರುವ ಉಪ್ಪು ನೀರನ್ನು ಬಳಕೆಗೆ ಯೋಗ್ಯವಾಗುವಂತೆ ಮಾಡಲು ಪಂಚಾಯತ್‌ ಮುಂದಾಗಬೇಕಿದೆ.

ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕನ್ನಡಕುದ್ರವಿನಲ್ಲಿ ಸುತ್ತಲೂ ಹೊಳೆಯ ನೀರಿದೆ. ಆದರೆ ಅದು ಉಪ್ಪು ನೀರು ಆಗಿರುವುದರಿಂದ ಬಳಸಲು ಸಾಧ್ಯವಿಲ್ಲ. ಮುಂದಿನ ವರ್ಷದಿಂದಲಾದರೂ ಇಲ್ಲಿಗೆ ಶಾಶ್ವತವಾಗಿ ಕುಡಿಯುವ ನೀರು ಸಿಗುವಂತಾಗಲಿ ಎನ್ನುವುದು ಇಲ್ಲಿನ ಜನರ ಆಶಯ.
ಟ್ಯಾಂಕರ್‌ ನೀರು ಪೂರೈಕೆ ಕಷ್ಟ

ಕನ್ನಡಕುದ್ರುವಿನಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಟ್ಯಾಂಕರ್‌ ನೀರು ಪೂರೈಕೆ ಮಾಡುವುದು ಕಷ್ಟ ಅನ್ನುವ ಕಾರಣಕ್ಕೆ ಅಲ್ಲಿರುವ ಮನೆಗಳಿಗೆ ನಳ್ಳಿ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಕರೆಂಟ್ ಇಲ್ಲದಾಗ ನೀರಿನ ಪೂರೈಕೆಯಲ್ಲಿ ಕೆಲವೊಮ್ಮೆ ವ್ಯತ್ಯಯವಾಗುತ್ತದೆ. ಆದರೂ ಕನ್ನಡಕುದ್ರುವಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ.
– ಮಂಜಯ್ಯ ಬಿಲ್ಲವ,ಹೆಮ್ಮಾಡಿ ಗ್ರಾ.ಪಂ. ಪಿಡಿಒ
Advertisement

Udayavani is now on Telegram. Click here to join our channel and stay updated with the latest news.

Next