Advertisement
ಸ್ಮಾರ್ಟ್‌ಸಿಟಿ ಮಂಗಳೂರಿನಲ್ಲಿ ಮಳೆ ಪ್ರಮಾಣ ಅಧಿಕವಿರುವ ಕಾರಣದಿಂದ ಇಲ್ಲಿನ ಕೆಲವು ರಾಜಕಾಲುವೆಗಳಲ್ಲಿ ನೆರೆನೀರು ಉಕ್ಕಿ ಹಲವು ಪ್ರದೇಶಗಳು ಜಲಾವೃತವಾಗಿ ಸಮಸ್ಯೆ ಆಗುತ್ತಿವೆ. ಇಂತಹ ಅಪಾಯದ ಸನ್ನಿವೇಶವನ್ನು ಎದುರಿಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಿಸಿ ಕೆಮರಾ ಸಹಿತ “ವಾಟರ್ ಲೆವೆಲ್ ಸೆನ್ಸರ್’ ಅಳವಡಿಸಿದೆ. ಪೈಲೆಟ್ ಪ್ರಾಜೆಕ್ಟ್ ಆಗಿ ಇದು ಮಂಗಳೂರಿನಲ್ಲಿ ಜಾರಿಯಾಗಿದೆ. ಕೊಟ್ಟಾರ, ಪಂಪ್‌ವೆಲ್, ಜಪ್ಪಿನ ಮೊಗರು, ಸುಭಾಶ್‌ನಗರ, ಅತ್ತಾವರ, ಕೊಡಿಯಾಲಬೈಲು, ಬಿಜೈ, ಕುದ್ರೋಳಿ, ಪಚ್ಚನಾಡಿ, ಕೋಡಿಕಲ್, ಚಿತ್ರಾಪುರ, ಮಾಲೆಮಾರ್ ಸಹಿತ 20 ಕಡೆಯ ರಾಜಕಾಲುವೆಯ ಬದಿಯಲ್ಲಿ ಸೆನ್ಸರ್ ಅಳವಡಿಸಲಾಗಿದೆ. ಸಿಸಿ ಕೆಮರಾ, ಸೆನ್ಸರ್ ಇದರಲ್ಲಿದ್ದು, ಸೋಲಾರ್ ಮುಖೇನ ಇದು ನಿರ್ವಹಣೆಯಾಗುತ್ತಿದೆ.
Related Articles
Advertisement
ಅಳವಡಿಕೆ ಮಾಡಲಾದ ಪರಿಕರದಿಂದ ಮಾಹಿತಿ/ಡೇಟಾ ನೇರವಾಗಿ ಪ್ರಸ್ತುತ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಚೇರಿಗೆ ತಲುಪುತ್ತಿದೆ. ಈ ಯೋಜನೆ ಉದ್ಘಾಟನೆಯಾದ ಅನಂತರ ಹಾಗೂ ಪೂರ್ಣ ಮಟ್ಟದಲ್ಲಿ ಅನುಷ್ಠಾನವಾದ ಮೇಲೆ ಇದರ ಮಾಹಿತಿ ಆಯಾ ಜಿಲ್ಲಾಡಳಿತ-ಪಾಲಿಕೆಗೆ ದೊರೆಯಲಿದೆ. ಅನಂತರ ಆ್ಯಪ್/ ವೆಬ್‌ಸೈಟ್ ಮುಖೇನ ಸಾರ್ವಜನಿಕರ ವೀಕ್ಷಣೆಗೂ ಲಭ್ಯವಾಗುವ ಸಾಧ್ಯತೆಯಿದೆ.
ಮಂಗಳೂರು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಉದಯವಾಣಿ ಜತೆಗೆ ಮಾತನಾಡಿ, ʼರಾಜಕಾಲುವೆಗಳಲ್ಲಿ ಮಳೆ ನೀರು ಉಕ್ಕಿ ಹರಿಯುವ ಸಂದರ್ಭ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ವಾಟರ್ ಲೆವೆಲ್ ಸೆನ್ಸರ್ ಅಳವಡಿಸಲಾಗಿದೆ. ಈ ಮೂಲಕ ಭಾರೀ ಮಳೆಯ ಸಂದರ್ಭ ಸೂಕ್ತ ಎಚ್ಚರಿಕೆ ವಹಿಸಲು ಸ್ಥಳೀಯಾಡಳಿತಕ್ಕೆ ಸಾಧ್ಯವಾಗಲಿದೆ’ ಎಂದರು.
23 ಕಡೆ ಮಳೆ ಮಾಪನ, 9 ಹವಾಮಾನ ಮಾಪನ
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ಅಬಕಾರಿ ಭವನ, ಮುಕ್ಕ ಚೆಕ್‌ಪೋಸ್ಟ್, ಬಿಇಒ ಕಚೇರಿ ಬೋಳಾರ, ಸುರತ್ಕಲ್ ಪಶು ಆಸ್ಪತ್ರೆ ಸಹಿತ ನಗರದ 23 ಕಡೆಗಳಲ್ಲಿ ಮಳೆ ಮಾಪನ ಕೇಂದ್ರ ಟೆಲಿಮೆಟ್ರಿಕ್ ರೈನ್ ಗೇಜ್ (ಟಿಆರ್‌ಜಿ) ಅಳವಡಿಸಲಾಗಿದೆ. ನಿಗದಿತ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ ಎಂಬುದರ ಮಾಹಿತಿ ಇದರಿಂದ ಲಭಿಸಲಿದೆ.
ಸರ್ಕ್ನೂಟ್‌ಹೌಸ್, ಎಪಿಎಂಸಿ, ಬೈಕಂಪಾಡಿ, ಬಿಜೈ ಮೆಸ್ಕಾಂ ಭವನ ಸಹಿತ 9 ಕಡೆಗಳಲ್ಲಿ ಹವಾಮಾನ ಮಾಪನ ಕೇಂದ್ರ ಟೆಲಿಮೆಟ್ರಿಕ್ ವೆದರ್ ಸ್ಟೇಷನ್ (ಟಿಡಬ್ಲೂ$Âಎಸ್) ಅಳವಡಿಸಲಾಗಿದೆ. ಇಲ್ಲಿನ ನಿಗದಿತ ಪ್ರದೇಶದ ಹವಾಮಾನ, ಉಷ್ಣಾಂಶ, ಗಾಳಿಯ ವೇಗ ಸಹಿತ ವಿವಿಧ ಆಯಾಮದ ಮಾಹಿತಿ ದೊರೆಯಲಿದೆ. ಸದ್ಯ ಈ ಎರಡೂ ಕೇಂದ್ರಗಳ ಮಾಹಿತಿ ಬೆಂಗಳೂರಿಗೆ ರವಾನೆಯಾಗುತ್ತಿದೆ. ಮುಂದೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಶೀಘ್ರ ಪೂರ್ಣ ಮಟದಲ್ಟಿ ಜಾರಿ: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಪೈಲೆಟ್ ಪ್ರಾಜೆಕ್ಟ್ ಮೂಲಕ ರಾಜ್ಯದ ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡದಲ್ಲಿ ನೆರೆ ನಿರ್ವಹಣೆಗಾಗಿ ವಿವಿಧ ಸಾಧನಗಳನ್ನು ಅಳವಡಿಸಲಾಗಿದೆ. ಪೂರ್ಣಮಟ್ಟದಲ್ಲಿ ಇದರ ಅನುಷ್ಠಾನ ಶೀಘ್ರದಲ್ಲಿ ನಡೆಯಲಿದೆ. ಇದರಿಂದ ಲಭ್ಯವಾಗುತ್ತಿರುವ ಡಾಟ ಇದೀಗ ಬೆಂಗಳೂರು ಕಚೇರಿಗೆ ದೊರೆಯುತ್ತಿದೆ. ಮುಂದೆ ಇದರ ಮಾಹಿತಿಯನ್ನು ಸಾರ್ವಜನಿಕರಿಗೂ ನೀಡಲಾಗುತ್ತದೆ. –ಸುನಿಲ್ ಗವಾಸ್ಕರ್, ವಿಜ್ಞಾನಿ, ಕೆಎಸ್‌ಎನ್‌ಡಿಎಂಸಿ
ದಿನೇಶ್ ಇರಾ