Advertisement

ಹಿಪ್ಪರಗಿ ಜಲಾಶಯ ನೀರಿನ ಮಟ್ಟ ಇಳಿಕೆ

03:08 PM Apr 19, 2019 | pallavi |

ಬನಹಟ್ಟಿ; ಉತ್ತರ ಕರ್ನಾಟಕದ ಜೀವಜಲ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದು, ಹಿಪ್ಪರಗಿ ಜಲಾಶಯ ಖಾಲಿಯಾಗಿದೆ. ಇದರಿಂದ ಈ ಭಾಗದ ಜಮಖಂಡಿ ರಬಕವಿ, ಬನಹಟ್ಟಿ, ತೇರದಾಳ ಸೇರಿದಂತೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದು, ಜನರು ನೀರಿಗೆ ಪರಿತಪಿಸುವಂತಾಗಿದೆ.

Advertisement

ಒಂದೆಡೆ ಲೋಕಸಭೆ ಚುನಾವಣೆ ದಿನಗಳ ಕ್ಷಣಗಣನೆ ಸಮೀಪಿಸುತ್ತಿದ್ದಂತೆ ಪ್ರಚಾರದ ಅಬ್ಬರ ಕೂಡಾ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಮತದಾರ ನೀರಿಗಾಗಿ ಅಲೆದಾಡುತ್ತಿದ್ದರೆ. ಅಭ್ಯರ್ಥಿ ಮಾತ್ರ ತನಗೆ ಬೀಳುವ ಓಟಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಈ ಭಾಗದ ಪ್ರಮುಖ ನಗರ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ತಾರಕಕ್ಕೇರುತ್ತಿದೆ.

ಮಹಾರಾಷ್ಟ್ರದ ಕೋಯ್ನಾದಿಂದ ನೀರು ಬಂದೆ ಬಿಟ್ಟಿತು ಎನ್ನುವಂತೆ ಸಾಮಾಜಿಕ ತಾಣಗಳಲ್ಲಿನ ಹೇಳಿಕೆಗಳು ಹೇಳಿಕೆಗಳಾಗಿಯೇ ಉಳಿದಿದ್ದು, ನೀರು ಮಾತ್ರ ಬಂದಿಲ್ಲ. ಅಲ್ಲದೇ ಇದೇ ನೀರನ್ನ ಅವಲಂಬಿಸಿರುವ ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯ ರೈತರ ಪರಿಸ್ಥಿತಿ ಹೇಳತೀರದಾಗಿದೆ. ನೀರಿಲ್ಲದೆ ಬೆಳೆಯೂ ಒಣಗಿ ರೈತ ಕಂಗಾಲಾಗಿದ್ದು, ಮಹಾರಾಷ್ಟ್ರದ ಕೋಯ್ನಾದಿಂದ ನೀರು ಬಿಡಿಸುವುದು ಒಂದೇ ಇದಕ್ಕೆ ಪರಿಹಾರವಾಗಿದೆ.

ರಬಕವಿ-ಬನಹಟ್ಟಿ ನಗರಸಭೆಯ ರಬಕವಿ, ಬನಹಟ್ಟಿ, ರಾಂಪುರ, ಹೊಸೂರ ಸೇರಿದಂತೆ ಹಲವು ಕಡೆಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ದಿನಗಟ್ಟಲೆ ಸರದಿಯಲ್ಲಿ ನಿಂತೂ ನೀರು ಪಡೆಯುವ ಸ್ಥಿತಿ ಎದುರಾಗಿದೆ.

ನೂತನ ಸದಸ್ಯರಿಗೆ ತಪ್ಪದ ಗೋಳು: ಅವಳಿನಗರದ ನೂತನ ಸದಸ್ಯರ ಪರಿಸ್ಥಿತಿ ಹೇಳತೀರದಾಗಿದ್ದು, ಚುನಾವಣೆ ಆಗಿ ಹಲವಾರು ತಿಂಗಳು ಕಳೆದರೂ ಅಧಿಕಾರವಿಲ್ಲ. ಚುನಾವಣೆಗಿಂತ ಮೊದಲು ಇವರು ಭರವಸೆಗಳ ಸುರಿಮಳೆ ಸುರಿದು ಮತ ಪಡೆದು ಆಯ್ಕೆಗೊಂಡಿದ್ದಾರೆ. ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ನಮಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ನಗರಸಭೆ ಚುನಾಯಿತ
ಪ್ರತಿನಿಧಿಗಳ ಮನೆ ಹೋಗುತ್ತಿದ್ದಾರೆ.

Advertisement

ಲೋಕಸಭೆ ನೀತಿ ಸಂಹಿತೆಯಿಂದಾಗಿ ಯಾವುದೇ ಕೆಲಸ ಮಾಡುವಂತಿಲ್ಲ . ಸದಸ್ಯರು ನೀರಿನ ತೊಂದರೆ ನೀಗಿಸಲು ಹೊಸ ಹೊಸ ತಂತ್ರಗಳನ್ನು ಬಳಸಿ ಹರಸಾಹಸ ಮಾಡುತ್ತಿದ್ದಾರೆ. ನಗರದ ಅಕ್ಕಪಕ್ಕದ ಬಾವಿಗಳಲ್ಲಿನ ನೀರನ್ನು ಹೊಸ ಪೈಪ್‌ಲೈನ್‌ ಮುಖಾಂತರ ನಗರಸಭೆ ಅಧಿಕಾರಿಗಳೊಂದಿಗೆ ಸೇರಿ ನಾಗರಿಕರಿಗೆ ನೀರು ಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೂ ನೀರು ಸಮರ್ಪಕವಾಗಿ ವಿತರಣೆಯಾಗದೇ ಜನ ರೊಚ್ಚಿಗೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಕೆಲವೊಂದು ಪಕ್ಷಗಳ ಮುಖಂಡರು
ಇದನ್ನೇ ಬಂಡವಾಳವಾಗಿಸಿಕೊಂಡು, ತಮ್ಮ ಪಕ್ಷಕ್ಕೆ ಮತ ನೀಡಿದರೆ ಮುಂದಿನ ದಿನಮಾನಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗದಂತೆ ಇದಕ್ಕೆ ಶಾಶ್ವತ ಪರಿಹಾರ ಮಾಡಿಕೊಡುವುದಾಗಿಭರವಸೆ ನೀಡುತ್ತಾ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.

ಬಿಸಿಲಿನ ತಾಪಕ್ಕೆ ತಂಪು ಪಾನೀಯ: ಒಂದೆಡೆ ಬಿಸಿಲಿನ ಝಳಕ್ಕೆ ಹೊಟ್ಟೆ ತಂಪಾಗಿಸಿಕೊಳ್ಳಲು ಇಲ್ಲಿನ ಜನರು ಕೋಲ್ಡ ಡ್ರಿಂಕ್ಸ್‌ ಅಂಗಡಿಗಳತ್ತ ಮುಖ ಮಾಡಿ ತಂಪು ಪಾನೀಯ, ಐಸ್‌-ಕ್ರೀಮ್‌, ತೆಂಗಿನ ಎಳೆನೀರು, ಹಣ್ಣಿನ ರಸ ಸೇವಿಸಿದರೆ ಇನ್ನೊಂದೆಡೆ ರೈತರು ತಮ್ಮ ಮನೆಗಳಲ್ಲಿರುವ ಮಣ್ಣಿನ ಮಡಕೆ, ತತ್ರಾನಿಯಲ್ಲಿ ನೀರು ಸಂಗ್ರಹಿಸಿ ತಂಪು ತಟ್ಟು ಹೊದಿಸಿ ತಂಪು ನೀರು ಸೇವಿಸುತ್ತಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜನಪ್ರತಿನಿಧಿಗಳ ಕೈ ಕಟ್ಟಿಹಾಕಿದೆ. ಒಂದೆಡೆ ಜನರ ನೀರಿನ ದಾಹ ಹೆಚ್ಚಾಗಿದ್ದರೂ ಅಭ್ಯರ್ಥಿ ಮಾತ್ರ ತನ್ನ “ಮತ’ ವೆಂಬ ದಾಹ ತೀರಿಸಿಕೊಳ್ಳಲು ಮಾತ್ರ ಹವಣಿಸುತ್ತಿದ್ದಾನೆ.

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next