ಬಂಟ್ವಾಳ: ನೇತ್ರಾವತಿ ತುಂಬೆ ಅಣೆಕಟ್ಟಿನಲ್ಲಿ ಎ. 21ರಂದು ಸಂಜೆ ನೀರಿನ ಮಟ್ಟ 5.27 ಮೀಟರ್‌ಗೆ ಇಳಿಯುವ ಮೂಲಕ ದಿನಕ್ಕೆ ಸರಾಸರಿ 5 ಸೆಂ.ಮೀ.ನಂತೆ ಕುಸಿತ ಆಗುತ್ತಿದೆ.
ಮಂಗಳೂರು ನಗರಕ್ಕೆ ಎಂದಿನಂತೆ ನೀರು ಸರಬರಾಜು ಮಾಡಲಾಗುತ್ತಿದ್ದು ಮನಪಾದಿಂದ ಪಂಪಿಂಗ್ ನಿಲುಗಡೆಗೆ ಸೂಚನೆ ಬಂದಿಲ್ಲ ಎಂದು ಸ್ಥಾವರ ಮೂಲಗಳು ತಿಳಿಸಿದೆ.
ಈ ನಡುವೆ ಡ್ಯಾಂ ಪಂಪಿಂಗ್ ಸ್ಟೇಶನ್‌ಗೆ ಬರುವವರನ್ನು ನಿರ್ಬಂಧಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅನಗತ್ಯ ಭೇಟಿ ನೀಡುವುದನ್ನು ತಡೆಯುವುದಕ್ಕೆ ಮಾತ್ರ ನಿರ್ಬಂಧ ವಿಧಿಸಿದ್ದು ಕರ್ತವ್ಯದ ಉದ್ದೇಶದಿಂದ ಬರುವುದಕ್ಕೆ ತಡೆ ಇಲ್ಲ ಎಂದು ಇಲಾಖಾ ಮೂಲಗಳು ಹೇಳಿವೆ.
ನದಿಯಲ್ಲಿ ನೀರಿನ ಹರಿವು ಇಲ್ಲದ ಕಾರಣ, ಮಟ್ಟ ಕುಸಿತದಿಂದ ಜಕ್ರಿಬೆಟ್ಟು, ನಾವೂರು, ಶಂಭೂರು ಪ್ರದೇಶದಲ್ಲಿ ಸರಾಗವಾಗಿ ನದಿ ದಾಟಿ ಹೋಗುವುದಕ್ಕೆ ಆಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನದಿಯಲ್ಲಿ ನೀರ ಹರಿವು ಮತ್ತು ನೀರಿನ ದಾಸ್ತಾನು ಕಡಿಮೆ ಆಗುತ್ತಿದ್ದಂತೆ ನದಿಯಲ್ಲಿ ಸ್ನಾನ ಮಾಡುವುದು, ಬಟ್ಟೆ ಒಗೆಯುವುದು ಸಾಮಾನ್ಯವಾಗುತ್ತಿದೆ. ನದಿನೀರು ನಿಲ್ಲುವ ತಗ್ಗು ಪ್ರದೇಶದಲ್ಲಿ ಸ್ಫೋಟಕ ಸಿಡಿಸಿ ಮೀನು ಹಿಡಿಯುವ ಮಂದಿ ಜಲಚರಗಳ ಸಂತಾನ ನಾಶ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.