ಬೆಂಗಳೂರು: ಮಳೆ ವೇಳೆ ನಿಲ್ದಾಣಗಳಲ್ಲಿ ಸೋರುವ ನೀರು, ಮೆಟ್ರೋ ಸಂಚಾರಕ್ಕೂ ಅಡ್ಡಿ ಉಂಟುಮಾಡುತ್ತಿದ್ದು, ಈಚೆಗೆ ಭೇಟಿ ನೀಡಿದ್ದ ರೈಲು ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ತಂಡ ಕೂಡ ಇದೇ ದೋಷವನ್ನು ಸರಿಪಡಿಸುವಂತೆ ಒತ್ತಿಹೇಳಿರುವುದು ಇದೀಗ ಬಿಎಂಆರ್‌ಸಿಯ ನಿದ್ದೆಗೆಡಿಸಿದೆ.
ವಾರದ ಅಂತರದಲ್ಲಿ ಮೂರು ಬಾರಿ ತಾಂತ್ರಿಕ ದೋಷದಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಪೈಕಿ ಕಳೆದ ವಾರ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಮಳೆಯಿಂದ ನೀರು ಸೋರಿಕೆಯಾಗಿತ್ತು. ನೀರು ಕೇಬಲ್‌ನಲ್ಲಿ ಸೇರಿಕೊಂಡಿದ್ದರಿಂದ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು.
ಹೀಗೆ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ನೀರು ಜಿನುಗುತ್ತಿದ್ದು, ಇದೇ ದೋಷವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಎತ್ತಿತೋರಿಸಿದ್ದಾರೆ. ತಕ್ಷಣ ಸರಿಪಡಿಸುವಂತೆ ಸಲಹೆ ಕೂಡ ಮಾಡಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ ತಿಳಿಸಿದರು.
ನಮ್ಮ ಮೆಟ್ರೋ ಮೊದಲ ಹಂತದ ಉತ್ತರ-ದಕ್ಷಿಣ ಕಾರಿಡಾರ್ ಜೂ.17ರಂದು ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಜತೆ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು. ನೀರು ಜಿನುಗುವಿಕೆ ಮಾತ್ರವಲ್ಲ, ಅಂಗವಿಕಲರಿಗೆ ನಿರ್ಮಿಸಿದ ರ್‍ಯಾಂಪ್ ಮತ್ತಷ್ಟು ದೊಡ್ಡದಾಗಬೇಕು. ಪ್ರಯಾಣಿಕರು ಓಡಾಡುವ ದಾರಿಯಲ್ಲಿ ಅಡತಡೆ ಇರಬಾರದು ಎನ್ನುವುರೂ ಸೇರಿದಂತೆ ಹಲವು ಸಲಹೆ-ಸೂಚನೆಗಳನ್ನು ನೀಡಿದೆ.
ಒಂದೆರಡು ದಿನಗಳಲ್ಲಿ ಅವುಗಳನ್ನು ಸರಿಪಡಿಸಲಾಗುವುದು. ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಮೆಟ್ರೋ ರೈಲು ಓಡಿಸಲು ಸಿಆರ್‌ಎಸ್ ಅನುಮತಿ ನೀಡಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಎಂಆರ್‌ಸಿ ನಿರ್ದೇಶಕರಾದ ದೋಖೆ, ವಿಜಯ್ ಧೀರ್, ಅಧಿಕಾರಿಗಳು ಉಪಸ್ಥಿತರಿದ್ದರು.