ಔರಾದ: ಪಟ್ಟಣದ 11ನೇ ವಾರ್ಡ್ ಜನತಾ ಬಡಾವಣೆಯ ನಾಗರಿಕರು ಒಂದೆಡೆ ಕುಡಿಯುವ ನೀರು ಪೂರೈಸುವಂತೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಹೋರಾಟ ಮಾಡುತ್ತಿದ್ದಾರೆ. ಅದೇ ಬಡಾವಣೆಯ ಇನ್ನೊಂದೆಡೆ ಕೊಳವೆ ಬಾವಿಯ ನೀರು ಪೋಲಾಗುತ್ತಿದ್ದು, ಟ್ಯಾಂಕ್ ನಿರ್ಮಿಸಿ ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಡಾವಣೆಯಲ್ಲಿ ಟ್ಯಾಂಕ್ ನಿರ್ಮಿಸಿ ಕೊಳವೆ ಬಾವಿಯಿಂದ ನೀರು ಸಂಗ್ರಹಿಸಿದರೆ, ವಿದ್ಯುತ್ ಇಲ್ಲದಿದ್ದರೂ ನೀರು ಸಿಗುತ್ತದೆ ಎಂದು ಪಪಂಗೆ ಮನವಿ ಸಲ್ಲಿಸಿದ್ದಾರೆ. ಆದರೆ ಬಡಾವಣೆಯ ಕೊಳವೆ ಬಾವಿಯಿಂದ ನೂರಾರು ಲೀಟರ್ ನೀರು ನಿತ್ಯ ರಸ್ತೆಯಲ್ಲಿ ಹರಿದು ಪೋಲಾಗುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಗಮನ ಹರಿಸುತ್ತಿಲ್ಲ.
ಜನತಾ ಬಡಾವಣೆಯ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಕಳೆದ ವರ್ಷ ಪಪಂನಿಂದ ಕೊಳವೆ ಬಾವಿ ಕೊರೆಸಲಾಗಿದೆ. ಈ ಕೊಳವೆಬಾವಿಯಲ್ಲಿ ನಿತ್ಯ 2 ಇಂಚು ನೀರು ಲಾಭ್ಯವಿದೆ. ಬಡಾವಣೆಯ ನಿವಾಸಿಗಳಿಗೆ ಒಂದು ಬಿಂದಿಗೆ ನೀರು ಬೇಕಾದರೂ ವಿದ್ಯುತ್ ಮೋಟಾರ್ ಆರಂಭಿಸಬೇಕು. ಇಲ್ಲದಿದ್ದರೆ ವಿದ್ಯುತ್ ಬರುವ ತನಕ ನೀರಿಗಾಗಿ ಕಾಯಬೇಕು.
ಮೋಟಾರ್ ಆರಂಭಿಸಿದಾಗ ನೀರು ಹೆಚ್ಚಾಗಿ ರಸ್ತೆಯ ಪಾಲಾಗುತ್ತಿದೆ ಎಂದು ಬಡಾವಣೆಯ ನಿವಾಸಿಗಳು ಹೇಳುತ್ತಾರೆ.
ಜನತಾ ಬಡಾವಣೆಯ ನಿವಾಸಿಗಳು ತಮ್ಮ ಬಡಾವಣೆಯಲ್ಲಿ ನಿತ್ಯ ಮನೆ ಮನೆಗೆ ನೀರು ಬರುತ್ತಿಲ್ಲ ಎಂದು ಪಪಂ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಗುರವಾರವಷ್ಟೇ ಪ್ರತಿಭಟನೆ ನಡೆಸಿದ್ದಾರೆ. ಅದೇ ವಾರ್ಡ್‌ನಲ್ಲಿರುವ ಕೊಳವೆ ಬಾವಿಯ ನೀರು ನಿತ್ಯ ಪೋಲಾಗುತ್ತಿದ್ದರೋ ಒಬ್ಬ ಅಧಿಕಾರಿಗಳೂ ಇದನ್ನು ತಡೆಯಲು ಮುಂದಾಗದಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ನೀರು ಪೋಲಾಗುತ್ತಿರುವ ಕುರಿತು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆವಾಗುತ್ತಿಲ್ಲ ಎಂದು ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಪಪಂ ಅಧಿಕಾರಿಗಳು ಹಾಗೂ ಬಡಾವಣೆಯ ಸದಸ್ಯರು ಸೇರಿ ಬಡಾವಣೆಯಲ್ಲಿ ನೀರು ಪೋಲಾಗುತ್ತಿರುವುದನ್ನು ತಡೆದು ಬಡಾವಣೆಯ ಇತರ ಜನರಿಗೂ ಇಲ್ಲಿಂದಲೇ ನೀರು ಸಿಗುವಂತೆ ನೋಡಿಕೊಳ್ಳಲು ಮುಂದಾಗಬೇಕು ಎನ್ನುವುದು ಈ ಬಡಾವಣೆ ನಿವಾಸಿಗಳ ಮಾತಾಗಿದೆ.
ಬಡಾವಣೆಯ ಕೊಳವೆ ಬಾವಿಯ ಪಕ್ಕದಲ್ಲಿಯೇ ನೀರಿನ ಟ್ಯಾಂಕ್ ನಿರ್ಮಿಸಿದರೆ ಬಡಾವಣೆಯ ನಿವಾಸಿಗಳು ಪದೆ ಪದೇ ವಿದ್ಯುತ್‌ಗಾಗಿ ಕಾಯುವ ಅನಿವಾರ್ಯತೆ ಬರುವುದಿಲ್ಲ. ಬಿಂದಿಗೆ ನೀರು ತೆಗೆದುಕೊಳ್ಳಲು ಮೋಟಾರ್ ಚಾಲು
ಮಾಡುವುದರಿಂದ ನೀರು ಪೋಲಾಗುತ್ತಿದೆ. ನೀರು ರಸ್ತೆಯ ಪಕ್ಕದಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.
ರವೀಂದ್ರ ಮುಕ್ತೇದಾರ