ನೀರಿನ ಬಳಕೆ ಕುರಿತು ಈಗಾಗಲೇ ಹಲವು ಚಿತ್ರಗಳು ಬಂದು ಹೋಗಿವೆ. ಆ ಸಾಲಿಗೆ ಈಗ “ಆಘ್ರ್ಯ’ ಚಿತ್ರ ಹೊಸ ಸೇರ್ಪಡೆ. “ಅಘ್ರ್ಯ’ ಸಂಸ್ಕೃತ ಪದ. ಅದರರ್ಥ ಒಳ್ಳೆಯ ಕಾರ್ಯಕ್ರಮ ಎಂಬುದು. ಇಂಥದ್ದೊಂದು ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ ಶ್ರೀನಿವಾಸ್ (ಆಡಿಟರ್ ಶ್ರೀನಿವಾಸ್). ನಿರ್ದೇಶನ ಮಾತ್ರವಲ್ಲ, ಕಥೆ ಮತ್ತು ನಿರ್ಮಾಣದ ಜವಾಬ್ದಾರಿಯೂ ಅವರದೇ. ಇತ್ತೀಚೆಗೆ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಶುಭಕೋರಿದರು.
ನಂತರ ಚಿತ್ರತಂಡದೊಂದಿಗೆ ಪತ್ರಕರ್ತರ ಮುಂದೆ ಕುಳಿತ ನಿರ್ದೇಶಕ ಆಡಿಟರ್ ಶ್ರೀನಿವಾಸ್ ಮಾತಿಗಿಳಿದರು. “ಇದು ಸಣ್ಣ ಬಜೆಟ್ ಚಿತ್ರ. ಮುಹೂರ್ತ ಮಾಡೋಕೆ ಕಾರಣ, ಮೊದಲ ಚಿತ್ರವಾದ್ದರಿಂದ ಆತ್ಮೀಯರನ್ನು ಆಹ್ವಾನಿಸಿ, ಖುಷಿ ಹಂಚಿಕೊಳ್ಳಬೇಕಿತ್ತು. ಹಾಗಾಗಿ ಎಲ್ಲರ ಸಮ್ಮುಖದಲ್ಲಿ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದ್ದೇನೆ. ಈ ಚಿತ್ರ ಶುರುವಿಗೆ ಕಾರಣ, ಶ್ರೀನಿವಾಸ್ ಕೌಶಿಕ್. ಒಮ್ಮೆ ಚರ್ಚೆ ಮಾಡುವಾಗ, ನಾನು ನೀರಿನ ಸದ್ಬಳಕೆ ಕುರಿತು ಮಾತನಾಡಿದ್ದೆ. ಅದನ್ನೇ ಯಾಕೆ ಚಿತ್ರ ಮಾಡಬಾರದು ಅಂತ ಧೈರ್ಯ ಕೊಟ್ಟರು. ನಿರ್ದೇಶನವನ್ನು ನೀವೇ ಮಾಡಿ ಅಂತ ಹೇಳಿದ ಮೇಲೆ, ಒಳ್ಳೆಯ ಉದ್ದೇಶ ಇರುವ ಚಿತ್ರ ಮಾಡುತ್ತಿದ್ದೇನೆ. ಕಥೆ ಬಗ್ಗೆ ಹೇಳುವುದಾದರೆ, ದೇವರು ನಮಗೆ ಎಲ್ಲ ನೀಡಿದ್ದಾನೆ. ಆದರೆ ಪ್ರಕೃತಿಯನ್ನು ನಾವು ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದೇವೆ. ಮನುಷ್ಯ ಎಲ್ಲವನ್ನೂ ತಯಾರು ಮಾಡಬಲ್ಲ. ಆದರೆ, ನೀರನ್ನು ತಯಾರಿಸಲು ಮಾತ್ರ ಸಾಧ್ಯವಿಲ್ಲ. ನೀರು ಯಥೇತ್ಛವಾಗಿ ದುರ್ಬಳಕೆಯಾಗುತ್ತಿದೆ. ನೀರನ್ನು ಹೇಗೆ ಸಂಪಾದನೆ ಮಾಡಹುದು ಎಂಬ ಕುರಿತಾದ ಚಿತ್ರಣ ಇಲ್ಲಿರಲಿದೆ. ಇನ್ನು, ಇದು ಸಾಮಾಜಿಕ ಕಳಕಳಿ ಇಟ್ಟುಕೊಂಡು ಮಾಡುತ್ತಿರುವ ಚಿತ್ರ. ಬೆಂಗಳೂರು ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗುವುದು. ಕ್ಲೈಮ್ಯಾಕ್ಸ್ ಚಿತ್ರದ ಹೈಲೈಟ್.ಅದಕ್ಕೊಂದು ದೊಡ್ಡ ಕೆರೆ ಬೇಕು. ಇಲ್ಲಿ ಬರೀ ನೀರಿನ ವಿಷಯ ಹೇಳುವುದಿಲ್ಲ. ಮನರಂಜನೆ ಜೊತೆಗೆ ಒಂದಷ್ಟು ಸಂದೇಶವೂ ಇರಲಿದೆ’ ಎನ್ನುತ್ತಾರೆ ನಿರ್ದೇಶಕ ಆಡಿಟರ್ ಶ್ರೀನಿವಾಸ್.
ನಾಯಕಿ ಅಶ್ವಿನಿಗೌಡ ಅವರಿಗೆ ಚಿತ್ರದ ಕಥೆ ಕೇಳಿದಾಗ ಮಾಡಬೇಕು ಎನಿಸಿದ್ದು ನಿಜವಂತೆ. “ಇದೊಂದು ಸಾಮಾಜಿಕ ಕಳಕಳಿ ಇಟ್ಟುಕೊಂಡು ಮಾಡುತ್ತಿರುವ ಚಿತ್ರ. ನಾನೂ ಸಹ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದರಿಂದ ನನ್ನ ನಿಜ ಬದುಕಿಗೂ ಈ ಪಾತ್ರ ಹತ್ತಿರವಾಗಿದೆ. ನಾನಿಲ್ಲಿ ಎನ್‌ಜಿಓದಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಹೊಸ ವರ್ಷಕ್ಕೆ ಹೊಸತನ ಇರುವ ಚಿತ್ರ ಸಿಕ್ಕ ಖುಷಿ ನನಗಿದೆ’ ಎಂಬುದು ಅಶ್ವಿನಿ ಮಾತು.
ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವ ಶ್ರೀನಿವಾಸ್ ಕೌಶಿಕ್, “ನೀರಿನ ಮಹತ್ವ ಕುರಿತಾದ ಕಥೆ ಇಲ್ಲಿದ್ದರೂ, ಇಲ್ಲಿ ಬರೀ ಸಮಸ್ಯೆ ಹೇಳುವುದಿಲ್ಲ. ಚಿತ್ರದುದ್ದಕ್ಕೂ ಮನರಂಜನೆ ಸಿಗಲಿದೆ. ಅದರೊಂದಿಗೆ ಒಳ್ಳೆಯ ಉದ್ದೇಶವೂ ಇರಲಿದೆ. ಒಂದು ಸಂಸಾರ ಸರಿಯಾಗಬೇಕು, ಪ್ರಕೃತಿಯನ್ನೂ ಉಳಿಸಬೇಕೆಂಬ ವಿಷಯ ಅಡಕವಾಗಿದೆ’ ಎಂದರು.
ಇನ್ನು, ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ರಾಜೇಶ್ ರಾವ್, ಸಿನಿಮಾದಲ್ಲಿ ಒಳ್ಳೆಯ ಅವಕಾಶ ಎದುರು ನೋಡುತ್ತಿದ್ದರು. ಅವರಿಗೆ ಸಿಕ್ಕ ಒಳ್ಳೆಯ ಅವಕಾಶ ಇದು. ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿ, ಏನಾದರೂ ಸಾಧಿಸಬೇಕೆಂದು ಹೊರಟಾಗ, ಕಣ್ಣ ಮುಂದೆ ಕೆರೆಯೊಂದನ್ನು ಅಭಿವೃದ್ಧಿಪಡಿಸುವ ಯೋಚನೆ ಬರುತ್ತೆ. ಅತ್ತ ಮನೆ, ಇತ್ತ ಸಾಮಾಜಿಕ ಕೆಲಸ ಮಾಡುವ ಮೂಲಕ ಎರಡನ್ನೂ ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ ಎಂಬ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡರು ಅವರು.
ಮೈಸೂರಿನ ಸ್ಪರ್ಶಾ ಶೆಣೈ ರಾಜೇಶ್‌ರಾವ್ ಪತ್ನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೆ.ಕಲ್ಯಾಣ್ ಎರಡು ಹಾಡುಗಳಿಗೆ ಸಂಗೀತ ನೀಡಿದರೆ, ನಾಗರಾಜ್ ಅದವಾನಿ ಛಾಯಾಗ್ರಹಣವಿದೆ.