ಕಟಪಾಡಿ:ನೀರು ಈ ನಿಸರ್ಗದ ಸಂಪತ್ತು ಆಗಿದೆ ಹೊರತು, ಮಾನವನ ಸ್ವತ್ತಲ್ಲ. ನೀರಿಲ್ಲದೆ ಆರೋಗ್ಯವಿಲ್ಲ. ಜೀವ ವ್ಯವಸ್ಥೆ ನಿಂತಿರುವುದೇ ನೀರಿನ ಆಧಾರದ ಮೇಲೆ. ನೀರು ಮಾನವನ ಪಾಲಿನ ಜೀವ ಜಲ. ನಿಸರ್ಗ ನೀಡಿರುವ ನೀರನ್ನು ನಾವು ಸದುಪಯೋಗ ಮಾಡಬೇಕೇ ಹೊರತು, ದುರುಪಯೋಗ ಮಾಡುವುದಕ್ಕಾಗಿ ಅಲ್ಲ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿಎಂ ಹೇಳಿದರು.
ಅವರು ಜೇಸಿಐ ಉದ್ಯಾವರ ಕುತ್ಪಾಡಿ ಇವರ ನೇತೃತ್ವದಲ್ಲಿ ನವಚೇತನ ಯುವಕ ಮಂಡಲ, ನವಚೇತನ ಯುವತಿ ಮಂಡಲ , ಕೆಥೋಲಿಕ್ ಸಭಾ ಇವರ ಸಹಕಾರದೊಂದಿಗೆ ಉದ್ಯಾವರದಲ್ಲಿ “ಮಳೆ ನೀರಿನೊಂದಿಗೆ ಅನುಸಂಧಾನ’ ಅಂತರ್ಜಲ ಗುಣಮಟ್ಟ ಹಾಗೂ ಜಲ ಸಂರಕ್ಷಣೆ ಮತ್ತು ಪರಿಹಾರ ಕುರಿತಾದ ದೃಶ್ಯ-ಶ್ರಾವ್ಯ ಪ್ರದರ್ಶನದ ಮೂಲಕ ವಿಶೇಷ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ನೀರು ಕುಡಿಯುವುದರೊಂದಿಗೆ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದ ಜೇಸಿಐ ಇದರ ಪೂರ್ವ ವಲಯಾಧಿಕಾರಿ ಪ್ರಶಾಂತ್ ಜತ್ತನ್ನ ಇಂತಹ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಮಾಡುವುದರಿಂದ ಜನತೆಯಲ್ಲಿ ಜಾಗೃತಿ ಉಂಟು ಮಾಡಿಸಬಹುದು ಎಂದರು.
ಜೇಸಿಐ ಉದ್ಯಾವರ ಕುತ್ಪಾಡಿಯ ಅಧ್ಯಕ್ಷ ಸ್ಟೀವನ್ ಕುಲಾಸೊ ಅಧ್ಯಕತೆ ವಹಿಸಿದ್ದರು.ಗಿಡ ನೆಡುವ ನಾಟಕ ಬೇಡ, ಸಾಕಿ ಬೆಳೆಸಿ ಮಳೆಯನ್ನು ಆಹ್ವಾನಿಸಿ ನೀರನ್ನು ಇತಿಮಿತಿಯಾಗಿ ಬಳಸಿ, ದುರುಪಯೋಗ ನಿಲ್ಲಿಸಿ ಎಂದು ರೆಬೆಲ್ಲೊ ತಿಳಿಸಿದರು.
ವೇದಿಕೆಯಲ್ಲಿ ಕೆಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ರೊನಾಲ್ಡ್ ಡಿ ಅಲ್ಮೇಡ, ನವಚೇತನ ಯುವತಿ ಮಂಡಲದ ಅಧ್ಯಕ್ಷೆ ಶಾಲಿನಿ ಸುರೇಶ್, ಸಂಸ್ಥೆಯ ಕಾರ್ಯದರ್ಶಿ ರಾಘವೇಂದ್ರ ಮತ್ತು ಕಾರ್ಯಕ್ರಮದ ನಿರ್ದೇಶಕ ಸುಪ್ರೀತ್ ಕುಮಾರ್ ಉಪಸ್ಥಿತರಿದ್ದರು.ಪರಿಸರದ ಮಂದಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.
ಅಂತರ್ಜಲ ಮಟ್ಟ ಇಳಿಕೆ
ಆಧುನಿಕತೆಯ ಸೋಗಿನಲ್ಲಿ ಮುಂದೆ ಸಾಗುವಾಗ ಜಲ ಸಂರಕ್ಷಣೆ ನಮ್ಮ ಜವಾಬ್ದಾರಿ. ಮಳೆ ನೀರು ಹರಿದು ಹಳ್ಳ ,ನದಿ ಸಮುದ್ರ ಸೇರುವಮೊದಲು ಅಲ್ಲಲ್ಲಿ ಇಂಗಿ ಭೂಗರ್ಭಕ್ಕೆ ಸೇರುತ್ತದೆ . ಈಗಾಗಲೇ ತಳ ಮಟ್ಟಕ್ಕೆ ಇಳಿದಿರುವ ಅಂತರ್ಜಲ ಮಟ್ಟವನ್ನು ಏರಿಸುವ ಅನಿವಾರ್ಯ ಇದೆ. ಅರಣ್ಯ ನಾಶಕ್ಕೆ ಕೈ ಹಾಕಿದರೆ ಮಳೆ ಮುಂದೆ ಪ್ರತಿಭಟನೆ ಮಾಡೀತು ಎಂದು ಸಂಪನ್ಮೂಲ ವ್ಯಕ್ತಿ ಜೋಸೆಫ್ ಹೇಳಿದರು.