Advertisement

ನೀರು ಹರಿಸಲು ಮೊದಲ ಆದ್ಯತೆ

11:35 AM Apr 13, 2019 | Team Udayavani |

ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಸದಾ ಬರಗಾಲ, ಕುಡಿಯುವ ನೀರಿನ ತೊಂದರೆಯಿಂದ ಬಳಲುವ ಕಲ್ಪತರು ನಾಡಿನ ಈ ಚುನಾವಣೆಯಲ್ಲಿ ಬರಿ ಕುಡಿಯುವ ನೀರಿನದ್ದೇ ಚರ್ಚೆ. ದೇವೇಗೌಡರ ಜೊತೆ ನಡೆದ ಸಂದರ್ಶನ ಇಲ್ಲಿದೆ .

Advertisement

* ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಿಮ್ಮ ಗೆಲುವಿಗೆ ಉತ್ತಮ ವಾತಾವರಣ ಇದೆಯಾ?
ನಾನು ಈ ಬಾರಿ ತುಮಕೂರಿನಿಂದ ಸ್ಪರ್ಧಿಸಬೇಕು ಎನ್ನುವ ಉದ್ದೇಶ ಇರಲಿಲ್ಲ. ಮೈತ್ರಿ ಒಪ್ಪಂದದಂತೆ ಲೋಕಸಭಾ ಕ್ಷೇತ್ರಗಳಲ್ಲಿನಮಗೆ ಐದು ಸೀಟು ಬಿಟ್ಟು ಕೊಡುವುದರಿಂದ ಹಿಡಿದು ಕೊನೆಗೆ ಎಂಟು ಸ್ಥಾನ ಕೊಡಲು ತೀರ್ಮಾನವಾಗಿತ್ತು. ನಮಗೆ ತುಮಕೂರು ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ. ಮತದಾರರು ನನಗೆ ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ.

* ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲುನೀವು ಮತ್ತು ನಿಮ್ಮ ಕುಟುಂಬ ತೊಂದರೆ ನೀಡುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆಯಲ್ಲ?
ನಾನು ರಾಜ್ಯದ ಜನರ ಹಿತ ಕಾಪಾಡುವ ದೃಷ್ಟಿ ಹೊಂದಿದ್ದೇನೆ. ತುಮಕೂರು ಜಿಲ್ಲೆ ಅಷ್ಟೇ ಅಲ್ಲ.ರಾಜ್ಯದ ಪ್ರತೀ ಹಳ್ಳಿಗೆ ಕುಡಿಯುವ ನೀರು ಒದಗಿಸಬೇಕು. ಕುಡಿಯುವ ನೀರಿಗೆ ಸಮಸ್ಯೆ ತೀವ್ರವಾಗುತ್ತಿದೆ. ಆ ಸಮಸ್ಯೆ ನೀಗಿಸಬೇಕಾದರೆ
ಪ್ರತಿ ಹಳ್ಳಿಗಳಿಗೆ ನೀರು ಕೊಡಬೇಕು. ಜಿಲ್ಲೆಯ ಹತ್ತು ತಾಲೂಕಿನ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವುದೇ ನನ್ನ ಮೊದಲ ಆದ್ಯತೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ನಾನ  ಫ‌ಲಿತಾಂಶದವರೆಗೆ ಕಾಯುವುದಿಲ್ಲ. ಚುನಾವಣೆಯಾದ ಬಳಿಕ  ಏ.23ರ ನಂತರ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆ ಕರೆಯಲು ಸೂಚಿಸುತ್ತೇನೆ. ಅಧಿಕಾರಿಗಳೊಂದಿಗೆ ಮಾತನಾಡಿ, ಜಿಲ್ಲೆಯ ಹತ್ತು ತಾಲೂಕಿನ ಎಲ್ಲ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ಶಿರಾ, ಪಾವಗಡ ಸೇರಿದಂತೆ ಹತ್ತು ತಾಲೂಕುಗಳಿಗೆ ನೀರು ಕೊಡುತ್ತೇವೆ.

* ಕಲ್ಪತರು ನಾಡಿನಲ್ಲಿ ತೆಂಗು ಬೆಳೆ ನಂಬಿರುವ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ನಿಮ್ಮ ಮುಂದಿನ ಯೋಜನೆ ಏನು?
ಜಿಲ್ಲೆಯಲ್ಲಿ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಮಳೆ ಇಲ್ಲದೆ ಬೆಳೆ ಒಣಗುತ್ತಿದೆ. ಬೆಂಬಲ ಬೆಲೆ ಇಲ್ಲ. ಕಳೆದ ಮೂರು ವರ್ಷಗಳ ಹಿಂದೆಯೇ ಇಲ್ಲಿಯ ಪರಿಸ್ಥಿತಿ ಅರಿತು ತೆಂಗಿನ ಬೆಳೆಯ ಫೋಟೋಗಳನ್ನು ತೆಗಿಸಿ, ಆಲ್ಬಮ್‌ ಮಾಡಿ, ಸಂಸದರ ನಿಯೋಗದೊಂದಿಗೆ ತೆರಳಿ, ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾಗ, ಪ್ರಧಾನಿಯಾದವರು ರೈತರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ತೆಂಗು ಬೆಳೆಗಾರರ ಕಷ್ಟ ಅರಿತು, ಪ್ರತಿ ಮರಕ್ಕೆ 500 ರೂ. ರಂತೆ ಎಕರೆಗೆ 20,000 ರೂ. ಪರಿಹಾರ ಘೋಷಿಸಿ, ಇದಕ್ಕಾಗಿ 250 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಆದರೆ, ತೆಂಗು ಬೆಳೆಗಾರರ
ನೋವು ನನಗೆ ಗೊತ್ತಿದೆ. ನನ್ನ ರಾಜಕೀಯ ಜೀವನದಲ್ಲಿ ರೈತರ ಬದುಕಿನ ಬಗ್ಗೆ ಬಹಳ ತಿಳಿದಿದ್ದೇನೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಆ ಕೆಲಸ ಮಾಡುತ್ತೇನೆ.

* ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನೀರಾವರಿ ಯೋಜನೆಗಳು ಆಗಬೇಕು. ಅಪ್ಪರ್‌ ಭದ್ರ ಯೋಜನೆ ಯಲ್ಲಿ 36 ಟಿಎಂಸಿ ನೀರು ದಾವಣಗೆರೆ, ಚಿತ್ರದುರ್ಗ ಭಾಗಕ್ಕೆ ಅನುಕೂಲವಾಗಬೇಕು. ಎತ್ತಿನಹೊಳೆ ಯೋಜನೆ ಕಾರ್ಯಗತ ವಾದರೆ ಈ ಭಾಗದ ಕೆಲವು ಕೆರೆಗಳಿಗೆ ನೀರು ಹರಯುತ್ತದೆ. ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಿಗೂ ನೀರು ಕೊಡಬಹುದು ನೀರಾವರಿ ಯೋಜನೆ ಆಗಬೇಕು ಅದಕ್ಕಾಗಿ ನಾನು ಹಿಂದಿ
ನಿಂದಲೂ ಹೋರಾಟ ಮಾಡಿದ್ದೇನೆ.

Advertisement

* ಮೈತ್ರಿಯಲ್ಲಿ ಯಾವುದೇ ಒಳಜಗಳ ಇಲ್ಲದೆ, ಎಲ್ಲರೂ ಒಟ್ಟಾಗಿ ಕೆಸ ಮಾಡುತ್ತಿದ್ದಾರೆಯೇ?
ಮೈತ್ರಿಯಲ್ಲಿ ಯಾವುದೇ ಭಿನ್ನಮತ ಈಗ  ಕಂಡು ಬರುತ್ತಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮೆಲ್ಲರಲ್ಲಿ ಗುರಿ ಒಂದೇ, ಬಿಜೆಪಿ  ಶಕ್ತಿಯನ್ನು ಕುಂದಿಸುವುದು. ಅದಕ್ಕಾಗಿ ಎರಡೂ ಪಕ್ಷಗಳೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಹೆಚ್ಚು ಸ್ಥಾನಗಳು ಮೈತ್ರಿ ಪಕ್ಷಕ್ಕೆ ಬರುತ್ತದೆ.

* ಮಹಾಘಟ್‌ ಬಂಧನ್‌ ಬಗ್ಗೆ ಪ್ರಧಾನಿ ಅವರು ಆಡುತ್ತಿರುವ ಲೇವಡಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮಹಾಘಟ್‌ ಬಂಧನ್‌ ಶಕ್ತಿ ಏನು ಎನ್ನುವುದು ಚುನಾವಣೆ ನಂತರ ಮೋದಿಗೆ ಅರಿವಾಗುತ್ತದೆ. 12 ರಾಜ್ಯಗಳ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗಿವೆ.ಮುಂದೆ ಏನೆಲ್ಲಾ ಬದಲಾವಣೆಯಾಗುತ್ತದೆ ಎಂಬುದು ತಿಳಿಯುತ್ತದೆ. ಮೋದಿಯವರ ಮೇಲೆ ಆರೋಪಗಳು ಕೇಳಿ ಬಂದರೆ ಸಂಸತ್‌ನಿಂದ ಹೊರ ನಡೆಯುತ್ತಾರೆ. ಅವರಿಗೆ ಉತ್ತರ ನೀಡುವ ಶಕ್ತಿ ಇಲ್ಲದಂತಾಗಿದೆ.

* ಮೋದಿ ಮತ್ತೆ ಪ್ರಧಾನಿ ಆಗುತ್ತಾರೆಯೇ?
ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ. ನಾನು ಬಹಳ ವರ್ಷಗಳಿಂದ ರಾಜಕಾರಣ ಮಾಡಿದ್ದೇನೆ. ಯಾವ ಯಾವ ರಾಜ್ಯದಲ್ಲಿ ಯಾವ ಪರಿಸ್ಥಿತಿ ಇದೆ ಎಂಬುವುದನ್ನು ತಿಳಿದಿದ್ದೇನೆ. ತಳ ಬುಡವಿಲ್ಲದ ಆರೋಪ ಗಳನ್ನೂ ರಾಜ್ಯಕ್ಕೆ ಬಂದು ಮೋದಿ ಮಾಡುತ್ತಿದ್ದಾರೆ. ದೇಶದ ಪರಿಸ್ಥಿತಿ ಬದಲಾಗುತ್ತಿದೆ. ಮೋದಿ ಮತ್ತೆ ಪ್ರಧಾನಿ ಆಗಲು ಸಾಧ್ಯವಿಲ್ಲ.

ಗೆಲ್ಲಿಸಲಿ, ಸೋಲಿಸಲಿ ನನಗೆ ಜವಾಬ್ದಾರಿ ಇದೆ
* ರಾಜಕಾರಣದಲ್ಲಿ ನನಗೆ 60 ವರ್ಷ ಅನುಭವ ಇದೆ. ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಪ್ರಧಾನಿ ಆಗುವುದು ಅಷ್ಟು ಸುಲಭವಿಲ್ಲ. ದೇಶದ ಪರಿಸ್ಥಿತಿ ನೋಡಿ ಮಹಾಘಟ್‌ ಬಂಧನ್‌ ರಚಿಸಿಕೊಳ್ಳಲಾಗಿದೆ. ಚುನಾವಣೆ ಫ‌ಲಿತಾಂಶದ ನಂತರ ಮಹತ್ವದ ಬದಲಾವಣೆ ಕೇಂದ್ರದಲ್ಲಿ ಆಗುತ್ತದೆ. ನಾನು ತುಮಕೂರು ಕ್ಷೇತ್ರದಲ್ಲಿ ಮತದಾರರು ನನ್ನನ್ನು ಗೆಲ್ಲಿಸಲಿ, ಸೋಲಿಸಲಿ ನನ್ನ ಜವಾಬ್ದಾರಿ ಇದೆ. ಪಾವಗಡ ಸೇರಿದಂತೆ ತುಮಕೂರು ಜಿಲ್ಲೆಯ 10 ತಾಲೂಕುಗಳ ಹಳ್ಳಿಗೆ ಕುಡಿಯುವ ನೀರು ಒದಗಿಸುವುದು ನನ್ನ ಮೊದಲ ಆದ್ಯನೀರು ಹರಿಸಲು ಮೊದಲ ಆದ್ಯತೆ

* ತುಮಕೂರಿನಲ್ಲಿ ನಿಮ್ಮ ಬಗ್ಗೆ ಬಿಜೆಪಿಯವರು ಮಾಡುತ್ತಿರುವ ಆರೋಪಕ್ಕೆ ಏನಂತಿರಾ?
ನನ್ನ ಮೇಲೆ ಮಾಡುತ್ತಿರುವ ಆರೋಪಗಳಿಗೆ ನಾನು ಉತ್ತರಿಸುವುದಿಲ್ಲ. ಅದಕ್ಕೆ ಮತದಾರರು ಉತ್ತರ ನೀಡುತ್ತಾರೆ. ನಾನು ಅವರ ಮಟ್ಟಕ್ಕೆ ಹೋಗಿ ಮಾತನಾಡುವುದಿಲ್ಲ. ಜಿಲ್ಲೆಯ ಜನರು ನಮ್ಮ ಪಕ್ಷವನ್ನು ಬಹಳ ವರ್ಷಗಳಿಂದ ಬೆಂಬಲಿಸಿದ್ದಾರೆ. ಈಗಲೂ ಬೆಂಬಲಿಸುತ್ತಾರೆ. ಅರ್ಥವಿಲ್ಲದೇ ಮಾಡುವ ಆರೋಪಗಳಿಗೆ ನಾನು ಉತ್ತರ ನೀಡುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next