Advertisement

ನೀರು ಕೊಡುವವರಿಗೆ ನಮ್ಮ ಮತ

09:59 PM Apr 14, 2019 | Lakshmi GovindaRaju |

ದೇವನಹಳ್ಳಿ: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಬಯಲುಸೀಮೆಯ ಬರಪೀಡಿತ ಜಿಲ್ಲೆಗಳ ಜನರು ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾದ ಶುದ್ಧ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳಿಗಾಗಿ ಹೋರಾಟ ನಡೆಸಬೇಕಾದ ದುಸ್ಥಿತಿಯಲ್ಲಿದ್ದೇವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ “ನೀರು ಕೊಡುವವರಿಗೆ ನಮ್ಮ ಮತ, ಮತ ನಮ್ಮ ಹಕ್ಕು, ನೀರು ನಮ್ಮ ಭವಿಷ್ಯ ಮತ್ತು ನೀರಾವರಿ’ ಕುರಿತ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಜನ ಜಾಗೃತಿಗಾಗಿ ನೀರಾವರಿ ಪ್ರಣಾಳಿಕೆ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮುಂದೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಜನಸಾಮಾನ್ಯರ ಹಕ್ಕೊತ್ತಾಯದ ನೀರಾವರಿ ಪ್ರಣಾಳಿಕೆಯನ್ನು ಮಂಡಿಸಿದೆ. ವಿಜ್ಞಾನಿಗಳು, ನೀರಾವರಿ ಪರಿಣಿತರು, ನಿವೃತ್ತ ಅಧಿಕಾರಿಗಳು ಒಳಗೊಂಡ ಸಮಿತಿಯಡಿ ನೀರಾವರಿ ಪ್ರಣಾಳಿಕೆಯನ್ನು ತಯಾರು ಮಾಡಿದ್ದೇವೆ. ಬಯಲು ಸೀಮೆ ಜಿಲ್ಲೆಯ ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ನೀರಾವರಿ ಪ್ರಣಾಳಿಕೆಯನ್ನು ಹೊರತಂದಿದ್ದೇವೆ ಎಂದರು.

ನಿಖರ ಯೋಜನೆಗಳು ಜಾರಿಯಾಗಿಲ್ಲ: ಮತ ಕೇಳಲು ಬರುವ ಪ್ರತಿ ಅಭ್ಯರ್ಥಿಗಳು ನೀರಾವರಿ ಪ್ರಣಾಳಿಕೆ ಜಾರಿಗೆ ಬದ್ಧರಾಗಿರಬೇಕೆಂದು ಆಗ್ರಹಿಸುವುದು ಮತದಾರರು ಜವಾಬ್ದಾರಿಯಾಗಿದೆ. ರೈತರು ಈಗಾಗಲೇ ಸಾವಿರಾರು ಕೋಟಿ ರೂ. ಸನ್ನು ಕೊಳವೆ ಬಾವಿಗಳಿಗೆ ಸುರಿದರೂ ನೀರಿನ ಅಭದ್ರತೆಯಿಂದ ಆತ್ಮಹತ್ಯೆ ಹಾದಿ ತುಳಿಯುವಂತಾಗಿದೆ. ಜನ, ಜಾನುವಾರುಗಳು ಕುಡಿಯಲು ಯೋಗ್ಯವಲ್ಲದ ವಿಷಯುಕ್ತ ಅಂತರ್ಜಲವನ್ನೇ ಕುಡಿದು ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೂ, ಇದುವರೆಗೂ ಸರ್ಕಾರಗಳಿಂದ ಯಾವುದೇ ನಿಖರ ಯೋಜನೆಗಳು ಜಾರಿಯಾಗಿಲ್ಲ ಎಂದು ಆರೋಪಿಸಿದರು.

ನೀರಾವರಿ ಹಕ್ಕು ಪಡೆಯಿರಿ: ಕಳೆದ 30 ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಮತದಾರರು ಈಗಲಾದರೂ ಜಾತಿ, ಮತ, ಪಕ್ಷಭೇದಗಳನ್ನು ಮರೆತು ನೀರಾವರಿ ಹಕ್ಕು ಸಾಧಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

Advertisement

ಕೊಳಚೆ ನೀರಿಗೆ 2,100ಕೋಟಿ ರೂ.: ಕೆ.ಸಿ.ವ್ಯಾಲಿ ಮತ್ತು ಎನ್‌.ಎಚ್‌.ವ್ಯಾಲಿ ಯೋಜನೆಯಲ್ಲಿ ಅಪಾಯಕಾರಿ ಕೈಗಾರಿಕಾ ತ್ಯಾಜ್ಯ ತಂತಾನೇ ನೈಸರ್ಗಿಕವಾಗಿ ಶುದ್ಧೀಕರಣವಾಗುವುದು ಅಸಾಧ್ಯ ಎಂಬುದು ವಿಶ್ವದೆಲ್ಲೆಡೆ ಸಾಬೀತಾಗಿದೆ. ರಾಜಕಾರಣಿಗಳು ಮತ್ತು ಸರ್ಕಾರದ ಮಂಡು ವಾದದಿಂದ ಮೂರು ಹಂತದ ಶುದ್ಧೀಕರಣದ ನಂತರವೇ ಕೋಲಾರ,

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಬೇಕು. ಎನ್‌.ಎಚ್‌.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಯೋಜನೆಗಳಿಗೆ ಸಾರ್ವಜನಿಕರ ತೆರಿಗೆಯ 2,100ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಇನ್ನೂ 500ಕೋಟಿ ರೂ.ವೆಚ್ಚ ಮಾಡಿ ಮೂರನೇ ಹಂತದ ಶುದ್ಧೀಕರಣ ಮಾಡದಿರುವುದರ ಹಿಂದಿನ ಮರ್ಮವೇನು ಹಾಗೂ ಅದಕ್ಕೆ ಇರುವ ಅಡ್ಡಿಯಾದರೂ ಏನು ಎಂದು ಪ್ರಶ್ನಿಸಿದರು.

ಮಾರ್ಗಸೂಚಿ ಉಲ್ಲಂಘನೆ: ಮೂರು ಹಂತದ ಶುದ್ಧೀಕರಣ ವಿಚಾರದಲ್ಲಿ ಸರ್ಕಾರ ಮಾರ್ಗಸೂಚಿಯನ್ನೇ ಉಲ್ಲಂ ಸಿದೆ. ಈ ತಪ್ಪನ್ನು ಮುಚ್ಚಿಕೊಂಡು ಜನಪ್ರತಿನಿಧಿಗಳು ಈ ವಿಚಾರದಲ್ಲಿ ರಾಜಕಾರಣ ಮಾಡಿ, ಜನರ ದಿಕ್ಕು ತಪ್ಪಿಸುತ್ತಿದೆ. ಎರಡು ಹಂತದಲ್ಲಿ ಶುದ್ಧಿಕರಣ ಮಾಡಿದರೆ ಕೇವಲ ಗೃಹೋಪಯೋಗಿ ತ್ಯಾಜ್ಯವನ್ನಷ್ಟೇ ಶುದ್ಧಿಕರಿಸಲು ಸಾಧ್ಯವಿದೆ.

ಕೈಗಾರಿಕೆ ಅಥವಾ ವಾಣಿಜ್ಯ ಶುದ್ಧೀಕರಿಸಲು ಸಾಧ್ಯವಿಲ್ಲ ಎಂಬುದನ್ನು ವಿಜ್ಞಾನ ಸಂಶೋಧನೆ ದೃಢಪಡಿಸಿದೆ. ಎರಡು ಹಂತದ ಶುದ್ಧೀಕರಣದಿಂದ ಬೆಂಗಳೂರು ತ್ಯಾಜ್ಯ ನೀರನ್ನು ತಮಿಳುನಾಡಿನ ತೆನ್‌ಪೆನ್ನಾರ್‌ ನದಿಗೆ ಬಿಡಲಾಗುತ್ತಿದ್ದು, ಇದರಿಂದ ಅಲ್ಲಿನ ಪರಿಸರದ ಮೇಲೆ ದುಷ್ಪರಿಣಾಮವಾಗಿ, ಕೆರೆಗಳ ನೀರು ಕಲುಷಿತಗೊಂಡಿದೆ. ಈ ಬಗ್ಗೆ ತಮಿಳುನಾಡು ಸರ್ಕಾರ ಈಗಾಗಲೇ ಮೊಕದಮ್ಮೆ ದಾಖಲಿಸಿದೆ ಎಂದರು.

ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್‌, ನಾರಾಯಣಸ್ವಾಮಿ, ದೇವರಾಜ್‌, ಜಿಲ್ಲಾ ಯುವ ಶಕ್ತಿ ಅಧ್ಯಕ್ಷ ಮನೋಹರ್‌ ರೆಡ್ಡಿ, ಜಯರಾಮ್‌, ಸುಬ್ಬು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next