ಬಂಗಾರಪೇಟೆ: ತಾಲೂಕು ಸೇರಿ ಜಿಲ್ಲೆಯಲ್ಲಿ 15 ವರ್ಷಗಳಿಂದ ಬರಗಾಲ ಆವರಿಸಿದೆ. ನೀರನ್ನು ಮಿತವಾಗಿ ಬಳಸಬೇಕು. ಇಲ್ಲದಿದ್ದರೆ ಲೀಟರ್ ನೀರಿಗೆ 100 ರೂ. ಕೊಡಬೇಕಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಆದರ್ಶ ಶಾಲೆಯಲ್ಲಿ ಜಿಲ್ಲಾಡಳಿತ, ಪುರಸಭೆ ಹಾಗೂ ಪೋಕಸ್ ಸಂಸ್ಥೆ ಜಲಶಕ್ತಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರ ಬಿಡಿಸುವ ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ನೀರೇ ಸಿಗ್ತಿಲ್ಲ: ಬರಗಾಲ ಇರುವುದರಿಂದ ಕುಡಿಯುವ ನೀರನ್ನು ವ್ಯರ್ಥ ಮಾಡದೇ ಅಗತ್ಯಕ್ಕೆ ಅನುಗುಣವಾಗಿ ಬಳಸಬೇಕು. ಸತತ 15 ವರ್ಷಗಳಿಂದ ಮಳೆ ಇಲ್ಲದೆ ಇಲ್ಲದೆ ಕೆರೆ, ಕುಂಟೆಗಳು ಒಣಗಿವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಕೊಳವೆಬಾವಿ ಕೊರೆಯಿಸಿ, ಅಂತರ್ಜಲ ಮಟ್ಟದಿಂದ ನೀರನ್ನು ತೆಗೆದು ಬಳಸುತ್ತಿದ್ದು, ಇದೂ ಖಾಲಿಯಾಗಿ 2 ಸಾವಿರ ಅಡಿ ಕೊಳವೆಬಾವಿ ಕೊರೆಯಿಸಿದರೂ ನೀರೇ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನೀರು ಇಂಗಿಸಿ: ಪ್ರತಿ ವರ್ಷ ಬರುವ ಅಲ್ಪಸ್ವಲ್ಪ ಮಳೆ ನೀರನ್ನು ಮಳೆಕೊಯ್ಲು ಯೋಜನೆಯ ಮೂಲಕ ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಬೇಕೆಂದು ಹೇಳಿದರು. ರಾಜ್ಯ ಸರ್ಕಾರವು ಬರಗಾಲ ಪೀಡಿತ ಪ್ರದೇಶಗಳಲ್ಲಿ ಜಲಶಕ್ತಿ ಉತ್ತೇಜಿಸಲು ವಿವಿಧ ಇಲಾಖೆಗಳ ಮೂಲಕ ಜಲಶಕ್ತಿ ಅಭಿಯಾನವನ್ನು ನಡೆಸಿ ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ಬರಗಾಲದ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು. ಗುಂಪು ಚರ್ಚೆಗಳು, ಜಾಥಾ ಕಾರ್ಯಕ್ರಮಗಳು, ವಾರ್ಡ್ ಸಭೆಗಳು, ಚರ್ಚಾ ಸ್ಪರ್ಧೆಗಳು, ಪ್ರಬಂಧ ಸ್ಪರ್ಧೆಗಳು ಸೇರಿದಂತೆ ಇತರೆ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಅರಿವು ಮೂಡಿಸಲಾಗು ತ್ತಿದೆ ಎಂದರು. ಪಟ್ಟಣದ ಆದರ್ಶ ಶಾಲೆಯಲ್ಲಿ ನಡೆದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪುರಸಭೆ ಸಮುದಾಯ ಸಂಘಟನೆ ಅಧಿಕಾರಿ ವೆಂಕಟೇಶ್, ಎ.ಹರೀಶ್, ಗೋವಿಂದರಾಜು, ಸೋಮಣ್ಣ, ಬಾಬು ಇದ್ದರು.