Advertisement

ಬಳ್ಪ ಬೋಗಾಯನ ಕೆರೆಯಲ್ಲಿ ತುಂಬಿದೆ ಹೂಳು

04:12 AM Apr 26, 2019 | Team Udayavani |

ಗುತ್ತಿಗಾರು: ಇತಿಹಾಸ ಪ್ರಸಿದ್ಧ ಬಳ್ಪದ ಬೋಗಾಯನ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಕೆರೆಯ ಹೂಳೆತ್ತಿ ಪುನಶ್ಚೇತನಗೊಳಿಸಲು ಇದು ಸಕಾಲವಾಗಿದೆ. ಸುಮಾರು 1.5 ಎಕ್ರೆ ವಿಸ್ತೀರ್ಣದ ಕೆರೆಯಲ್ಲಿ ಸಂಪೂರ್ಣ ಹೂಳು ತುಂಬಿಕೊಂಡ ಕಾರಣ ನೀರಿಲ್ಲದೆ ಕೆರೆ ಬರಿದಾಗಿದೆ. ಸಂಸದರ ಆದರ್ಶಗ್ರಾಮ ಯೋಜನೆಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಬಳ್ಪದಲ್ಲಿನ ಬೋಗಾಯನ ಕೆರೆ ಕದಂಬರ ಕಾಲದಲ್ಲಿ ಕಟ್ಟಿಸಲಾದ ಕೆರೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತಿದೆ. ಈ ಕೆರೆ ಹಿಂದೆ ಹಲವು ಪ್ರದೇಶಗಳಿಗೆ ನೀರುಣಿಸುತ್ತಿತ್ತು. ಕಾಲಾನಂತರದಲ್ಲಿ ಈ ಸರಿಯಾದ ನಿರ್ವಹಣೆಯಿಲ್ಲದೇ ಹೂಳು ತುಂಬಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ತುಂಬಿಕೊಂಡಿರುತ್ತದೆ.

Advertisement

ಪ್ಲಾಸ್ಟಿಕ್‌, ಕಸಕಡ್ಡಿ ತುಂಬಿವೆ
ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಕಂಡು ಬರುವ ಬೋಗಾಯನ ಕೆರೆಯಲ್ಲಿ ಪ್ಲಾಸ್ಟಿಕ್‌, ಬಿಯರ್‌ ಬಾಟಲ್‌ ಹಾಗೂ ಇನ್ನಿತರ ಕಸಕಡ್ಡಿಗಳು ತುಂಬಿವೆ. ರಸ್ತೆಯಲ್ಲಿ ಪ್ರಯಾಣಿಸುವ ಜನ ಕೆರೆಗೆ ಕಸಗಳನ್ನು ಎಸೆದು ಹೋಗುತ್ತಿರುವ ಕಾರಣ ಹೂಳು ಹೆಚ್ಚಾಗಿದೆ. ಇದರಿಂದ ಜಲಚರಗಳು ಮತ್ತು ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗುತ್ತಿದೆ.

ಪ್ರವಾಸಿ ತಾಣಕ್ಕೆ ಯೋಜನೆ!
ಬೋಗಾಯನ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸಬಹುದು. ಇದಕ್ಕಾಗಿ ಮಂಗಳೂರಿನ ತೋಟಗಾರಿಕಾ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯನ್ನು ಪರಿಶೀಲನೆ ನಡೆಸಿದ್ದು, ಕೆರೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೇ ಕೆರೆಯ ಪಕ್ಕದಲ್ಲೇ ಪುಷ್ಟವನವನ್ನೂ ನಿರ್ಮಾಣ ಮಾಡುವ ಯೋಜನೆ ತಯಾರಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಲಾಖೆ ಮುತುವರ್ಜಿ ಸಹಿಸಬೇಕು
ಕೆರೆ ಸಂಪೂರ್ಣವಾಗಿ ಬರಿದಾಗಿದ್ದು, ಕೆರೆಯನ್ನು ಅಭಿವೃದ್ಧಿಪಡಿಸಲು ಇದು ಸಕಾಲ. ನೀರಿಲ್ಲದ ಕಾರಣ ಕೆರೆಯ ಹೂಳೆತ್ತುವುದು ಹಾಗೂ ಇನ್ನಿತರ ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ಇಲಾಖೆಗಳು ಈಗಲೇ ಮುತುವರ್ಜಿ ವಹಿಸಿದಲ್ಲಿ ಉತ್ತಮ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಬೋಗರಾಯವರ್ಮನಿಂದ ನಿರ್ಮಾಣ
ಕದಂಬರ ತುಂಡರಸ ಬೋಗರಾಯವರ್ಮ ಕಡಬ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಿ ಎರಡು ಕೆರೆಗಳು ನಿರ್ಮಾಣಗೊಂಡಿದ್ದವು. ಇದರಲ್ಲಿ ಒಂದು ಕಡಬದಲ್ಲಿ ಇದ್ದರೆ ಮತ್ತೂಂದು ಕೆರೆ ಬಳ್ಪದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ಹೇಳುತ್ತದೆ. ಬೋಗರಾಯವರ್ಮ ನಿರ್ಮಿಸಿದ ಕಾರಣ ಈ ಕೆರೆ ಬೋಗಾಯನ ಕೆರೆ ಎಂದು ಪ್ರಸಿದ್ಧಿ ಪಡೆದಿದೆ.

Advertisement

ಯೋಜನೆ ತಯಾರು: ಮಾಹಿತಿ
ಕೆರೆ ಅಭಿವೃದ್ಧಿಗೆ ಇಲಾಖೆಗಳಿಂದ ಹಣ ಬಿಡುಗಡೆ ಮಾಡುವ ಯೋಜನೆ ತಯಾರಾಗಿರುವ ಮಾಹಿತಿ ಇದೆ. ಚುನಾವಣೆ ಘೋಷಣೆ ಹಾಗೂ ನೀತಿ ಸಂಹಿತೆ ಇರುವ ಕಾರಣ ಮುಂದಿನ ಕ್ರಮಗಳು ಸ್ಥಗಿತಗೊಂಡಿವೆ.
– ಶ್ಯಾಂಪ್ರಸಾದ್‌ ಎಂ.ಆರ್‌., ಪಿಡಿಒ ಗ್ರಾ.ಪಂ. ಬಳ್ಪ

Advertisement

Udayavani is now on Telegram. Click here to join our channel and stay updated with the latest news.

Next