Advertisement
ಬಹುತೇಕ ಇಲಾಖೆಗಳನ್ನು ಬಾಡಿಗೆ ಮನೆಗಳಲ್ಲಿ ನಡೆಸುವ ಸ್ಥಿತಿ ಇದೆ. ಜಿಲ್ಲಾಡಳಿತದ ಬಳಿ ಶಿಥಿಲಗೊಂಡ ಕಟ್ಟಡಗಳ ಸರಿಯಾದ ಅಂಕಿ ಸಂಖ್ಯೆಗಳು ಇಲ್ಲ ಎನ್ನುವುದು ಮತ್ತೊಂದು ವಿಪರ್ಯಾಸ.
Related Articles
Advertisement
ರಾಯಚೂರಿನಲ್ಲಿರುವ ಬಿಇಒ ಕಚೇರಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಛಾವಣಿ ಸಿಮೆಂಟ್ ಕಳಚಿ ಕಬ್ಬಿಣದ ರಾಡುಗಳು ಕಾಣುತ್ತಿದ್ದರೆ, ಮಳೆ ಬಂದಾಗ ಮೂಲೆಗಳೆಲ್ಲ ಸೋರುತ್ತಿವೆ. ಡಿಡಿಪಿಯು ಕಚೇರಿಯಂತೂ ಇಂದಿಗೂ ನಿಜಾಮರ ಕಾಲದ ಬೃಹತ್ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ದೊಡ್ಡ ಸಭಾಂಗಣದಲ್ಲಿಯೇ ಪರದೆ ಕಟ್ಟಿಕೊಂಡು ಕೆಲಸ ಮಾಡುವ ದುಃಸ್ಥಿತಿ ಇದೆ. ಇದು ಒಂದೇ ಸಮಸ್ಯೆಯಾದರೆ ಜಿಲ್ಲೆಯಲ್ಲಿ ಸುಮಾರು 370ಕ್ಕೂ ಅಧಿಕ ತರಗತಿ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ತೆರವು ಮಾಡಬೇಕಾದ ಪರಿಸ್ಥಿತಿಯಲ್ಲಿವೆ. ಸುಮಾರು ಮೂರು ಸಾವಿರ ಕೊಠಡಿಗಳ ದುರಸ್ತಿಗೆ ಕಾದು ಕುಳಿತಿವೆ. ಮಳೆಗಾಲ ಬಂದರೆ ಮಕ್ಕಳು ಜೀವ ಕೈಯಲ್ಲಿ ಹಿಡಿದು ಕೂಡುವ ಸ್ಥಿತಿ ಇದೆ.
ದುರಸ್ತಿಯಲ್ಲಿಯೇ ಕಾಲಕ್ಷೇಪ
ಕೆಲವೊಂದು ಇಲಾಖೆಗಳು ಕಟ್ಟಡಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ವರದಿ ಕೇಳಿ ಅರ್ಜಿ ಸಲ್ಲಿಸುತ್ತವೆ. ಪರಿಶೀಲಿಸುವ ಅಧಿಕಾರಿಗಳು ದುರಸ್ತಿ ಮಾಡಿ ಮುಂದುವರಿಸುವಂತೆಯೇ ಹೇಳುತ್ತಿದ್ದಾರೆ. ಇದರಿಂದ ಸಂಪೂರ್ಣ ಕಟ್ಟಡ ತೆರವುಗೊಳಿಸುವುದಾಗಲಿ, ಹೊಸ ಕಟ್ಟಡ ಕಟ್ಟುವ ಪ್ರಕ್ರಿಯೆ ಇಲ್ಲದಾಗಿದೆ. ಇನ್ನೂ ಲೋಕೋಪಯೋಗಿ ಇಲಾಖೆಗೆ ಸಲ್ಲಿಕೆಯಾಗುವ ಬಹುತೇಕ ಅರ್ಜಿಗಳಲ್ಲಿ ಶಾಲಾ ಕಟ್ಟಡಗಳಿಗೆ ಸಂಬಂಧಿಸಿದ್ದೇ ಹೆಚ್ಚಾಗಿರುತ್ತದೆ.
ಬಾಡಿಗೆ ಮನೆಗಳೇ ಗತಿ
ನಗರದಲ್ಲಿ ಕೆಲವೊಂದು ಇಲಾಖೆಗಳ ಜಿಲ್ಲಾಮಟ್ಟದ ಕಚೇರಿಗಳಿಗೆ ಸ್ವಂತ ಕಟ್ಟಡಗಳಿವೆ. ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಲೋಕೋಪಯೋಗಿ ಇಲಾಖೆ, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸೇರಿದಂತೆ ಕೆಲವೊಂದು ಇಲಾಖೆಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಬಕಾರಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸ್ವಂತ ಕಟ್ಟಡವಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸ್ವಂತ ಕಟ್ಟಡವಿಲ್ಲದೇ ರಂಗಮಂದಿರದ ಮೂಲೆಯೊಂದರಲ್ಲಿ ಕೆಲಸ ಮಾಡುತ್ತಿದೆ. ಕೆಲವೊಂದು ಇಲಾಖೆಗಳಿಗೆ ದುಬಾರಿ ಬಾಡಿಗೆ ಕಟ್ಟಡಲಾಗದ ಕಾರಣ ಸಂದಿ ಗೊಂದಿಗಳಲ್ಲಿ ಚಿಕ್ಕ ಮನೆಗಳಲ್ಲಿ ಕೆಲಸ ಮಾಡುತ್ತಿವೆ. ಪ್ರವಾಸೋದ್ಯಮ ಇಲಾಖೆ ಕಚೇರಿ ಹುಡುಕುವುದೇ ಸವಾಲು ಎನ್ನುವಂಥ ಜಾಗದಲ್ಲಿದೆ.
ಸರ್ಕಾರಿ ಕಚೇರಿಗಳ ಸ್ವಂತ ಕಟ್ಟಡಗಳ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸಿಲ್ಲ. ಶಿಥಿಲಗೊಂಡ ಕಟ್ಟಡಗಳಿದ್ದರೆ ಸಂಬಂಧಿಸಿದ ಇಲಾಖೆಯವರೇ ನೇರವಾಗಿ ಪ್ರಸ್ತಾವನೆ ಸಲ್ಲಿಸುತ್ತಾರೆ. -ಡಾ| ಕೆ.ಆರ್.ದುರಗೇಶ, ಎಡಿಸಿ, ರಾಯಚೂರು
ಯಾವುದಾದರೂ ಕಚೇರಿಯ ಸಾಮರ್ಥ್ಯದ ವರದಿ ನೀಡಲು ಸಾಕಷ್ಟು ಇಲಾಖೆಗಳು ಅರ್ಜಿ ಸಲ್ಲಿಸುತ್ತವೆ. ನಮ್ಮ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡುತ್ತಾರೆ. ಆದರೆ, ನಾವು ಯಾವುದೇ ಅಂಕಿಸಂಖ್ಯೆ ಸಂಗ್ರಹಿಸಿಲ್ಲ. -ಚನ್ನಬಸಪ್ಪ ಮೆಕಾಲೆ, ಎಇಇ, ಲೋಕೊಪಯೋಗಿ ಇಲಾಖೆ
-ಸಿದ್ಧಯ್ಯಸ್ವಾಮಿ ಕುಕನೂರು