ತೇರದಾಳ: ಪಟ್ಟಣದ ಶಿಕ್ಷಕರ ಕಾಲೋನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಡೆಯಲ್ಲಿ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ.
Advertisement
ಶಿಕ್ಷಕರ ಕಾಲೋನಿಯಲ್ಲಿ ನೀರಿಗಾಗಿ ಪುರಸಭೆ ಮಾಡಿದ ನಲ್ಲಿ ವ್ಯವಸ್ಥೆ ಹೊರತುಪಡಿಸಿ ಕೊಳವೆ ಬಾವಿ ಅಥವಾ ಸಿಸ್ಟರ್ನ್ಗಳ ಯಾವ ಪರ್ಯಾಯ ವ್ಯವಸ್ಥೆಗಳಿಲ್ಲ. ಕೃಷ್ಣಾ ನದಿ ಬತ್ತಿದ್ದು, ಜೀವಜಲ ನೀರಿನ ಕೊರತೆ ತೀವ್ರತರವಾಗಿದೆ. ಶಿಕ್ಷಕ ಕಾಲೋನಿಯಲ್ಲಿ ಹೆಚ್ಚಿನ ಜನ ನಿವೃತ್ತರು ಹಾಗೂ ವಯೋವೃದ್ಧರು ಇದ್ದಾರೆ. ಟ್ಯಾಂಕರ್‌ಗಳ ಮೂಲಕ ನೀರು ಹಾಕಿಸಿಕೊಂಡರೆ, ಅವರು ಕೇಳಿದಷ್ಟು ದುಬಾರಿ ಹಣ ತೆರಬೇಕಾದ ದುಸ್ಥಿತಿ ಬಂದೊದಗಿದೆ. ಈ ಕುರಿತು ಕಾಲೋನಿಯ ನಿವಾಸಿಗಳು ಜಿಲ್ಲಾಧಿಕಾರಿ, ಪುರಸಭೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಪಟ್ಟಣದ ಅನೇಕ ವಾರ್ಡ್ ಗಳಲ್ಲಿ ಕೊಳವೆಬಾವಿ, ಸಿಸ್ಟರ್ನ್ ಗಳಿರುವುದರಿಂದ ಜೀವಜಲದ ಸಮಸ್ಯೆ ಇಲ್ಲ. ವಾರ್ಡ ನಂಬರ್ 1ರ ಕುಂಬಾರ ಗಲ್ಲಿಯಲ್ಲಿನ ನೀರಿನ ಸಮಸ್ಯೆ ಪರಿಹಾರವಾಗಿದೆ. ಕೆರೆಯ ಎದುರಿಗೆ ಮಹಾದೇವ ದೇವಸ್ಥಾನದ ಮುಂದೆ ಹೊಸ ಕೊಳವೆಬಾವಿ ತೋಡಿ,ದೂರದ ಕುಂಬಾರ ಗಲ್ಲಿಗೆ ಪೈಪ್‌ಲೈನ್ ಜೋಡಣೆ ಮಾಡಿ, ನೀರು ಪೂರೈಸಲಾಗಿದೆ.
ಕೃಷ್ಣೆಯ ಒಡಲು ಹನಿ ನೀರು ಸಹ ಇಲ್ಲದೆ ಸಂಪೂರ್ಣ ಬತ್ತಿ ಹೋಗಿದೆ. ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಬೆಳೆದು ನಿಂತ ಅಲ್ಪ-ಸ್ವಲ್ಪ ಬೆಳೆಗಳು ಕಮರುತ್ತಿವೆ. ಮಹಾರಾಷ್ಟ್ರ ರಾಜ್ಯದ ಕೋಯ್ನಾ ಜಲಾಶಯದಿಂದ ನೀರು ಬಿಡಿಸಲು ವಿನಂತಿಸಲಾಗಿದೆ. ಆದರೆ, ನೀರು ಬರುವ ಕುರಿತು ಯಾವುದೇ ಖಚಿತತೆ ಇಲ್ಲದಿರುವುದರಿಂದ ರೈತರಲ್ಲಿ ಆತಂಕ ಮೂಡಿದೆ.
Related Articles
Advertisement
ನಮ್ಮ 23ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆಯಿಲ್ಲ. ಇಲ್ಲಿನ ಹೊಸ ಹಾಗೂ ಹಳೆಯ ಕೊಳವೆಬಾವಿಗಳಿಗೆ ನೀರಿದೆ. ವಾರ್ಡಿನ ಎಲ್ಲರಿಗೂ ಸಾಕಷ್ಟು ನೀರಿನ ಲಭ್ಯತೆಯಿದೆ. ಹೊಸ ಕೊಳವೆ ಬಾವಿಗೆ ನೀರೆತ್ತುವ ಮೋಟರ್ ಅಳವಡಿಸಬೇಕಾಗಿದೆ.-ಮಹಾದೇವಿ ರಾಮಪ್ಪ ಗಸ್ತಿ,ಪುರಸಭೆ ಸದಸ್ಯರು, ತೇರದಾಳ.
ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿರುವೆ. ನಗರದ ಶಿಕ್ಷಕರ ಕಾಲೋನಿ, 3ನೇ ಕೆನಾಲ ಬಳಿಯ ನಿವಾಸಿಗರಿಗೆ ಹಾಗೂ ಹಳಿಂಗಳಿ ರಸ್ತೆಯಲ್ಲಿನ ಜನರಿಗೆ ಮಾತ್ರ ನೀರಿನ ತೊಂದರೆಯಿದೆ. ಸಮೀಪದ ಕೊಳವೆ ಬಾವಿಗಳಿಂದ ಪೈಪ್‌ಲೈನ್ ಮೂಲಕ ನೀರು ಪೂರೈಕೆಗೆ ಪ್ರಯತ್ನಿಸಲಾಗುತ್ತಿದೆ. –ಮಹಾವೀರ ಬೋರನ್ನವರ, ಮುಖ್ಯಾಧಿಕಾರಿ, ತೇರದಾಳ ಪುರಸಭೆ.
•ಬಿ.ಟಿ. ಪತ್ತಾರ