Advertisement

ನೀರು ಪೋಲು ಮಾಡಿದರೆ ಕ್ರಿಮಿನಲ್‌ ಖಟ್ಲೆ

12:13 PM Dec 16, 2018 | Team Udayavani |

ಹುಮನಾಬಾದ: ಜಲ ಅಮೂಲ್ಯ. ಅದನ್ನು ವ್ಯರ್ಥ ಪೋಲಾಗಿಸುವುದು ಸರಿಯಲ್ಲ. ಈ ವಿಷಯ ಗಂಭೀರವಾಗಿ
ಪರಗಣಿಸದೇ ಯಾರಾದರೂ ನಲ್ಲಿ ನೀರನ್ನು ಚರಂಡಿಗೆ ಬಿಟ್ಟು ಪೋಲಾಗಿಸುತ್ತಿರುವ ಕುರಿತು ದೂರು ಬಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್‌ ಖಟ್ಲೆ ಹೂಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ್‌ ಕಟ್ಟುನಿಟ್ಟಿನ ಆದೇಶ ನೀಡಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತ ಸಭಾಂಗಣದಲ್ಲಿ ಶನಿವಾರ ಬರ ನಿರ್ವಹಣೆ ಕುರಿತು ನಡೆದ ತಾಲೂಕು ಮಟ್ಟದ ಪರಾಮರ್ಶೆ ಸಭೆಯಲ್ಲಿ ಅವರು ಮಾತನಾಡಿದರು. ನೀರು ಸಮರ್ಪಕ ನಿರ್ವಹಣೆ ವಿಷಯ ಗಂಭೀರ ಪರಗಣಿಸದಿದ್ದರೇ
ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮರ್ಪಕ ನಿರ್ವಹಣೆ ಉದ್ದೇಶದಿಂದ ರಚಿಸಲಾದ ಗ್ರಾಮ ಬರ ನಿರ್ವಹಣೆ ಸಮಿತಿ ಪದಾಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿನೀಡಿ, ವಸ್ತುಸ್ಥಿತಿ ಪರಿಶೀಲಿಸಬೇಕು ಎಂದರು. ನೀರು ವ್ಯರ್ಥ ಪೋಲಾಗುವುದನ್ನು ತಪ್ಪಿಸುವುದಕ್ಕಾಗಿ ಮಳೆ ಕುಯಿಲು ನಿರ್ಮಿಸಿಕೊಳ್ಳಲು ಪ್ರತಿಯೊಬ್ಬರಿಗೂ ಅಗತ್ಯ ಮಾರ್ಗದರ್ಶನ ನೀಡಬೇಕು.

ಗ್ರಾಮೀಣ ಹಾಗೂ ನಗರ ಪ್ರದೇಶದ ಜನ ನೀರನ್ನು ವ್ಯರ್ಥವಾಗಿ ಪೋಲಾಗಿಸದೇ ಸಂಗ್ರಹಿಸಿದ ನಂತರ ಕಡ್ಡಾಯವಾಗಿ ನಲ್ಲಿ ಮುಚ್ಚಬೇಕು. ಎಲ್ಲಕ್ಕೂ ಮಿಗಿಲಾಗಿ ಉದ್ಯೋಗ ಅರಸಿ ಬರುವ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ವಾಪಸ್‌ ಕಳಿಸುವುದನ್ನು ಸಹಿಸುವುದಿಲ್ಲ. ಈ ಎಲ್ಲದರ ಜೊತೆಗೆ ಕೆಲಸ ನೀಡಿದ ನಂತರ ಕೂಲಿಗಾಗಿ ಕಾರ್ಮಿಕರನ್ನು ಅನಗತ್ಯವಾಗಿ ಅಲೆದಾಡಿಸದೇ ಸ್ಥಳದಲ್ಲೇ ಪಾವತಿಸುವ ಮೂಲಕ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸಬೇಕು ಎಂದರು.

ಮಾರ್ಚ್‌ ನಂತರ ಗಂಭೀರ: ಸದ್ಯ ನೀರಿನ ಸಮಸ್ಯೆ ಅಷ್ಟು ಗಂಭೀರವಾಗಿಲ್ಲ. ಆದರೇ ಮಾರ್ಚ್‌ ನಂತರ ಖಂಡಿತ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಸೆಪ್ಟೆಂಬರ್‌-2, ಅಕ್ಟೋಬರ್‌ನಲ್ಲಿ-2 ತಾಲೂಕು ಬರ ವ್ಯಾಪ್ತಿಗೆ  ಸೇರ್ಪಡೆಯಾಗಿವೆ. ಬರುವ ದಿನಗಳಲ್ಲಿ ಇನ್ನೊಂದು ತಾಲೂಕಿನಲ್ಲೂ ನೀರಿನ ಸಮಸ್ಯೆ ಗಂಭೀರ ಸ್ವರೂಪ
ಪಡೆಯುವ ಸಾಧ್ಯತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

Advertisement

ಮೇವು ಖರೀದಿಸಲು ಸಿದ್ಧ: ಜಿಲ್ಲೆಯಲ್ಲಿ ಸದ್ಯ ಮೇವಿನ ಕೊರತೆ ಇಲ್ಲ. ಆದರೇ ಮಾರ್ಚ್‌ ನಂತರ ಸಮಸ್ಯೆ ಉದ್ಭವ
ಆದರೂ ನಿಭಾಯಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಜಮೀನು ಮತ್ತು ನೀರಿನ ಮೂಲ ಹೊಂದಿರುವವರು ತಮ್ಮ ಜಮೀನಿನಲ್ಲಿ ಮೇವು ಬೆಳೆಯಲು ಸಿದ್ಧರಿದ್ದಲ್ಲಿ ಅಗತ್ಯ
ಬೀಜ ಪೂರೈಸುವುದರ ಜೊತೆಗೆ ಹೆಚ್ಚಾದ ಮೇವು ಖರೀದಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು. ಉಪವಿಭಾಗಾಧಿಕಾರಿ ಜ್ಞಾನೇಶ್ವರ ಗಂಗವರ, ಹೆಚ್ಚುವರಿ ಜಿಲ್ಲಾಧಿಕಾರಿ ಗುರುದತ್ತ, ಬಲಭೀಮ
ಕಾಂಬ್ಳೆ, ತಹಶೀಲ್ದಾರ್‌ ಡಿ.ಎಂ.ಪಾಣಿ ಇದ್ದರು. ಎಸ್‌ಬಿಎಂ ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಗೌತಮ ಅರಳಿ
ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರ ಬಯಸದೇ ಬರುವ ಶಾಪ. ನಮ್ಮಲ್ಲಿನ ಸ್ವಾರ್ಥ ಎಲ್ಲೆ ಮೀರಿದ್ದರಿಂದಲೇ ಅದು ನಮ್ಮನ್ನು ಕಾಡುತ್ತದೆ. ನಮ್ಮ
ಮಧ್ಯ ಈಗಲೂ ಎರಡು ಹೊತ್ತಿನ ಅನ್ನಕ್ಕೂ ಗತಿ ಇಲ್ಲದ ಅದೆಷ್ಟೋ ಜನರಿದ್ದಾರೆ. ಅಂಥ ಕಡು ಬಡವರನ್ನು ಬರ ಪರಿಶೀಲನಾ ಸಮಿತಿ ಪತ್ತೆಹಚ್ಚಿ ಅಗತ್ಯ ಉದ್ಯೋಗ ಒದಗಿಸಿ ಅವರ ಪುಣ್ಯಕ್ಕೆ ಪಾತ್ರರಾಗಬೇಕು. ಜಲ ಅಮೂಲ್ಯ ಅದನ್ನು ಹಿತ-ಮಿತವಾಗಿ ಬಳಸಬೇಕು. ಈ ವಿಷಯ ಗಂಭೀರವಾಗಿ ಪರಿಗಣಿಸದವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಹಿಂದೇಟು ಹಾಕುವುದಿಲ್ಲ.
 ಡಾ| ಎಚ್‌.ಆರ್‌.ಮಹಾದೇವ, ಜಿಲ್ಲಾಧಿಕಾರಿಗಳು

ಬರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರದ ಸಂಬಳ ಪಡೆಯುವ ಪ್ರತಿಯೊಬ್ಬ ಸಿಬ್ಬಂದಿ ಸಹ ಅದಕ್ಕೆ ಬದ್ಧವಾಗಿರಬೇಕು. ಈ ಸಭೆ ಪುರಾಣದಂತೆ ಕೇಳಿ ಹೋಗದೇ ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲು ಯತ್ನಿಸುವ ಮೂಲಕ ಸರ್ಕಾರದ ಚಿಂತನೆ ಯಶಸ್ವಿಗೊಳಿಸುವುದಕ್ಕಾಗಿ ಸಮಿತಿ ಪದಾಧಿಕಾರಿಗಳು ಶ್ರಮಿಸಬೇಕು. ಉದ್ಯೋಗ ಖಾತರಿ, ನೀರು ಮತ್ತು ಮೇವು ನಿರ್ವಹಣೆಯನ್ನು ಅತ್ಯಂತ ಕಾಳಜಿಪೂರ್ವಕ ನಿಭಾಯಿಸಬೇಕು.
 ಮಹಾಂತೇಶ ಬೀಳಗಿ, ಜಿಪಂ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.