Advertisement

ಏತ ನೀರಾವರಿ ಕಾಮಗಾರಿಗೆ ಆಮೆಗತಿ

04:11 PM Apr 14, 2022 | Team Udayavani |

ಕೊಪ್ಪಳ: ಬಹು ನಿರೀಕ್ಷಿತ ತಾಲೂಕಿನ ಬಹದ್ದೂರಬಂಡಿ ಏತ ನೀರಾವರಿ ಯೋಜನೆಯ ಕಾಮಗಾರಿಯು ತುಂಬಾ ನಿಧಾನಗತಿಯಲ್ಲಿ ನಡೆದಿದೆ. ಯೋಜನೆಗೆ 2018ರಲ್ಲೇ ಚಾಲನೆ ದೊರೆತಿದ್ದರೂ ನಾಲ್ಕು ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ.

Advertisement

ಈಗಷ್ಟೇ ಮೇನ್‌ ರೈಸಿಂಗ್‌ ಪೈಪ್‌ಲೈನ್‌ ಕಾಮಗಾರಿ ನಡೆದಿದೆ. ಇನ್ನು ಕಾಲುವೆ ಡಿಸೈನ್‌ಗೆ ಅನುಮೋದನೆಗೆ ಸಲ್ಲಿಸಲಾಗಿದೆ. ನೀರಾವರಿ ಯೋಜನೆಯ ನಿಧಾನಗತಿ ರೈತಾಪಿ ವಲಯದಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದು. ಬಹದ್ದೂರ ಬಂಡಿ ಏತ ನೀರಾವರಿ ಯೋಜನೆ ಕೊಪ್ಪಳ ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಏತ ನೀರಾವರಿ ಯೋಜನೆಯಾಗಿದ್ದು, 14 ಸಾವಿರ ಎಕರೆ ಜಮೀನುಗಳಿಗೆ ನೀರುಣಿಸುವ ಯೋಜನೆಯಾಗಿದೆ. ಈ ಭಾಗದ ರೈತರ ಹಲವು ವರ್ಷಗಳ ಹೋರಾಟದ ಫಲವಾಗಿ ಯೋಜನೆಗೆ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಘೋಷಣೆ ಮಾಡಿದೆ.

ಯೋಜನೆಗೆ 188 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದು, 2018ರಲ್ಲಿ ಸಿದ್ದರಾಮಯ್ಯ ಅವರು ಕೊಪ್ಪಳದಲ್ಲೇ ಯೋಜನೆಗೆ ಅಡಿಗಲ್ಲು ನೆರವೇರಿಸಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದ್ದರು. ಆದರೆ ಇಲ್ಲಿ ಅ ಧಿಕಾರಿಗಳ ನಿರ್ಲಕ್ಷವೋ ಅಥವಾ ಬದಲಾದ ಸರ್ಕಾರದಿಂದ ವಿಳಂಬ ಧೋರಣೆಯೋ ಯೋಜನೆ ವೇಗ ಪಡೆಯಲೇ ಇಲ್ಲ. ಯೋಜನೆಗೆ ಎಡದಂಡೆ ಭಾಗದಲ್ಲಿನ ಚೇಂಬರ್‌ ವಿಚಾರಕ್ಕೆ ರೈತರ ಆಕ್ಷೇಪ ಬಿಟ್ಟರೆ ಮತ್ತಾವ ಅಡೆತಡೆಗಳೂ ಇದ್ದಿರಲಿಲ್ಲ. ಆದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆದಿದೆ.

ಅಚ್ಚರಿಯಂದರೆ 18 ತಿಂಗಳ ಕಾಲ ಮಿತಿಯಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ ನಾಲ್ಕು ವರ್ಷ ಮುಗಿಯುತ್ತಾ ಬಂದರೂ ಕಾಮಗಾರಿ ಬಹುಪಾಲು ಇನ್ನೂ ನಡೆದೇ ಇಲ್ಲ. ತಾಲೂಕಿನ ಮುಂಡರಗಿ ಸಮೀಪದ ತುಂಗಭದ್ರಾ ಹಿನ್ನೀರಿನಲ್ಲಿ ಜಾಕ್‌ವೆಲ್‌ನಲ್ಲಿ ಸ್ವಲ್ಪ ಕಾಮಗಾರಿ ನಡೆದಿದೆ. ಮೇನ್‌ ಪೈಪ್‌ಲೈನ್‌ ಕಾಮಗಾರಿ ಅಲ್ಲಲ್ಲಿ ನಡೆದಿದೆ. ಎರಡು ಕಡೆ ಚೇಂಬರ್‌ ನಿರ್ಮಾಣ ಮಾಡಬೇಕಿದೆ. ಆದರೆ ಇಲ್ಲಿವರೆಗೂ ಒಂದೇ ಚೇಂಬರ್‌ ನಿರ್ಮಿಸಲಾಗಿದೆ. ಇನ್ನೊಂದನ್ನು ನಿರ್ಮಿಸುವ ಕಾರ್ಯವೂ ಆಮೆಗತಿಯಲ್ಲಿದೆ.

Advertisement

ಕಾಲುವೆ ನಿರ್ಮಿಸಬೇಕಿದೆ: ಎರಡು ಚೇಂಬರ್‌ ನಿರ್ಮಿಸಿದ ಬಳಿಕ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲು ಮುಖ್ಯ ಹಾಗೂ ಉಪ ಕಾಲುವೆಗಳನ್ನು ನಿರ್ಮಿಸಬೇಕಿದೆ. ಕಾಲುವೆಗಳ ಡಿಸೈನ್‌ ಈಗಷ್ಟೇ ನೀರಾವರಿ ಇಲಾಖೆಗೆ ಸಲ್ಲಿಕೆಯಾಗಿದೆ.

ಇನ್ನು ಅನುಮೋದನೆಯೂ ದೊರೆತಿಲ್ಲ. ಇದಕ್ಕೆ ಯಾವಾಗ ಸಮ್ಮತಿ ಸಿಗುವುದೋ? ಆ ಕಾಲುವೆ ಕಾಮಗಾರಿಗಳು ಯಾವಾಗ ನಿರ್ಮಾಣವಾಗಾಗಲಿವೆಯೋ? ಮತ್ತ್ಯಾವಾಗ ರೈತರ ಜಮೀನಿಗೆ ನೀರು ಹರಿದು ಬರುವುದೋ? ಜಾಕವೆಲ್‌ನಲ್ಲಿ ವಿದ್ಯುತ್‌ ಪೂರೈಕೆ ಘಟಕ ಯಾವಾಗ ನಿರ್ಮಿಸುವರೋ ತಿಳಿಯದಾಗಿದೆ. ಅಧಿಕಾರಿಗಳ, ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆಗೆ ರೈತಾಪಿ ವಲಯ ತುಂಬಾ ಅಸಮಾಧಾನ ವ್ಯಕ್ತಪಡಿಸುತ್ತಿದೆ.

ಗುತ್ತಿಗೆದಾರರು ಕಾಮಗಾರಿಯನ್ನು ನಿಧಾನಗತಿಯಲ್ಲಿ ನಿರ್ಮಿಸಲಾಗುತ್ತಿದೆ ಎನ್ನುವ ಆಪಾದನೆ ಕೇಳಿ ಬಂದಿವೆ. ಇಲ್ಲಿ ಗುತ್ತಿಗೆದಾರನ ವಿಳಂಬ ಧೋರಣೆಯೋ? ಅಧಿಕಾರಿಗಳ ನಿರ್ಲಕ್ಷ್ಯವೋ? ಸರ್ಕಾರದಿಂದಲೇ ನಿರ್ಲಕ್ಷ್ಯ ಭಾವನೆಯೋ ಯಾವುದು ತಿಳಿಯುತ್ತಿಲ್ಲ. ಬೇಗನೆ ಕಾಲುವೆ, ಚೇಂಬರ್‌ ನಿರ್ಮಿಸಿ ರೈತರ ಜಮೀನಿಗೆ ನೀರು ಹರಿಸಿ ಎಂದು ಅನ್ನದಾತ ವಲಯ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಒತ್ತಾಯ ಮಾಡುತ್ತಿದೆ.

ಬಹದ್ದೂರ ಬಂಡಿ ಏತ ನೀರಾವರಿ ಯೋಜನೆಯಡಿ ಮೇನ್‌ ರೈಸಿಂಗ್‌ ಪೈಪ್‌ಲೈನ್‌ ಕಾಮಗಾಗಿ ಮುಗಿಯುವ ಹಂತಕ್ಕೆ ಬಂದಿದೆ. ಕಾಲುವೆ ನಿರ್ಮಾಣಕ್ಕೆ ಡಿಸೈನ್‌ ಅನುಮತಿಗೆ ಇಲಾಖೆಗೆ ಸಲ್ಲಿಸಿದೆ. ಅಲ್ಲಿಂದ ಅನುಮತಿ ದೊರೆತ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಒಂದು ಚೇಂಬರ್‌ ವಿಚಾರಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ಯೋಜನೆಗೆ ಕಾಲಮಿತಿ ಮುಗಿದಿದ್ದು, ಗುತ್ತಿಗೆದಾರನಿಗೆ ಕಾಲವಕಾಶ ನೀಡಿ ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದೇವೆ. –ಶಿವಶಂಕರ್‌, ಎಇಇ ತುಂಗಭದ್ರಾ ಡ್ಯಾಂ, ನೀರಾವರಿ ವಿಭಾಗ

ಬಹದ್ದೂರಬಂಡಿ ಏತ ನೀರಾವರಿ ಯೋಜನೆ ಕಾಮಗಾರಿ ನಿಧಾನಗತಿ ಯಲ್ಲಿ ನಡೆದಿರುವ ವಿಚಾರ ನನ್ನ ಗಮನಕ್ಕೆ ಇದೆ. ಹಾಗಾಗಿ ಎಂಜನಿಯರ್‌ಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ಅಧಿ ಕಾರಿಗಳಿಂದ ಮಾಹಿತಿ ಪಡೆಯುವೆ. ಅಲ್ಲದೇ, ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರನು ಅನಾರೋಗ್ಯದಿಂದ ತೊಂದರೆಯಲ್ಲಿದ್ದಾನಂತೆ. ಹಾಗಾಗಿ ವಿಳಂಬ ಎಂದೆನ್ನಲಾಗುತ್ತಿದೆ. ಈ ಬಗ್ಗೆ ಸಭೆಯಲ್ಲಿ ವಿಚಾರಿಸುವೆ. -ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ                

  -ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next